

ಪುತ್ತೂರು: ಸ್ಮರಣ ಶಕ್ತಿ ಹೆಚ್ಚಿಸಿಕೊಳ್ಳಲು, ಏಕಾಗ್ರತೆಗಾಗಿ, ಶಾರೀರಿಕ, ಮಾನಸಿಕ ಆರೋಗ್ಯಕ್ಕೆ ಯೋಗ ಅತ್ಯವಶ್ಯಕ. ಮನಸ್ಸು ಮತ್ತು ಉಸಿರಾಟದ ಮಧ್ಯೆ ಸಂಬಂಧ ಇದೆ, ಮನಸ್ಸನ್ನು ಹಿಡಿತದಲ್ಲಿಟ್ಟುಕೊಳ್ಳಲು ಯೋಗ ಅಗತ್ಯ. ಯೋಗದಿಂದ ರೋಗ ನಿವಾರಣೆ ಖಂಡಿತ ಸಾಧ್ಯ, ಕಾರಣ ಕಂಡು ಹಿಡಿದು ಆರೋಗ್ಯ ಸಮಸ್ಯೆಯನ್ನು ನಿವಾರಿಸುವುದು ಯೋಗದಿಂದ ಮಾತ್ರ ಸಾಧ್ಯವಾಗಿದ್ದು, ಎಲ್ಲರೂ ಇದನ್ನರಿತು ಯೋಗ ಮಾಡಿ ಎಂದು ಯೋಗಾರೋಗ್ಯ ಸಂಸ್ಥೆಯ ಚಿಕಿತ್ಸಕ, ಯೋಗ ತಜ್ಞ ಡಾ. ಉದಯಕುಮಾರ್ ಕೆ. ಹೇಳಿದರು.
ನಟ್ಟೋಜಾ ಫೌಂಡೇಷನ್ ಟ್ರಸ್‌ನ ಅಂಬಿಕಾ ಪದವಿ ಪೂರ್ವ ವಿದ್ಯಾಲಯ, ನೆಲ್ಲಿಕಟ್ಟೆಯಲ್ಲಿ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯ ಮುಖ್ಯ ಅತಿಥಿಗಳಾಗಿ ಯೋಗ ದಿನಾಚರಣೆ ಮಹತ್ವವನ್ನು ತಿಳಿಸಿದರು.
ಯೋಗದ ಯಾವುದೇ ಪ್ರಕಾರಗಳಿರಲಿ ಆಸನ, ಪ್ರಾಣಾಯಾಮ, ಏಕಾಗ್ರತೆಯೊಂದಿಗೆ ಮಾಡುವ ಧ್ಯಾನ ಎಲ್ಲದರಲ್ಲೂ ಮೂಲವಾಗಿರುವಂತಹದ್ದು ಉಸಿರಾಟ. ಉಸಿರಾಟ ಶರೀರದ ಎಲ್ಲ ಕೆಲಸಗಳನ್ನು ನಿಯಂತ್ರಿಸುವುದು, ಶರೀರ ಮತ್ತು ಮನಸ್ಸಿನ ಏರುಪೇರನ್ನು ನಿಯಂತ್ರಿಸುತ್ತದೆ ಎಂದು ಹೇಳಿದರು.
ವಿದ್ಯಾಲಯದ ಪ್ರಾಚಾರ್ಯ ಸತ್ಯಜಿತ್ ಉಪಾಧ್ಯಾಯ, ವಿದ್ಯಾರ್ಥಿಗಳು, ಉಪನ್ಯಾಸಕ ಹಾಗೂ ಉಪನ್ಯಾಸಕೇತರ ವೃಂದ ಉಪಸ್ಥಿತರಿದ್ದರು. ಉಪನ್ಯಾಸಕಿ ವರ್ಷಾ ಮೊಳೆಯಾರ ಕಾರ್ಯಕ್ರಮ ನಿರೂಪಿಸಿದರು. ಪ್ರಯೋಗಾಲಯ ಸಹಾಯಕ ಮುರಳಿ ಮೋಹನ್ ಸಹಕರಿಸಿದರು.