ಪುತ್ತೂರು: ನಗರದ ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ಅಂಬಿಕಾ ವಿದ್ಯಾಲಯ ಹತ್ತನೇ ವರ್ಷದ ಸಂಭ್ರಮದಲ್ಲಿದ್ದು, ಆ ಪ್ರಯುಕ್ತ ’ದಶಾಂಬಿಕೋತ್ಸವ’ ಹೆಸರಿನಲ್ಲಿ ವರ್ಷಪೂರ್ತಿ ನಾನಾ ಬಗೆಯ ಸಾಂಸ್ಕೃತಿಕ, ಸಾಮಾಜಿಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಎಲ್ಲಾ ಕಾರ್ಯಕ್ರಮಗಳ ಸಮಾರೋಪ ಸಮಾರಂಭ ಏ.೨೫ರಂದು ಅಂಬಿಕಾ ವಿದ್ಯಾಲಯ ಸಿಬಿಎಸ್‌ಇ ಸಂಸ್ಥೆಯ ಆವರಣದ ಶ್ರೀ ಶಂಕರ ಸಭಾಭವನದಲ್ಲಿ ನಡೆಯಲಿದೆ ಎಂದು ಅಂಬಿಕಾ ವಿದ್ಯಾಲಯದ ಸಂಚಾಲಕ ಸುಬ್ರಹ್ಮಣ್ಯ ನಟ್ಟೋಜ ಹೇಳಿದರು.
ಶೃಂಗೇರಿ ಕ್ಷೇತ್ರಕ್ಕೂ ಅಂಬಿಕಾ ವಿದ್ಯಾಸಂಸ್ಥೆಗಳಿಗೂ ಅವಿನಾಭಾವ ಸಂಬಂಧವಿದ್ದು, ಅಂಬಿಕಾ ವಿದ್ಯಾಲಯದ ನಾಮಫಲಕವನ್ನು ಶ್ರೀ ಭಾರತೀತೀರ್ಥ ಮಹಾಸನ್ನಿಧಾನಂಗಳವರು ೨೦೧೪ರಲ್ಲಿ ಅನಾವರಣಗೊಳಿಸಿದ್ದರು, ೨೦೧೬ರಲ್ಲಿ ಮಹಾಸನ್ನಿಧಾನಂಗಳವರು ತಮ್ಮ ಉತ್ತರಾಧಿಕಾರಿ ಶಿಷ್ಯರಾದ ಶ್ರೀ ವಿಧುಶೇಖರ ಬಾರತೀ ಸನ್ನಿಧಾನಂಗಳವರ ಜತೆಗೂಡಿ ಬಪ್ಪಳಿಗೆಗೆ ಆಗಮಿಸಿ ವಸತಿಯುತ ಅಂಬಿಕಾ ಪದವಿಪೂರ್ವ ವಿದ್ಯಾಲಯವನ್ನು ಲೋಕಾರ್ಪಣೆಗೊಳಿಸಿದ್ದರು. ೨೦೨೧ರಲ್ಲಿ ಅಂಬಿಕಾ ವಿದ್ಯಾಲಯಕ್ಕೆ ಸಿಬಿಎಸ್‌ಇ ಮಾನ್ಯತೆ ದೊರಕಿದಾಗ ಶ್ರೀ ವಿಧುಶೇಖರ ಭಾರತೀ ಸನ್ನಿಧಾನಂಗಳವರು ಶೃಂಗೇರಿಯಲ್ಲಿ ’ಅಂಬಿಕಾ ವಿದ್ಯಾಲಯ ಸಿಬಿಎಸ್‌ಇ’ ಎಂಬ ನಾಮಫಲಕವನ್ನು ಅನಾವರಣಗೊಳಿಸುವ ಮೂಲಕ ಪುತ್ತೂರಿನ ಮೊತ್ತಮೊದಲ ಸಿಬಿಎಸ್‌ಇ ಸಂಸ್ಥೆ ಲೋಕಾರ್ಪಣೆಗೊಂಡಿತು ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಶ್ರೀ ಭಾರತೀತೀರ್ಥ ಮಹಾಸನ್ನಿಧಾನಂಗಳವರು ಶೃಂಗೇರಿಯಲ್ಲಿ ಲೋಕಾರ್ಪಣೆಗೊಳಿಸಿದ ಅಂಬಿಕಾ ವಿದ್ಯಾಲಯದ ಹತ್ತನೆಯ ವರ್ಷದ ಸಂಭ್ರಮದ ಸಮಾರೋಪಕ್ಕೆ ಮಹಾಸನ್ನಿಧಾನಂಗಳವರ ಶಿಷ್ಯರಾದ ಶ್ರೀ ವಿಧುಶೇಖರ ಭಾರತೀ ಸನ್ನಿಧಾನಂಗಳವರು ಆಗಮಿಸುತ್ತಿರುವುದು ಸುಕೃತಪುಣ್ಯದಂತೆನಿಸಿದೆ. ಏ.೨೪ರಂದು ಸಾಯಂಕಾಲ ೬ಕ್ಕೆ ಪೋಳ್ಯ ಲಕ್ಷ್ಮೀ ವೇಂಕಟರಮಣ ಮಠದ ಸಮೀಪದಿಂದ ವಾಹನ ಜಾಥಾ ನಡೆಯಲಿದ್ದು, ಪೂರ್ಣಕುಂಭ ಸ್ವಾಗತ, ಧೂಳೀ ಪಾದಪೂಜೆ ನಡೆಯಲಿದೆ. ರಾತ್ರಿ ೮ ಗಂಟೆಯಿಂದ ಬಪ್ಪಳಿಗೆಯ ಅಂಬಿಕಾ ಪದವಿಪೂರ್ವ ವಿದ್ಯಾಲಯದಲ್ಲಿ ಶ್ರೀ ಚಂದ್ರಮೌಳೀಶ್ವರ ಪೂಜೆ ನಡೆಯಲಿದೆ ಎಂದರು.
ಏ.೨೫ರಂದು ಅಂಬಿಕಾ ಮಹಾವಿದ್ಯಾಲಯದಲ್ಲಿ ನಡೆಯುವ ಸರಸ್ವತಿ ಹೋಮದ ಪೂರ್ಣಾಗುತಿಯಲ್ಲಿ ಭಾಗವಹಿಸುವ ಶೃಂಗೇರಿ ಶ್ರೀ ವಿಧುಶೇಖರ ಭಾರತೀ ಸನ್ನಿಧಾನಂಗಳವರು, ೧೦ಗಂಟೆಗೆ ಅಭಿವಂದನಾ ಕಾರ್ಯಕ್ರಮ ನಡೆಯಲಿದೆ. ಪುತ್ತೂರಿಗೆ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಸಾರ್ವಜನಿಕ ಭಕ್ತಾದಿಗಳಿಗೆ ಪಾದಪೂಜೆ, ಫಲಸಮರ್ಪಣೆ, ಭಿಕ್ಷಾವಂದನೆಗೆ ಅವಕಾಶ ನೀಡಲಾಗುತ್ತಿದೆ. ಕಾರ್ಯಕ್ರಮದಲ್ಲಿ ಭಾಗಿಯಾಗುವ ಎಲ್ಲಾ ಭಕ್ತಾದಿಗಳಿಗೂ ಶ್ರೀ ಗುರುಗಳು ಮಂತ್ರಕಾಕ್ಷತೆ ನೀಡಿ ಹರಸಲಿದ್ದಾರೆ. ಅಭಿವಂದನಾ ನುಡಿಯನ್ನು ತತ್ತ್ವಶಾಸ್ತ್ರ ಉಪನ್ಯಾಸಕ ತೇಜಶಂಕರ ಸೋಮಯಾಜಿ ನಡೆಸಲಿದ್ದಾರೆ ಎಂದು ತಿಳಿಸಿದರು.
ಶ್ರೀಮಜ್ಜಗದ್ಗುರು ಅಭಿನಂದನಾ ಸಮಿತಿ ಅಧ್ಯಕ್ಷ ಶಶಾಂಕ್ ಕೊಟೇಚಾ, ಪ್ರಧಾನ ಕಾರ್ಯದರ್ಶಿ ಬಿ. ಐತಪ್ಪ ನಾಯ್ಕ್, ಸಂಘಟನಾ ಕಾರ್ಯದರ್ಶಿ ಬಾಲಕೃಷ್ಣ ಬೋರ್ಕರ್, ಶಿಕ್ಷಕ ರಕ್ಷಕ ಸಮಿತಿ ಅಧ್ಯಕ್ಷೆ ಸೀಮಾ ನಾಗರಾಜ್ ಮತ್ತಿತರರು ಉಪಸ್ಥಿತರಿದ್ದರು.