

ಶಿರಹಟ್ಟಿ: ಶರಣರ ಮಹಾಕ್ರಾಂತಿಯಲ್ಲಿ ಹೊರಹೊಮ್ಮಿದ ನಿಜಶರಣ ಅಂಬಿಗರ ಚೌಡಯ್ಯ ಅಣ್ಣ ಬಸವಣ್ಣನವರ ಒಡನಾಟದಲ್ಲಿ ಬೆಳೆದು ಶ್ರೇಷ್ಠ ತತ್ವಜ್ಞಾನಿಯಾಗಿ, ಮುಚ್ಚುಮರೆಯಿಲ್ಲದೇ ಬಿಚ್ಚು ಮನಸಿಗೆ ಕಂಡಂತೆ ನುಡಿಯುವ ಕ್ರಾಂತಿ ಪುರುಷ ಶರಣ ವಚನಕಾರನಾಗಿದ್ದಾನೆ ಎಂದು ಶಿರಹಟ್ಟಿಯ ಶ್ರೀ ಫಕೀರೇಶ್ವರ ಮಠದ ಉತ್ತರಾಧಿಕಾರಿ ಶ್ರೀ ಫಕೀರದಿಂಗಾಲೇಶ್ವರ ಸ್ವಾಮೀಜಿ ಹೇಳಿದರು.
ಶ್ರಾವಣ ಮಾಸದ ನಿಮಿತ್ತ ಸ್ಥಳೀಯ ಫಕೀರೇಶ್ವರ ಮಠದಲ್ಲಿ ಗುರುವಾರ ಏರ್ಪಡಿದ್ದ ನಿಜಶರಣ ಅಂಬಿಗರ ಚೌಡಯ್ಯನ ಚರಿತ್ರೆ ಪ್ರವಚನ ಪ್ರಾರಂಭೋತ್ಸವಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ವಿಜಯಪುರ ಜ್ಞಾನ ಯೋಗಾಶ್ರಮದ ವೇದಾಂತ ಕೇಸರಿ ಮಲ್ಲಿಕಾರ್ಜುನ ಶ್ರೀಗಳ ಶಿಷ್ಯರಾದ ಸಿಂದಗಿಯ ಶಾಂತ ಗಂಗಾಧರ ಸ್ವಾಮೀಜಿ ಸ್ವತ: ನಿಜಶರಣ ಅಂಬಿಗರ ಚೌಡಯ್ಯನವರ ವಚನಗಳ ಚರಿತ್ರೆ ರಚಿಸಿದ್ದರಿಂದ ಒಂದು ತಿಂಗಳವರೆಗೆ ಪ್ರವಚನ ನೀಡಲಿದ್ದಾರೆ. ಇಂತಹ ಆಧ್ಯಾತ್ಮಿಕತೆ, ನೀತಿ ಬೋಧನೆಯ ಪುಣ್ಯ ಕಾರ್ಯಕ್ಕೆ ಪಟ್ಟಣ ಸೇರಿ ಸುತ್ತಲಿನ ಜನತೆ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಕಾರ್ಯಕ್ರಮ ಯಶಸ್ವಿಗೊಳಿಸಬೇಕು ಎಂದರು.
ಕಾರ್ಯಕ್ರಮ ಉದ್ಘಾಟಿಸಿದ ತಹಸೀಲ್ದಾರ್ ಅನಿಲ ಬಡಿಗೇರ ಮಾತನಾಡಿ, ಶ್ರೀಮಠದಲ್ಲಿ ಮಕ್ಕಳಿಗೆ ಅಕ್ಷರ ಜ್ಞಾನ, ಅನ್ನದಾಸೋಹದ ಜತೆ ಧರ್ಮ ಸಂಸ್ಕಾರದ ನೈತಿಕ ಮೌಲ್ಯ ತುಂಬುವ ಕೆಲಸ ನಡೆಯುತ್ತಿರುವುದು ಶ್ಲಾಘನೀಯ. ಮನುಷ್ಯನ ಅಂತರಂಗ ಶುದ್ಧಿಗೆ ಬಸವಾದಿ ಶರಣರ ವಚನ ಪಾಲನೆ ಅಗತ್ಯವಿದ್ದು, ನೀತಿ ಬೋಧನೆ ಉಣಬಡಿಸುವ ಇಂತಹ ಕಾರ್ಯಕ್ಕೆ ಎಲ್ಲರೂ ಸಹಕರಿಸಬೇಕು ಎಂದರು.
ಪ್ರವಚನಕಾರ ಸಿಂದಗಿಯ ಶಾಂತ ಗಂಗಾಧರ ಸ್ವಾಮೀಜಿ ಮಾತನಾಡಿ, ಚೌಡಯ್ಯನವರು ನಿಜಶರಣನಾಗಿ ಮನುಕುಲಕ್ಕೆ ನೀಡಿದ ವಚನಗಳು ಸಾರ್ವಕಾಲಿಕ ಸತ್ಯವಾಗಿವೆ ಎಂದರು.
ಜಿಲ್ಲಾ ಮಹಿಳಾ ಕದಳಿ ವೇದಿಕೆ ಅಧ್ಯಕ್ಷೆ ಸುಧಾ ಹುಚ್ಚಣ್ಣನವರ ಮಾತನಾಡಿದರು. ಸಿ.ಸಿ. ನೂರಶೆಟ್ಟರ, ಶಸಾಪ ತಾಲೂಕಾಧ್ಯಕ್ಷ ಕೆ.ಎ. ಬಳಿಗೇರ, ಎಚ್.ಎಂ. ದೇವಗಿರಿ, ಬಸವರಾಜ ಬೋರಶೆಟ್ಟರ, ಮಹಿಳಾ ಕದಳಿ ವೇದಿಕೆ ತಾಲೂಕಾಧ್ಯಕ್ಷೆ ನಂದಾ ಕಪ್ಪತನವರ, ಶಾಂತಾ ಪಾಟೀಲ, ಸಹದೇವ ಪೂಜಾರ, ಬೀಳಗಿಯ ಸಂಗನಬಸವ ದೇವರು, ಇತರರು ಉಪಸ್ಥಿತರಿದ್ದರು.