

ನಾಗರಮುನ್ನೋಳಿ: ಕಂಕಣವಾಡಿ ಪಟ್ಟಣದ ಗಾಯರಾಣ ಜಾಗದಲ್ಲಿ 30 ವರ್ಷಗಳಿಂದ ಮನೆ ನಿರ್ಮಾಣ ಮಾಡಿಕೊಂಡಿರುವ ಬಡವರನ್ನು ಒಕ್ಕಲೆಬ್ಬಿಸಲು ಮುಂದಾಗಿರುವ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಶಾಸಕ ಡಿ.ಎಂ. ಐಹೊಳೆ ಹೇಳಿದ್ದಾರೆ.
ಸಮೀಪದ ಹಂಚಿನಾಳ, ಜೈನಾಪುರ, ಬಿದರೋಳ್ಳಿ ಗ್ರಾಮದಲ್ಲಿ ವಿವಿಧ ಕಾಮಗಾರಿಗಳಿಗೆ ಚಾಲನೆ ನೀಡಿ ಮಾತನಾಡಿ, 30 ವರ್ಷಗಳಿಂದ ಎಸ್.ಸಿ., ಎಸ್.ಟಿ ಜನರು ಮನೆ ನಿರ್ಮಿಸಿಕೊಂಡು ಬದಕು ಕಟ್ಟಿಕೊಂಡಿದ್ದಾರೆ. ಇಲ್ಲಿನ ಮನೆಗಳನ್ನು ತೆರವುಗೊಳಿಸದಂತೆ ಈಗಾಗಲೇ ಜಿಲ್ಲಾಧಿಕಾರಿಗಳ ಗಮನಕ್ಕೆ ತರಲಾಗಿದೆ. ಕಂಕಣವಾಡಿ ಪುರಸಭೆ ಮುಖ್ಯಾಧಿಕಾರಿ ವಿನಾಕಾರಣ ಬಡವರನ್ನು ಒಕ್ಕಲೆಬ್ಬಿಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಜತೆಗೆ ಗುತ್ತಿಗೆದಾರರು ಗುಣಮಟ್ಟದ ಕಾಮಗಾರಿಗೆ ಒತ್ತು ನೀಡುವಂತೆ ಸೂಚಿಸಿದರು.
ಜಿಪಂ ಸದಸ್ಯ ಪವನ ಕತ್ತಿ, ನಿಂಗಪ್ಪ ಪಕಾಂಡೆ, ಕಲ್ಮೇಶ ರಾಚನವರ, ಸುರೇಶ ಬೆಲ್ಲದ, ಮಹೇಶ ಭಾತೆ, ರಾಯಗೌಡ ಕೆಳಗಿನಮನಿ, ಸದಾಶಿವ ಘೋರ್ಪಡೆ, ನಿಂಗಪ್ಪ ಕುರುಬರ, ರವಿ ಹಿರೇಖೋಡಿ, ವಿಜಯ ಕೋಠಿವಾಲೆ, ಜಯಾನಂದ ಹಿತ್ತಲಮನಿ, ಕಲ್ಲಪ್ಪ ಕಮತೆ, ಮತ್ತಿತರರು ಉಪಸ್ಥಿತರಿದ್ದರು.
ರಾಯಬಾಗ ವರದಿ: ಮತಕ್ಷೇತ್ರದ ತೋಟಪಟ್ಟಿಗಳಲ್ಲಿ ಸಿಸಿ ರಸ್ತೆ ನಿರ್ಮಿಸುತ್ತಿದ್ದು, ಇದರಿಂದ ರೈತರು ಮತ್ತು ಸಾರ್ವಜನಿಕರಿಗೆ ಹೆಚ್ಚು ಅನುಕೂಲವಾಗಲಿದೆ ಎಂದು ಶಾಸಕ ಡಿ.ಎಂ. ಐಹೊಳೆ ಹೇಳಿದರು. ತಾಲೂಕಿನ ಭಿರಡಿ ಗ್ರಾಮದಲ್ಲಿ ಸಮಾಜ ಕಲ್ಯಾಣ ಇಲಾಖೆ ಅನುದಾನದಲ್ಲಿ ದುಂಡಪ್ಪ ನಿಶಾನಾದಾರ ತೋಟದಿಂದ ಯಲ್ಲಪ್ಪ ಕೊರವಿ ತೋಟದವರೆಗೆ ಹಾಗೂ ಭಿರಡಿ-ಜಲಾಲಪುರ ರಸ್ತೆಯಿಂದ ಕಾಂಬಳೆ ತೋಟದವರೆಗಿನ ರಸ್ತೆ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದರು. ಶ್ರೀಧರ ಕುಡಚೆ, ಮಹಾದೇವ ಬೊರಗಾಂವೆ, ಸದಾ ಶಿವ ಘೋರ್ಪಡೆ, ಮುರಗೇಶ ನಿಶಾನಾದಾರ, ಸುಭಾಷ ನಿಡೊಣಿ, ರಾಮಚಂದ್ರ ನಿಶಾನಾದಾರ, ಕಲ್ಮೇಶ ನಿಡೊಣಿ, ಲಕ್ಷ್ಮಣ ಯಲಗುದ್ರಿ, ದುಂಡಪ್ಪ ನಿಶಾನಾದಾರ ಮತ್ತಿತರರು ಉಪಸ್ಥಿತರಿದ್ದರು.