ನುಡಿದಂತೆ ನಡೆದ ಅಂಬಿಗರ ಚೌಡಯ್ಯ

BLY-22-4
ಬಳ್ಳಾರಿ ನಗರದ ಡಾ.ರಾಜ್‌ಕುಮಾರ್ ರಸ್ತೆಯ ಬಿಡಿಎಎ ಫುಟ್‌ಬಾಲ್ ಮೈದಾನದ ವೇದಿಕೆ ಸಭಾಂಗಣದಲ್ಲಿ ಸೋಮವಾರ ಏರ್ಪಡಿಸಿದ್ದ ನಿಜಶರಣ ಅಂಬಿಗರ ಚೌಡಯ್ಯ ಜಯಂತ್ಯುತ್ಸವ ಕಾರ್ಯಕ್ರಮವನ್ನು ಮಹಾನಗರ ಪಾಲಿಕೆ ಮೇಯರ್ ಬಿ.ಶ್ವೇತಾ ಉದ್ಘಾಟಿಸಿದರು. ಉಪ ಮೇಯರ್ ಬಿ.ಜಾನಕಿ, ಹೆಚ್ಚುವರಿ ಜಿಲ್ಲಾಧಿಕಾರಿ ಮಹಮ್ಮದ್ ಜುಬೇರ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಬಿ.ನಾಗರಾಜ ಇತರರಿದ್ದರು.
Published on

ಬಳ್ಳಾರಿ: ಹನ್ನೆರಡನೇ ಶತಮಾನದಲ್ಲಿ ಕಲ್ಯಾಣದ ಶಿವಶರಣರ ಮಧ್ಯದಲ್ಲಿ ಪ್ರಜ್ವಲವಾಗಿ ಬೆಳಗಿದ ಶರಣ ಅಂಬಿಗರ ಚೌಡಯ್ಯ. ಮಾತು ಕಟುವಾದರೂ ದಿಟವನ್ನೆ ನುಡಿದವರು. ನುಡಿದಂತೆ ನಡೆದ ಅಂಬಿಗರ ಚೌಡಯ್ಯರ ಕೊಡುಗೆ ಅಪಾರ ಎಂದು ಮಹಾನಗರ ಪಾಲಿಕೆ ಮೇಯರ್ ಬಿ.ಶ್ವೇತಾ ಹೇಳಿದರು.

ನಗರದ ಡಾ.ರಾಜ್‌ಕುಮಾರ್ ರಸ್ತೆಯ ಬಿಡಿಎಎ ಫುಟ್‌ಬಾಲ್ ಮೈದಾನದ ವೇದಿಕೆ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಮಹಾನಗರ ಪಾಲಿಕೆ ಸಂಯುಕ್ತಾಶ್ರಯದಲ್ಲಿ ಸೋಮವಾರ ಏರ್ಪಡಿಸಿದ್ದ ನಿಜಶರಣ ಅಂಬಿಗರ ಚೌಡಯ್ಯ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಅಂಬಿಗರ ಚೌಡಯ್ಯರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.

ಸಮಾಜದಲ್ಲಿದ್ದ ತಾರತಮ್ಯ ನೀತಿಯ ವಿರುದ್ಧ ಹೋರಾಡಿ ಹೊಸ ವ್ಯವಸ್ಥೆಯ ಸೈದ್ಧಾಂತಿಕ ನೆಲೆಗಟ್ಟನ್ನು ಭದ್ರಗೊಳಿಸಿದ ಅಂಬಿಗರ ಚೌಡಯ್ಯ ನಿಜ ಶರಣರು. ಸಮಾಜದ ಅನಾಚಾರ, ಮೂಢನಂಬಿಕೆಯನ್ನು ನಿರ್ಭಿತಿಯಿಂದ ಕಟುವಾಗಿ ಟೀಕಿಸಿದವರು. ತನ್ನ ವಚನಗಳನ್ನು ವೈಚಾರಿಕವಾಗಿ ನಿರೂಪಿಸಿ ಮಹಾಮಾನವತಾವಾದಿಯಾಗಿದ್ದಾರೆ ಎಂದು ತಿಳಿಸಿದರು.

ಲೇಖಕ ಡಾ.ತಿಪ್ಪೇಸ್ವಾಮಿ ಸಂಡೂರು ಅವರು ಮಾತನಾಡಿ, ಅಂಬಿಗರ ಚೌಡಯ್ಯ 12ನೇ ಶತಮಾನದ ಬಸವಣ್ಣ ಅವರ ಅನುಯಾಯಿ ಶರಣ. ಸಾವಿರಾರು ವರ್ಷಗಳಿಂದ ಧರ್ಮ-ದೇವರುಗಳ ಬಗೆಗೆ ಜನ ಸಮೂಹದಲ್ಲಿದ್ದ ಮೂಢನಂಬಿಕೆಗಳನ್ನೆಲ್ಲ ಗುರು ಬಸವಣ್ಣಅವರೊಂದಿಗೆ ಅಂಬಿಗರ ಚೌಡಯ್ಯ ಹೊಡೆದೋಡಿಸಲು ಪ್ರಯತ್ನಿಸಿದರು. ಎಲ್ಲ ಶರಣರಂತೆ ಚೌಡಯ್ಯ ಅವರು ಕಾಯಕಯೋಗಿಯಾಗಿದ್ದು, ದೋಣಿ ನಡೆಸುವುದು ಅವರ ಕಾಯಕ. ಅಂಬಿಗ ಎಂದರೆ ದೋಣಿ ನಡೆಸುವವರು ಎಂದು ಹೇಳಲಾಗುತ್ತದೆ. ವಚನಕಾರ ಅಂಬಿಗರ ಚೌಡಯ್ಯ ಎಂಬ ಅಂಕಿತನಾಮದೊಂದಿಗೆ ಸುಮಾರು 278 ವಚನಗಳನ್ನು ಬರೆದರು. ಅವರ ವಚನಗಳು ಅನುಭವ ಮತ್ತು ಸಾಮಾಜಿಕ ಪ್ರಜ್ಞೆಯ ಪ್ರತಿಬಿಂಬವಾಗಿದ್ದು, ಅವುಗಳನ್ನು ಕೇಳುವ ಎಲ್ಲರ ಮೇಲೆ ಶಾಶ್ವತವಾದ ಪ್ರಭಾವವನ್ನು ಬೀರುತ್ತದೆ ಎಂದರು.

ಕಾರ್ಯಕ್ರಮದಲ್ಲಿ ಎಂ.ನಾಗಭೂಷಣ ಬಾಪುರೆ ಅವರು ವಚನ ಗಾಯನಗಳನ್ನು ಪ್ರಸ್ತುತ ಪಡಿಸಿದರು. ಪಾಲಿಕೆಯ ಉಪ ಮೇಯರ್ ಬಿ.ಜಾನಕಿ, ಹೆಚ್ಚುವರಿ ಜಿಲ್ಲಾಧಿಕಾರಿ ಮಹಮ್ಮದ್ ಜುಬೇರ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಬಿ.ನಾಗರಾಜ ಸೇರಿದಂತೆ ಗಂಗಾಮತ ಸಮಾಜದ ಮುಖಂಡರು ಹಾಗೂ ಮತ್ತಿತರರಿದ್ದರು.

ನಿಜಶರಣ ಅಂಬಿಗರ ಚೌಡಯ್ಯ ಜಯಂತ್ಯುತ್ಸವದ ಅಂಗವಾಗಿ ನಗರದ ಕನಕದುರ್ಗಮ್ಮ ದೇವಸ್ಥಾನ ಆವರಣದಿಂದ ಏರ್ಪಡಿಸಿದ್ದ ಮೆರವಣಿಗೆಯು ಸಂಭ್ರಮದಿಂದ ನಡೆಯಿತು. ಮೆರವಣಿಗೆಯಲ್ಲಿ ಪೂರ್ಣ ಕುಂಭ ಹೊತ್ತ ಮಹಿಳೆಯರು ಹಾಗೂ ವಿವಿಧ ಸಾಂಸ್ಕೃತಿಕ ಕಲಾತಂಡಗಳು ಗಮನ ಸೆಳೆದವು. ಮೆರವಣಿಗೆಯು ನಗರದ ಕನಕ ದುರ್ಗಮ್ಮ ದೇವಸ್ಥಾನದಿಂದ ಆರಂಭವಾಗಿ ಗಡಿಗಿ ಚನ್ನಪ್ಪ ವೃತ್ತದ ಮೂಲಕ ಬಿಡಿಎಎ ಫುಟ್ಬಾಲ್ ಮೈದಾನದ ವೇದಿಕೆ ಸಭಾಂಗಣಕ್ಕೆ ತಲುಪಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net