

ಮಂಡ್ಯ: ನಗರದಲ್ಲಿ ಗಂಗಾಮತ ಸಮುದಾಯದವರಿಗೆ ಭವನ ನಿರ್ಮಾಣ ಮಾಡಲು ವಿಧಾನ ಪರಿಷತ್ ಸದಸ್ಯ ತಿಪ್ಪಣ್ಣ ಕಮಕನೂರು ಅವರು 10 ಲಕ್ಷ ರೂ ನೀಡುವುದಾಗಿ ಹೇಳಿದ್ದಾರೆ. ಈ ನಿಟ್ಟಿನಲ್ಲಿ ಸರ್ಕಾರದ ನಿಧಿಯಿಂದ 10 ಲಕ್ಷ ರೂ ಜತೆಗೆ ವೈಯಕ್ತಿಕವಾಗಿ 1 ಲಕ್ಷ ರೂ ನೀಡುವುದಾಗಿ ಶಾಸಕ ರವಿಕುಮಾರ್ ಗಣಿಗ ಭರವಸೆ ನೀಡಿದರು.
ನಗರದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಆಯೋಜಿಸಿದ್ದ ಅಂಬಿಗರ ಚೌಡಯ್ಯ ಜಯಂತ್ಯುತ್ಸವದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಜಿಲ್ಲೆಯಲ್ಲಿರುವ ಸಣ್ಣ ಸಣ್ಣ ಸಮುದಾಯಗಳು ಆರ್ಥಿಕವಾಗಿ ಸಬಲರಾಗಬೇಕು. ಬಸವಣ್ಣನವರ ಸಮಕಾಲೀನವರಾದ ಅಂಬಿಗರ ಚೌಡಯ್ಯ ಅವರು ಬಹಳ ನಿಷ್ಠೆಯಿಂದ ದೋಣಿ ನಡೆಸುವ ಕಾಯಕವನ್ನು ಮಾಡುತ್ತಿದ್ದರು. ಸತ್ಯ ಹಾಗೂ ನಂಬಿಕಸ್ಥರಾಗಿದ್ದರು. ಜನಸಾಮಾನ್ಯರು ಅಂಬಿಗ ಚೌಡಯ್ಯ ಅವರ ಸನ್ಮಾರ್ಗದಲ್ಲಿ ನಡೆಯಬೇಕು ಎಂದರು.
ವಿಧಾನ ಪರಿಷತ್ ಸದಸ್ಯ ತಿಪ್ಪಣ್ಣ ಕಮಕನೂರು ಮಾತನಾಡಿ, ನಿಜಶರಣ ಅಂಬಿಗರ ಚೌಡಯ್ಯ ಜಯಂತ್ಯುತ್ಸವವನ್ನು ಬಹಳ ವಿಜೃಂಭಣೆಯಿಂದ ಆಚರಿಸುತ್ತಿರುವುದು ಸಂತೋಷದ ವಿಷಯವಾಗಿದೆ. 12ನೇ ಶತಮಾನದಲ್ಲಿ ಜೀವಿಸಿದ್ದ ಶಿವಶರಣ ಹಾಗೂ ವಚನಕಾರರಾಗಿದ್ದರು. ಅವರು ವೃತ್ತಿಯಲ್ಲಿ ಅನುಭವಿ ಅಂಬಿಗರಾಗಿದ್ದರು. ಅಂದಿನ ಸಮಾಜದಲ್ಲಿದ್ದ ಧಾರ್ಮಿಕ ನೀತಿ- ನಿಯಮಗಳು, ಕಟ್ಟುಪಾಡುಗಳು, ಆಚಾರ- ವಿಚಾರಗಳಲ್ಲಿ ಬಹಳಷ್ಟು ಮಾರ್ಪಾಡುಗಳನ್ನು ಅಂಬಿಗರ ಚೌಡಯ್ಯ ಅವರ ವಚನದಲ್ಲಿ ಕಾಣಬಹುದು ಎಂದರು.
ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಮಾತನಾಡಿ, ಅಂಬಿಗ ಚೌಡಯ್ಯ ಅವರು ಸಮಾಜದ ಜನರ ಒಳಿತನ್ನು ಬಯಸಿ ಉತ್ತಮ ಚಿಂತನೆಯನ್ನೊಳಗೊಡಂತೆ ನೇರ ನಿರ್ಭೀತಿ ನುಡಿಗಳಿಂದ ವಚನಗಳನ್ನು ರಚಿಸಿದ್ದಾರೆ. ಬಸವಣ್ಣನವರ ಅನುಭವ ಮಂಟಪ ಕಟ್ಟುವಲ್ಲಿ ಅಂಬಿಗರ ಚೌಡಯ್ಯ ಅವರ ಕಾಯಕ ಅತೀ ಮಹತ್ವದಾಗಿದೆ. ಸಮಾಜವು ಚೌಡಯ್ಯ ಅವರ ಸಾಧನೆ, ಕೊಡುಗೆ, ಮಹತ್ವವನ್ನು ಸ್ಮರಿಸಬೇಕು ಎಂದರು.
ಜಿಪಂ ಸಿಇಒ ಶೇಖ್ ತನ್ವೀರ್ ಆಸ್ಿ, ತುಮಕೂರು ಜಿಲ್ಲೆ ವೇದವ್ಯಾಸ ಮಠದ ಬಸವಾನಂದ ಸ್ವಾಮೀಜಿ, ರವಿಕುಮಾರ್, ಮಂಜುನಾಥ್ ಇತರರಿದ್ದರು. ಇದೇ ವೇಳೆ ಎಲ್.ಲಿಂಗರಾಜು(ಶಿಕ್ಷಣ ಕ್ಷೇತ್ರ), ಸಿದ್ದರಾಜು(ಪೂಜಾ ಕುಣಿತ), ಡಾ.ಜಯರಾಮು(ಸಮಾಜ ಸೇವಕರು), ಬೀಸುಬಲೆ ಮಹಾದೇವ( ಮೀನುಗಾರಿಕೆ) ಅವರಿಗೆ ಅಂಬಿಗರ ಚೌಡಯ್ಯ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಮೆರವಣಿಗೆಗೆ ಚಾಲನೆ: ವೇದಿಕೆ ಕಾರ್ಯಕ್ರಮಕ್ಕೂ ಮುನ್ನ ಅಂಬಿಗರ ಚೌಡಯ್ಯ ಅವರ ಅಲಂಕೃತ ಭಾವಚಿತ್ರ ಮೆರವಣಿಗೆಗೆ ಜಿಲ್ಲಾಧಿಕಾರಿ ಕಚೇರಿ ಮುಂಭಾಗದಿಂದ ಜಿಲ್ಲಾಧಿಕಾರಿ ಡಾ.ಕುಮಾರ ಚಾಲನೆ ನೀಡಿದರು. ಅಪರ ಜಿಲ್ಲಾಧಿಕಾರಿ ಡಾ.ಎಚ್.ಎಲ್.ನಾಗರಾಜು, ಜಿಪಂ ಸಿಇಒ ಶೇಖ್ ತನ್ವೀರ್ ಆಸ್ಿ ಇತರರಿದ್ದರು.