

ಹುಬ್ಬಳ್ಳಿ: ತಾಲೂಕು ಗ್ರಾಮೀಣ ಮತ್ತು ಶಹರ ತಹಸೀಲ್ದಾರರು ಮತ್ತು ಗಂಗಾಮತಸ್ಥರ ಹಿತರಕ್ಷಕ ಸಂಘದ ಸಂಯುಕ್ತ ಆಶ್ರಯದಲ್ಲಿ ನಿಜಶರಣ ಶ್ರೀಅಂಬಿಗರ ಚೌಡಯ್ಯನವರ 905ನೇ ಜಯಂತ್ಯುತ್ಸವನ್ನು ಭಾನುವಾರ ಆಚರಿಸಲಾಯಿತು.
ನಗರದ ಮೂರುಸಾವಿರ ಮಠದಿಂದ ಏರ್ಪಡಿಸಿದ್ದ ಶೋಭಾಯಾತ್ರೆಗೆ ಬೆಳಗಾವಿ ಸಂಸದ ಜಗದೀಶ ಶೆಟ್ಟರ್ ಚಾಲನೆ ನೀಡಿದರು. ಚನ್ನಮ್ಮ ವೃತ್ತ, ಸಂಗೋಳ್ಳಿ ರಾಯಣ್ಣ ವೃತ್ತ ಮಾರ್ಗವಾಗಿ ಮೆರವಣಿಗೆಯು ಕುಂಭ, ಸಂಗೀತ ವಾದ್ಯಗಳ ಮೇಳ, ಸ್ತಬ್ಧ ಚಿತ್ರಗಳೊಂದಿಗೆ ನೌಕರರ ಭವನಕ್ಕೆ ಆಗಮಿಸಿತು.
ನಂತರ ನಡೆದ ಕಾರ್ಯಕ್ರಮದಲ್ಲಿ ಅಂಬಿಗರ ಚೌಡಯ್ಯ ಭಾವಚಿತ್ರಕ್ಕೆ ಗಣ್ಯರು ಪುಷ್ಪಾರ್ಚನೆ ಮಾಡಿದರು. ಸಾಹಿತಿ ಶರೀಫ ಚಿಗಳ್ಳಿ ಇವರು ಬರೆದ ಅರಳುವ ಹೂವುಗಳು ಪುಸ್ತಕವನ್ನು ಕುಂದಗೋಳ ಶಾಸಕ ಎಂ.ಆರ್. ಪಾಟೀಲ ಬಿಡುಗಡೆ ಮಾಡಿದರು.
ಮಾಜಿ ಸಚಿವ ಪ್ರಮೋದ ಮಧ್ವರಾಜ್, ಜಿಪಂ ಮಾಜಿ ಅಧ್ಯಕ್ಷ ಟಿ.ಜಿ. ಬಾಲಣ್ಣವರ, ಸಂದ ತಾಲೂಕು ಅಧ್ಯಕ್ಷ ಮಂಜುನಾಥ ಬೈರಣ್ಣವರ, ಗುರಪ್ಪ ಜಿಡ್ಡಿ, ಗುರು ಮತ್ತುರ, ಹನುಮಂತ ಅಂಬಿಗೇರ, ಶಿವಾನಂದ ಅಂಬಿಗೇರ, ಮಂಜು ಗಡಿಯನ್ನವರ ಇತರರು ಉಪಸ್ಥಿತರಿದ್ದರು.
ಅಂಬಿಗರ ಚೌಡಯ್ಯನವರ ಕುರಿತು ಉಪನ್ಯಾಸ, ಮಕ್ಕಳಿಂದ ವಚನ ವಾಚನ, ಸಂಗೀತ ಕಾರ್ಯಕ್ರಮಗಳು ನಡೆದವು.