ಆಂಬುಲೆನ್ಸ್ ಇಲ್ಲದೆ 30 ಹಳ್ಳಿ ಜನರ ಪರದಾಟ

centre
Published on

 ವಿಜಯವಾಣಿ ಸುದ್ದಿಜಾಲ ಬೆಂಗಳೂರು ಗ್ರಾಮಾಂತರ

ಹಳ್ಳಿ ಜನರ ತುರ್ತು ಆರೋಗ್ಯ ಸೇವೆಗೆ ನಿಯೋಜಿಸಿದ್ದ ಆಂಬುಲೆನ್ಸ್ ಕಳೆದ ಐದು ವರ್ಷಗಳಿಂದ ಕಣ್ಮರೆಯಾಗಿದೆ, ಯಾವುದೇ ತುರ್ತು ಸಂದರ್ಭದಲ್ಲಿ ಖಾಸಗಿ ವಾಹನಗಳ ಮೊರೆ ಹೋಗುವುದು ಅನಿವಾರ್ಯವಾಗಿದೆ. ಇದರಿಂದ ಅನೇಕ ಸಂದರ್ಭದಲ್ಲಿ ಪ್ರಾಣಾಪಾಯಗಳಾದ ನಿದರ್ಶನಗಳಿವೆ...!

ಇದು ದೊಡ್ಡಬಳ್ಳಾಪುರ ತಾಲೂಕು ದೊಡ್ಡಬೆಳವಂಗಲ ಹೋಬಳಿ ವ್ಯಾಪ್ತಿಯ ಸುಮಾರು 30 ಹಳ್ಳಿ ಜನರ ಅಲವತ್ತಾಗಿದೆ.

ದೊಡ್ಡಬಳ್ಳಾಪುರ ತಾಲೂಕಿನಲ್ಲಿ ಅತೀ ದೊಡ್ಡ ಹೋಬಳಿ ಎನಿಸಿರುವ ದೊಡ್ಡಬೆಳವಂಗಲ ವ್ಯಾಪ್ತಿಯಲ್ಲಿ ಈ ಹಿಂದೆ ಜಿಲ್ಲಾಡಳಿತದಿಂದ ತುರ್ತು ಆರೋಗ್ಯ ಸೇವೆಗಾಗಿ ಆಂಬುಲೆನ್ಸ್ ನೀಡಲಾಗಿತ್ತು.ಆದರೆ ಕಳೆದ ಐದು ವರ್ಷದಿಂದ ಏಕಾಏಕಿ ಆಂಬುಲೆನ್ಸ್ ಸೇವೆಯನ್ನು ಸ್ಥಗಿತಗೊಳಿಸಿದ್ದು ಈ ಭಾಗದ ಹಳ್ಳಿ ಜನರು ಪರದಾಡುವಂತಾಗಿದೆ. ತುರ್ತು ಸಂದರ್ಭದಲ್ಲಿ ದೊಡ್ಡಬಳ್ಳಾಪುರ, ಬೆಂಗಳೂರು ಮತ್ತಿತರ ಕಡೆಯ ಆಸ್ಪತ್ರೆಗೆ ಸಾಗಲು ಖಾಸಗಿ ವಾಹನಗಳ ಮೊರೆ ಹೋಗಬೇಕಾಗಿದೆ ಅವು ತುರ್ತು ಸಂದರ್ಭದಲ್ಲಿ ಸಿಗುವುದು ಅನುಮಾನ ಎಂಬ ಪರಿಸ್ಥಿತಿ ಇದೆ ದುಬಾರಿ ದರ ತೆತ್ತು ಕಂಡಕಂಡವನ್ನು ಕಾಡಿಬೇಡಿ ವಾಹನ ಹಿಡಿಯುವಂತಾಗಿದೆ ಎಂದು ಗ್ರಾಮಸ್ಥರು ಅಲವತ್ತುಗೊಂಡಿದ್ದಾರೆ.

ನೆಲಮಂಗಲಕ್ಕೆ ಹೋದ ಆಂಬುಲೆನ್ಸ್: ಈ ಹಿಂದೆ ಈ ಭಾಗಕ್ಕೆ ನಿಯೋಜಿಸಿದ್ದ ಆಂಬುಲೆನ್ಸ್ ರಿಪೇರಿಗೆ ಬಂದಿತ್ತು. ತಿಂಗಳುಗಟ್ಟಲೆ ಗ್ಯಾರೇಜ್‌ನಲ್ಲಿ ಇದ್ದು ನಂತರ ದುರಸ್ತಿಗೊಂಡು ಮರಳಿ ಸ್ವಸ್ಥಾನಕ್ಕೆ ಬಂದಿತ್ತು. ಒಂದೆರಡು ವಾರದಲ್ಲಿ ಆಂಬುಲೆನ್ಸ್ ವಾಹನವನ್ನು ನೆಲಮಂಗಲಕ್ಕೆ ಕಳುಹಿಸಿಕೊಡಲಾಯಿತು. ಅಂದಿನಿಂದ ಇದುವರೆಗೆ ಅಲ್ಲಿಯೇ ಆ ವಾಹನದ ಸೇವೆಯನ್ನು ಖಾಯಂಗೊಳಿಸಲಾಗಿದೆ. ಇಲ್ಲಿದ್ದ ಆಂಬುಲೆನ್ಸ್‌ನ್ನು ನೆಲಮಂಗಲಕ್ಕೆ ಕಳುಹಿಸಿದ್ದು ಏಕೆ ಎಂಬುದು ಸಾರ್ವಜನಿಕರ ಪ್ರಶ್ನೆಯಾಗಿದೆ. ಅಲ್ಲಿಗೆ ಬೇಕಿದ್ದರೆ ಮತ್ತೊಂದು ವಾಹನದ ವ್ಯವಸ್ಥೆ ಮಾಡಿಕೊಳ್ಳಬೇಕಿತ್ತು, ಈ ಭಾಗದ ಆಂಬುಲೆನ್ಸ್‌ನ್ನು ಅಲ್ಲಿಗೆ ಸ್ಥಳಾಂತರಗೊಳಿಸಿದ್ದು ಏಕೆ ಇದರಿಂದ ಈ ಭಾಗದ ಜನರ ಆರೋಗ್ಯ ತುರ್ತು ಸೇವೆಗೆ ಏನು ಮಾಡುವುದು ಎಂಬುದು ದೊಡ್ಡಬೆಳವಂಗಲ ವ್ಯಾಪ್ತಿ ಜನರ ಆಕ್ರೋಶವಾಗಿದೆ.

ಅನಾಥವಾದ ಆರೋಗ್ಯ ಕೇಂದ್ರ: ಈ ಭಾಗದಲ್ಲಿ ಆಂಬುಲೆನ್ಸ್ ಸೇವೆ ಸಿಗುತ್ತಿದ್ದ ವೇಳೆಯಲ್ಲಿ ದೊಡ್ಡಹೆಜ್ಜಾಜಿಯಲ್ಲಿ ಆರೋಗ್ಯ ಮತ್ತು ಕ್ಷೇಮ ಕೇಂದ್ರದಲ್ಲಿ ಆಂಬುಲೆನ್ಸ್ ಚಾಲಕ ಹಾಗೂ ಸಿಬ್ಬಂದಿ ತಂಗಲು ಕೊಠಡಿ ವ್ಯವಸ್ಥೆ ಮಾಡಲಾಗಿತ್ತು. ವಾಹನ ಚಾಲಕ ಇದೇ ಜಾಗದಲ್ಲಿ ವಾಹನವನ್ನು ಪ್ರತಿನಿತ್ಯ ಸ್ವಚ್ಛಗೊಳಿಸಿ ಸೇವೆಗೆ ಸಿದ್ದತೆ ಮಾಡಿಕೊಳ್ಳುತ್ತಿದ್ದರು. ಆದರೆ ಕಳೆದ ಐದು ವರ್ಷದಿಂದ ಆಂಬುಲೆನ್ಸ್ ಇಲ್ಲದೆ ಚಾಲಕ ಹಾಗೂ ಸಿಬ್ಬಂದಿಗೆ ನೀಡಿದ್ದ ಕೊಠಡಿ ಅನಾಥವಾಗಿದೆ. ಇಲ್ಲಿನ ಆರೋಗ್ಯ ಮತ್ತು ಕ್ಷೇಮ ಕೇಂದ್ರದ ಕಟ್ಟಡವೂ ಪಾಳು ಬೀಳುತ್ತಿದ್ದು ಈ ಬಗ್ಗೆ ಯಾರೊಬ್ಬರು ಗಮನ ನೀಡುತ್ತಿಲ್ಲ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.

ಸಾಸಲುಗೆ ಬಂತು ಆಂಬುಲೆನ್ಸ್: ಈ ಹಿಂದೆ ಇದೇ ತಾಲೂಕಿನ ಸಾಸಲು ಹೋಬಳಿಯಲ್ಲಿನ ಆಂಬುಲೆನ್ಸ್‌ನ್ನು ಸಹ ಬೇರೆ ತಾಲೂಕಿಗೆ ವರ್ಗಾವಣೆ ಮಾಡಲಾಗಿತ್ತು. ಹೋಬಳಿಯ ಜನರು ಈ ಬಗ್ಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದರು. ಈ ಬಗ್ಗೆ ಮಾಧ್ಯಮಗಳಲ್ಲಿ ದೊಡ್ಡ ಸುದ್ದಿಯಾಗಿತ್ತು. ಇದರ ಬೆನ್ನಲ್ಲೆ ಎಚ್ಚೆತ್ತ ಆರೋಗ್ಯ ಇಲಾಖೆ ಮರಳಿ ಹೋಬಳಿಗೆ ಆಂಬುಲೆನ್ಸ್ ಸೇವೆ ಒದಗಿಸಿತ್ತು. ಈಗ ದೊಡ್ಡಬೆಳವಂಗಲ ವ್ಯಾಪ್ತಿಯ ಆಂಬುಲೆನ್ಸ್‌ಗೆ ಇದೇ ಸ್ಥಿತಿ ಬಂದಿದೆ. ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಶೀಘ್ರ ಕ್ರಮಕೈಗೊಳ್ಳಬೇಕು ಎಂದು ಹೋಬಳಿ ಜನರು ಒತ್ತಾಯಿಸಿದ್ದಾರೆ.

ಟೋಲ್ ಆಂಬುಲೆನ್ಸ್ ಉಪಯೋಗಕ್ಕಿಲ್ಲ: ಇನ್ನು ಇದೇ ಹೋಬಳಿಯಲ್ಲಿನ ಹುಲಿಕುಂಟೆ ಟೋಲ್‌ನಲ್ಲಿ ಟೋಲ್ ಆಂಬುಲೆನ್ಸ್ ಸೇವೆಗೆ ಸಿದ್ದವಿರುತ್ತದೆ, ಆದರೆ ಈ ವಾಹನ ಕೇವಲ ಹೆದ್ದಾರಿ ಸಂಭವಿಸುವ ಅವಘಡಗಳಿಗೆ ಮಾತ್ರ ಸೇವೆ ಒದಗಿಸುತ್ತದೆ ಗ್ರಾಮಗಳ ಜನರಿಗೆ ಆರೋಗ್ಯ ಸಮಸ್ಯೆಯಾದರೆ ಈ ಆಂಬುಲೆನ್ಸ್ ಸೇವೆ ಸಿಗುವುದಿಲ್ಲ ಆದ್ದರಿಂದ ಈ ಹಿಂದೆ ಇದ್ದಂತೆ ಹೋಬಳಿಗೆ ಆಂಬುಲೆನ್ಸ್ ನಿಯೋಜಿಸಬೇಕು ಈ ಮೂಲಕ ಗ್ರಾಮೀಣ ಜನರ ತುರ್ತು ಆರೋಗ್ಯ ಸೇವೆಗೆ ಅವಕಾಶ ಮಾಡಿಕೊಡಬೇಕು ಎಂಬುದು ಸ್ಥಳೀಯರ ಆಗ್ರಹವಾಗಿದೆ.

ದೊಡ್ಡಬೆಳವಂಗಲ ಹೋಬಳಿಯಲ್ಲಿ ನಿಯೋಜಿಸಿದ್ದ ಆಂಬುಲೆನ್ಸ್ ಸೇವೆ ಬದಲಾಗಿರುವ ಬಗ್ಗೆ ಇದುವರೆಗೆ ಮಾಹಿತಿ ಬಂದಿಲ್ಲ. ಈ ಬಗ್ಗೆ ಪರಿಶೀಲನೆ ನಡೆಸಲಾಗುವುದು ಈ ಭಾಗದ ಜನರ ತುರ್ತು ಆರೋಗ್ಯ ಸೇವೆಗೆ ಸಂಬಂಧಿಸಿದಂತೆ ಅಗತ್ಯ ಕ್ರಮಕೈಗೊಳ್ಳಲಾಗುವುದು.

ಕೃಷ್ಣಾರೆಡ್ಡಿ, ಜಿಲ್ಲಾ ಆರೋಗ್ಯಾಧಿಕಾರಿ

--

ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿದೆ, ನೆಲಮಂಗಲ ಶಾಸಕರು ಪ್ರಭಾವಿಗಳಿದ್ದಾರೆ, ಆದ್ದರಿಂದ ಅವರ ಕ್ಷೇತ್ರಕ್ಕೆ ಎಲ್ಲ ಸೌಲಭ್ಯ ಸಿಗುತ್ತಿದೆ, ಇಲ್ಲಿ ಸೇವೆಯಲ್ಲಿದ್ದ ಆಂಬುಲೆನ್ಸ್‌ನ್ನು ನೆಲಮಂಗಲಕ್ಕೆ ನಿಯೋಜಿಸಲಾಗಿದೆ. ದೊಡ್ಡಬಳ್ಳಾಪುರ ಜನರು ಏನು ಮಾಡಬೇಕು? ಆರೋಗ್ಯ ಸೇವೆಯಲ್ಲಿ ರಾಜಕೀಯ ಮಾಡಬಾರದು ಕೂಡಲೇ ನಮ್ಮ ಹೋಬಳಿ ವಾಹನವನ್ನು ನಮಗೆ ಕೊಡಬೇಕು.

ರವಿಕಾಂತ್, ದೊಡ್ಡಬೆಳವಂಗಲ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net