

ಶ್ರೀರಂಗಪಟ್ಟಣ: ಇಲ್ಲಿನ ಟಿಎಪಿಸಿಎಂಎಸ್ ಭವನದಲ್ಲಿ ಜ.22ರಂದು ಅಂಬಿಗರ ಚೌಡಯ್ಯ ಜಯಂತಿ ಆಯೋಜಿಸಲಾಗಿದ್ದು, ಸಮುದಾಯದ ಜನರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕು ಎಂದು ಶ್ರೀ ಅಹಲ್ಯದೇವಿ ದೇವಾಲಯ ಸಮಿತಿ ಅಧ್ಯಕ್ಷ ಚಂದ್ರಣ್ಣ ತಿಳಿಸಿದರು.
ತಾಲೂಕಿನ ಆರತಿ ಉಕ್ಕಡ ಗ್ರಾಮದ ಶ್ರೀ ಅಹಲ್ಯದೇವಿ ದೇವಾಲಯದ ಸಭಾಂಗಣದಲ್ಲಿ ಇತ್ತೀಚೆಗೆ ಬೆಸ್ತ-ಗಂಗಮತಸ್ಥ ಸಮುದಾಯದ ಸಂಘ ವತಿಯಿಂದ ಆಯೋಜಿಸಿದ್ದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಅಂದು ಶ್ರೀ ರಂಗನಾಥಸ್ವಾಮಿ ದೇವಾಲಯ ಮುಂಭಾಗ ಅಂಬಿಗರ ಚೌಡಯ್ಯನವರ ಬೆಳ್ಳಿ ರಥಕ್ಕೆ ಚಾಲನೆ ನೀಡಲಾಗುತ್ತದೆ. ವಿವಿಧ ಜಾನಪದ ಕಲಾ ತಂಡಗಳು, ತಮಟೆ-ನಗಾರಿ, ಮಂಗಳವಾದ್ಯಗಳೊಂದಿಗೆ ಹೆಣ್ಣು ಮಕ್ಕಳು ಪೂರ್ಣಕುಂಭ ಕಳಸ ಹೊತ್ತು ಮೆರವಣಿಗೆಯಲ್ಲಿ ಸಾಗಲಿದ್ದಾರೆ ಎಂದರು.
ಸಂಘದ ವತಿಯಿಂದ ಹೊರತರಲಾದ ನೂತನ ವರ್ಷದ ದಿನಚರಿಯನ್ನು ಗಣ್ಯರು ಬಿಡುಗಡೆ ಮಾಡಿದರು. ಗ್ರಾಮಾಂತರ ಠಾಣೆ ಪಿಎಸ್‌ಐ ರಕ್ಷಿತಾ, ಪುರಸಭಾ ಸದಸ್ಯ ಎಸ್.ಟಿ.ರಾಜು, ಮುಖಂಡರಾದ ಕೆ.ಆರ್.ಸಾಗರ ತಮ್ಮಣ್ಣ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯೆ ಗಾಮನಹಳ್ಳಿ ಪ್ರಭಾವತಿ ಪ್ರಕಾಶ್, ಯಜಮಾನ್ ಬಸ್ತೀಪುರ ವೆಂಕಟೇಶ್, ಗಂಜಾಂ ನಾರಾಯಣಪ್ಪ, ವಕೀಲ ಶ್ರೀರಂಗಪಟ್ಟಣ ಬಾಲರಾಜು, ಪಾಲಹಳ್ಳಿ ಶ್ರೀನಿವಾಸ್, ಅರಕೆರೆ ಬೋರಪ್ಪ, ಗಾಮನಹಳ್ಳಿ ಶಿವಮಂಜು, ಶಿವಕುಮಾರ್ ಉಪಸ್ಥಿತರಿದ್ದರು.