ಹುಬ್ಬಳ್ಳಿ: ಆಂಬುಲನ್ಸ್ ಅನ್ನು ಉಳಿಸಿ ಕರ್ನಾಟಕವನ್ನು ರಕ್ಷಿಸಿ ಎಂಬ ತುರ್ತು ಬೇಡಿಕೆಯನ್ನು ಕರ್ನಾಟಕ ರಾಜ್ಯ ಸರಕಾರಿ ದಿನಗೂಲಿ ನೌಕರರ ಮಹಾಮಂಡಲದ ಅಧ್ಯಕ್ಷ ಡಾ. ಕೆ.ಎಸ್. ಶರ್ಮಾ ಮುಂದಿಟ್ಟಿದ್ದಾರೆ.
ಈ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿರುವ ಅವರು, ಸಿಕಂದರಾಬಾದ್ ಮೂಲದ ಖಾಸಗಿ ಸಂಸ್ಥೆಯೊಡನೆ ಕರ್ನಾಟಕ ರಾಜ್ಯ ಸರ್ಕಾರವು ಮಾರ್ಚ್ 2008ರಲ್ಲಿ ಮಾಡಿಕೊಂಡಿರುವ ಒಡಂಬಡಿಕೆಯಲ್ಲಿ 108 ಆಂಬುಲೆನ್ಸ್ ಹಾಗೂ ಇತರ ಎಮರ್ಜೆನ್ಸಿ ಆರೋಗ್ಯ ಸೇವೆಗಳನ್ನು ನಡೆಸಲು ಅವರಿಗೆ ಒಪ್ಪಿಸಿದೆ.
ಇಡೀ ಸೇವೆಗಳ ಖರ್ಚು-ವೆಚ್ಚಗಳಿಗೆ ಬೇಕಾದ ಹಣವನ್ನು ಸರ್ಕಾರ ಭರಿಸುವುದಾಗಿ ಒಪ್ಪಂದ ಮಾಡಿಕೊಂಡಿದೆ. ಕಳೆದ 16 ವರ್ಷಗಳಲ್ಲಿ ಈ ಒಪ್ಪಂದದ ಮೇರೆಗೆ ತುರ್ತು ಸೇವೆ ನೀಡುತ್ತಿರುವ ಸಂಸ್ಥೆಯು ಒಂದೆಡೆ ಆಂಬುಲೆನ್ಸ್ ಹಾಗೂ ಇತರ ತುರ್ತು ಸೇವೆಗಳ ನಿರ್ವಹಣೆಗಾಗಿ ನೇಮಕ ಮಾಡಿಕೊಂಡಿರುವ ನೌಕರರಿಗೆ ಕಾನೂನುಬದ್ಧ ವೇತನ ನೀಡುತ್ತಿಲ್ಲ.
ವರ್ಲ್ಡ್ ಹೆಲ್ತ್ ಆರ್ಗನೈಸೇಷನ್ ಪ್ರತಿ ರಾಷ್ಟ್ರದಲ್ಲಿ ತುರ್ತು ಸೇವೆಗಳನ್ನು ನಡೆಸುವ ಸಲುವಾಗಿ ವಿಧಿಸಿರುವ ಕರಾರುಗಳನ್ನು ಉಲ್ಲಂಘಿಸಿದೆ.
ಕರ್ನಾಟಕ ಸರ್ಕಾರವು ಸಂಸ್ಥೆಯೊಡನೆ ಮಾಡಿಕೊಂಡಿರುವ ಒಪ್ಪಂದ ತಣ ರದ್ದುಗೊಳಿಸಿ, ಸರ್ಕಾರವೇ 108 ಆಂಬುಲೆನ್ಸ್ ತುರ್ತು ಸೇವೆಗಳನ್ನು ನಿರ್ವಹಿಸಲು ಸರ್ಕಾರದ ಒಂದು
ವಿಶೇಷ ಇಲಾಖೆಯಾಗಿ ರಚಿಸಬೇಕು ಎಂದು ಆಗ್ರಹಿಸಿದ್ದಾರೆ.
ಈ ಸಂಬಂಧ ಮುಖ್ಯಮಂತ್ರಿಯವರು ಹಾಗೂ ವಿಧಾನಸಭೆ ಹಾಗೂ ಪರಿಷತ್ತಿನ ಸದಸ್ಯರು ಗಂಭೀರ ಸಮಸ್ಯೆಯನ್ನು ಪರಿಹರಿಸಲು ಅವಶ್ಯ ಕಾನೂನು ಕ್ರಮಗಳನ್ನು ಅಧಿವೇಶನದಲ್ಲೇ ಜಾರಿಗೊಳಿಸಿ ಎಂದು ಮನವಿ ಮಾಡಿಕೊಂಡಿದ್ದಾರೆ.