ನಾಳೆ ಹಣತೆ ಬೆಳಗಿ ಯೋಧರಿಗೆ ಗೌರವ - ಅಮರ್ ಜವಾನ್ ಜ್ಯೋತಿ ಸ್ಮಾರಕದಲ್ಲಿ ದೀಪ ಪ್ರಜ್ವಲನೆ - ಸಾರ್ವಜನಿಕರಿಗೆ ಅವಕಾಶ

Published on


ಪುತ್ತೂರು: ನಗರದ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳು ರೂಪಿಸಿರುವ ಕಿಲ್ಲೆ ಮೈದಾನದ ಮುಂಭಾಗದಲ್ಲಿನ ಅಮರ್ ಜವಾನ್ ಜ್ಯೋತಿ ಸ್ಮಾರಕದ ಬಳಿ ಕಾರ್ಗಿಲ್ ವಿಜಯ ದಿವಸದ ಪ್ರಯುಕ್ತ ಜು.೨೬ರಂದು ದೀಪ ಪ್ರಜ್ವಲನ ಕಾರ್ಯಕ್ರಮ ನಡೆಯಲಿದೆ. ದೇಶಕ್ಕಾಗಿ ಪ್ರಾಣಾರ್ಪಣೆಗೂ ಸಿದ್ಧರಾಗಿ ಸಮಾಜವನ್ನು ಕಾಪಾಡುವ ಯೋಧರಿಗಾಗಿ ಪ್ರಾರ್ಥನೆ ಮಾಡುವ ವಿಶೇಷ ಕಾರ್ಯಕ್ರಮವೊಂದನ್ನು ಆಯೋಜಿಸಲಾಗುತ್ತಿದೆ.
ಕೆಲವು ದಿನಗಳ ಹಿಂದೆಯಷ್ಟೇ ಕಾರ್ಗಿಲ್ ವಿಜಯದ ಇಪ್ಪತ್ತೈದನೆಯ ವರ್ಷಾಚರಣೆಯನ್ನು ಪುತ್ತೂರಿನಲ್ಲಿ ಆಯೋಜನೆ ಮಾಡಿದ್ದಾಗ, ಆ ಕಾರ್ಯಕ್ರಮವದಲ್ಲಿ ಭಾಗವಹಿಸಿದ್ದ ಕಾರ್ಗಿಲ್ ಯೋಧ ಕ್ಯಾಪ್ಟನ್ ನವೀನ್ ನಾಗಪ್ಪ ಯೋಧರಿಗಾಗಿ ದೇವರಲ್ಲಿ ನಿತ್ಯ ಪ್ರಾರ್ಥಿಸಿ, ದೀಪ ಬೆಳಗುವಂತೆ ಕರೆನೀಡಿದ್ದರು. ಅವರ ಮಾತನ್ನು ಪುರಸ್ಕರಿಸುವ ದ್ಯೋತಕವಾಗಿ ಪುತ್ತೂರಿನ ಸಮಸ್ತ ನಾಗರಿಕರನ್ನೊಳಗೊಂಡಂತೆ ಅಮರ್ ಜವಾನ್ ಜ್ಯೋತಿಯ ಬಳಿ ಹಣತೆ ಬೆಳಗುವ ಕಾರ್ಯಕ್ರಮ ಆಯೋಜನೆಗೊಳ್ಳುತ್ತಿದೆ.
ನಮಗಾಗಿ ಸರ್ವಸ್ವವನ್ನೂ ತ್ಯಾಗ ಮಾಡಲು ಸಿದ್ಧರಿರುವ ಯೋಧರಿಗಾಗಿ ಪ್ರಾರ್ಥಿಸುವುದು ನಮ್ಮ ಕರ್ತವ್ಯ. ಯೋಧರು ನಮ್ಮಿಂದ ಏನನ್ನೂ ಬಯಸುತ್ತಿಲ್ಲ. ಕೇವಲ ನಮ್ಮ ಪ್ರಾರ್ಥನೆ ಹಾರೈಕೆಗಳಷ್ಟೇ ಅವರ ನಿರೀಕ್ಷೆ. ಆದ್ದರಿಂದ ಎಲ್ಲರೂ ಒಟ್ಟಾಗಿ ಯೋಧರೊಂದಿಗೆ ನಾವಿದ್ದೇವೆ ಎಂಬ ಸಂದೇಶವನ್ನು ಸಾರಬೇಕಿದೆ. ಹಾಗಾಗಿ ಕಾರ್ಗಿಲ್ ವಿಜಯ ದಿವಸದಂದು ನಾಗರಿಕ ಬಂಧುಗಳೆಲ್ಲರೂ ಜತೆಗೂಡಿ ಹಣತೆ ಹಚ್ಚಿ ಯೋಧರಿಗಾಗಿ ಪ್ರಾರ್ಥನೆ ಮಾಡಬೇಕಿದೆ ಎಂಬುದು ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಸುಬ್ರಹ್ಮಣ್ಯ ನಟ್ಟೋಜ ಅವರ ಮಾತು.
ಹಣತೆ ಹಾಗೂ ಉರಿಸುವ ಬತ್ತಿಗಳನ್ನು ಆಯಾ ವ್ಯಕ್ತಿಗಳೇ ಸಿದ್ಧಪಡಿಸಿ ತರುವಂತೆ ಆಯೋಜಕರು ಮನವಿ ಮಾಡಿದ್ದಾರೆ. ಹಣತೆಗೆ ಬೇಕಾದ ಎಣ್ಣೆಯ ವ್ಯವಸ್ಥೆಯನ್ನು ಸ್ಥಳದಲ್ಲಿಯೇ ಉಚಿತವಾಗಿ ಕಲ್ಪಿಸಿಕೊಡಲಾಗುತ್ತದೆ. ಈ ಕಾರ್ಯಕ್ರಮದಲ್ಲಿ ಯಾವುದೇ ಭಾಷಣ, ಮಾತುಗಳಿರುವುದಿಲ್ಲ. ಸಭಾ ಕಾರ್ಯಕ್ರಮವೂ ಇರದೆ ಕೇವಲ ಯೋಧರನ್ನು ಗೌರವಿಸುವುದು, ನಮಿಸುವುದಷ್ಟೇ ಉದ್ದೇಶವಾಗಿದೆ. ಬೆಳಗ್ಗೆ ೮ರಿಂದ ೧೦ರವರೆಗೆ ಹಣತೆ ಬೆಳಗಿ ಸೈನಿಕರಿಗೆ ಗೌರವ ಸಮರ್ಪಿಸುವುದಕ್ಕೆ ಸಾರ್ವಜನಿಕರಿಗೆ ಅವಕಾಶ ಇರುತ್ತದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net