

ವಿನಯ್ ಉಪ್ಪಿನಂಗಡಿ
ಜನತೆಯ ಆರೋಗ್ಯ ಸಮಸ್ಯೆಗೆ ತುರ್ತು ಸ್ಪಂದನೆ ನೀಡುವ ಸಲುವಾಗಿ ಜಾರಿಯಲ್ಲಿರುವ ಆರೋಗ್ಯ ಕವಚ (108) ಉಚಿತ ಆಂಬುಲೆನ್ಸ್ ಸೇವೆ ಉಪ್ಪಿನಂಗಡಿಯಲ್ಲಿ 2 ತಿಂಗಳಿಂದ ಕಣ್ಮರೆಯಾಗಿದೆ. ರಿಪೇರಿಗೆಂದು ಹೋದ ಆಂಬುಲೆನ್ಸ್ ಇನ್ನೂ ಬಂದಿಲ್ಲ ಎಂಬ ಉತ್ತರ ಕೇಳಿಬರುತ್ತಿದೆ. ಪ್ರತಿಯೊಂದು ಆರೋಗ್ಯ ಸಂಬಂಧಿ ಸೇವೆಗಾಗಿ ದುಬಾರಿ ಖಾಸಗಿ ಆಂಬುಲೆನ್ಸನ್ನು ಅವಲಂಬಿಸಬೇಕಾಗಿದೆ.
ರಾಷ್ಟ್ರೀಯ ಹೆದ್ದಾರಿ ಹೊಂದಿರುವ ಹಾಗೂ ನಾಲ್ಕು ತಾಲೂಕುಗಳ ಗಡಿಗ್ರಾಮಗಳನ್ನು ಹೊಂದಿರುವ ಉಪ್ಪಿನಂಗಡಿ ಪರಿಸರದಲ್ಲಿ ಸಂಭವಿಸಬಹುದಾದ ಅಪಘಾತಗಳ ಸಮಯದಲ್ಲಾಗಲಿ, ಇನ್ನಿತರ ಆರೋಗ್ಯ ಸಂಬಂಧಿ ಸಮಸ್ಯೆಗಳ ಸಮಯದಲ್ಲಾಗಲಿ 108 ಆಂಬುಲೆನ್ಸ್ ಸೇವೆ ಜನತೆಗೆ ಉಪಯುಕ್ತವಾಗಿ ಲಭಿಸುತ್ತಿತ್ತು. ಘಟನಾ ಸ್ಥಳದಿಂದ ಆಸ್ಪತ್ರೆ ತಲುಪುವವರೆಗಿನ ಸೂಕ್ಷ್ಮ ಸಮಯದಲ್ಲಿ ಆಂಬುಲೆನ್ಸ್ ನಲ್ಲಿಯೇ ತಜ್ಞ ಸಿಬ್ಬಂದಿಯಿಂದ ತುರ್ತು ಪ್ರಾಥಮಿಕ ಚಿಕಿತ್ಸೆ ಒದಗಿಸಲಾಗುವ ಕಾರಣಕ್ಕೆ ಈ ಸೇವೆ ಅಕ್ಷರಶಃ ಆರೋಗ್ಯ ರಕ್ಷಕವಾಗಿಯೇ ಕಾರ್ಯನಿರ್ವಹಿಸುತ್ತಿತ್ತು. ಪರಿಣಾಮ ಬಹಳಷ್ಟು ಜೀವರಕ್ಷಣೆ ಕಾರ್ಯ ನಡೆದಿದೆ.
ಇಂಜಿನ್ ಸಮಸ್ಯೆಯ ಕಾರಣಕ್ಕೆ ತಿಂಗಳ ಹಿಂದೆ ರಿಪೇರಿಗೆಂದು ಹೋಗಿರುವ 108 ವಾಹನ ಮತ್ತೆ ಸೇವೆಗೆ ಲಭಿಸಿಲ್ಲ ಎನ್ನುವುದು ವಿಚಾರಿಸಿದಾಗ ತಿಳಿದುಬಂದಿದೆ. ಇಂಜಿನ್ ಸಮಸ್ಯೆ ಬಗೆಹರಿಸಲು ಇನ್ನೂ 20 ದಿನಗಳು ಬೇಕಾಗಬಹುದು. 20 ದಿನಗಳ ಬಳಿಕ ಆರೋಗ್ಯ ಕವಚ ಸೇವೆ ಪುನರಾರಂಭಿಸಲಾಗುವುದು ಗುರುರಾಜ್ ನಾಯಕ್, ಆರೋಗ್ಯ ಕವಚ ವಿಭಾಗದ ಜಿಲ್ಲಾ ವ್ಯವಸ್ಥಾಪಕ ಎರಡು ತಿಂಗಳಿಂದ ಆರೋಗ್ಯ ಕವಚ ಸೇವೆ ಲಭ್ಯವಿಲ್ಲದಿರುವ ಬಗ್ಗೆ ಸಾರ್ವಜನಿಕರಿಂದ ದೂರುಗಳು ಕೇಳಿಬಂದಿವೆ. ವಾಹನವೊಂದರ ಇಂಜಿನ್ ದುರಸ್ತಿಗೆ ತಿಂಗಳುಗಟ್ಟಲೆ ಸಮಯ ಪಡೆಯುವುದು ಇಂದಿನ ವ್ಯವಸ್ಥೆಗೆ ಒಳ್ಳೆಯದಲ್ಲ. ಬಡ ಜನತೆಗೆ ಅನುಕೂಲವಾಗುವ ಸಲುವಾಗಿ ಉಚಿತ ಸೌಲಭ್ಯ ಕಲ್ಪಿಸಿದಾಗ ರಿಪೇರಿ ಕಾರಣ ಮುಂದೊಡ್ಡಿ ಸೇವೆ ನಿರಾಕರಿಸುವುದು ಸರಿಯಲ್ಲ. ವ್ಯವಸ್ಥೆ ಬಗ್ಗೆ ವಿಶ್ವಾಸಾರ್ಹತೆ ಉಳಿಸುವ ಸಲುವಾಗಿ ಆದ್ಯತೆ ಮೇರೆಗೆ ತ್ವರಿತ ರಿಪೇರಿ ಮಾಡಿ ಆಂಬುಲೆನ್ಸ್ ಸೇವೆಗೆ ಒದಗಿಸಬೇಕು. ಇಲ್ಲವಾದರೆ ಬದಲಿ ವಾಹನ ವ್ಯವಸ್ಥೆ ಕಲ್ಪಿಸಬೇಕು. ವಿದ್ಯಾಲಕ್ಷ್ಮೀ ಪ್ರಭು, ಉಪ್ಪಿನಂಗಡಿ ಗ್ರಾಪಂ ಉಪಾಧ್ಯಕ್ಷೆ ಜನರ ಪ್ರಾಣ ಮತ್ತು ಆರೋಗ್ಯ ರಕ್ಷಣೆಗೆ ಪೂರಕವಾಗಿ ಸರ್ಕಾರ ತಂದಿರುವ ಉಚಿತ ಆರೋಗ್ಯ ಕವಚ ಆಂಬುಲೆನ್ಸ್ ಸೇವೆಯನ್ನು ರಿಪೇರಿ ಕಾರಣಕ್ಕೆ ಸ್ಥಗಿತಗೊಳಿಸಿರುವುದು ಸರ್ಕಾರದ ವೈಫಲ್ಯಕ್ಕೆ ಸಾಕ್ಷಿ. ಖಾಸಗಿ ವಾಹನ ಕೆಟ್ಟರೆ ಒಂದೇ ದಿನದಲ್ಲಿ ದುರಸ್ತಿಯಾದರೆ, ಸರ್ಕಾರದ ವಾಹನಕ್ಕೆ ತಿಂಗಳುಗಟ್ಟಲೆ ಸಮಯ ಬೇಕೆನ್ನುವುದು ಅರ್ಥವಿಲ್ಲ. ಆರೋಗ್ಯ ಕವಚ ಇಲ್ಲದೇ ಇದ್ದಲ್ಲಿ ಜನತೆ ಅನಿವಾರ್ಯವಾಗಿ ಖಾಸಗಿ ಆಂಬುಲೆನ್ಸನ್ನು ಹಣ ತೆತ್ತು ಬಳಸಬೇಕಾಗಿದ್ದು, ಇದು ಜನತೆಯನ್ನು ಸುಲಿಯುವ ಕಾರ್ಯತಂತ್ರದ ಹುನ್ನಾರ. ಶಶಿಧರ್ ಉದ್ಯಮಿ https://www.vijayavani.net/inauguration-of-the-new-building-of-vani-educational-institutions https://www.vijayavani.net/talapadi-chengal-six-lane-work-is-almost-complete