

ಬೆಳ್ತಂಗಡಿ: ಅಗ್ನಿ ಆಕಸ್ಮಿಕದಿಂದ ಮೈಸುಟ್ಟುಕೊಂಡಿದ್ದ ಬಾಲಕಿಯನ್ನು ಕಾಪಾಡಲು ಪಣತೊಟ್ಟ ಮೂಡಿಗೆರೆ ಮೂಲದ ಆಂಬುಲೆನ್ಸ್ ಚಾಲಕ, ತನ್ನ ವಾಹನದ ಸೈರನ್ ಕೆಟ್ಟರೂ, ಸತತ ಪ್ರಯತ್ನ ಹಾಗೂ ದ.ಕ ಜಿಲ್ಲೆಯ ಆಂಬುಲೆನ್ಸ್ ಚಾಲಕರ ಸಮಯೋಚಿತ ಸಹಾಯದಿಂದ ಗಾಯಾಳುವನ್ನು ಸೋಮವಾರ ಆಸ್ಪತ್ರೆಗೆ ಸೇರಿಸಿದ್ದಾರೆ.
ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಗೋಣಿಬೀಡು ಹೋಬಳಿಯ ಬಾಲಕಿ ಅಗ್ನಿ ಆಕಸ್ಮಿಕದಿಂದ ಗಂಭೀರ ಗಾಯಗೊಂಡಿದ್ದರು. ಮೂಡಿಗೆರೆ ಮೂಲದ ಆಂಬುಲೆನ್ಸ್ ಚಾಲಕ ಮಂಜುನಾಥ್ ಕೇವಲ 1 ಗಂಟೆ 45 ನಿಮಿಷದಲ್ಲಿ ಬಾಲಕಿಯನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಮೂಡಿಗೆರೆಯಿಂದ ದ.ಕ.ಜಿಲ್ಲೆ ಪ್ರವೇಶಿಸುವ ಸಂದರ್ಭ ಆಂಬುಲೆನ್ಸ್‌ನ ಸೈರನ್ ಕೆಟ್ಟು, ಕೂಡಲೇ ಸಾರ್ವಜನಿಕರೊಬ್ಬರು ತಮ್ಮ ಕಾರಿನ ಮೂಲಕ ಉಜಿರೆವರೆಗೆ ಆಂಬುಲೆನ್ಸ್‌ಗೆ ದಾರಿ ಮಾಡಿಕೊಡಲು ಸಹಕರಿಸಿದರು. ಉಜಿರೆಯಿಂದ ಮಡಂತ್ಯಾರಿನವರೆಗೆ ಆಂಬುಲೆನ್ಸ್ ಚಾಲಕ ಜಲೀಲ್ ಹಾಗೂ ಇಬ್ರಾಹಿಂ ಚಾಲನೆ ಮಾಡುತ್ತಿದ ಗುರುವಾಯನಕೆರೆ ಎಸ್‌ಡಿಪಿಐನ ಆಂಬುಲೆನ್ಸ್ ಹಿಂಭಾಗ ಹಾಗೂ ಮುಂಭಾಗದಲ್ಲಿ ಸಾಗುವ ಮೂಲಕ ಸಹಕರಿಸಿದರು. ಮಡಂತ್ಯಾರಿನಿಂದ ಶಬೀರ್ ಮಡಂತ್ಯಾರ್ ಎಂಬುವರು ಮತ್ತೊಂದು ಆಂಬ್ಯುಲೆನ್ಸ್‌ನಲ್ಲಿ ಬಿ.ಸಿ.ರೋಡ್‌ವರೆಗೆ ದಾರಿಮಾಡಿಕೊಡಲು ಸಹಕರಿಸಿದರು.
ಇಲ್ಲಿಂದ ರಸ್ತೆ ವಿಸ್ತಾರ ಆಗಿರುವುದರಿಂದ ಮಂಜುನಾಥ್ ಅವರ ಆಂಬುಲೆನ್ಸ್ ಸರಾಗವಾಗಿ ಸಾಗಿದೆ. ಬಳಿಕ ಮಂಗಳೂರು ನಗರ ಪ್ರವೇಶಿಸುತ್ತಿದ್ದಂತೆ ಮಂಗಳೂರಿನ ಗಣೇಶ್ ಆಂಬುಲೆನ್ಸ್‌ನವರು ದಾರಿಮಾಡಿಕೊಡುವಲ್ಲಿ ಸಹಕರಿಸಿ, ಬಾಲಕಿಯನ್ನು ಸಕಾಲಕ್ಕೆ ಆಸ್ಪತ್ರೆಗೆ ತಲುಪಿಸುವಲ್ಲಿ ನೆರವಾದರು.