ಜ್ಞಾನದಿಂದ ದೇಶದ ಅಸ್ತಿತ್ವ ಉಳಿವು - ಹಾರಿಕಾ ಮಂಜುನಾಥ್ ಅಭಿಮತ - ಪಾರಂಪರಿಕ ದಿನಾಚರಣೆ

PTR_26 OCT_6
Published on

ಪುತ್ತೂರು: ಸಾವಿರಾರು ವರ್ಷಗಳ ದಾಳಿಯ ನಂತರವೂ ಭಾರತ ತನ್ನ ಅಸ್ತಿತ್ವವನ್ನು ಕಳೆದುಕೊಳ್ಳದೆ ಉಳಿದಿರುವುದು ಇಲ್ಲಿನ ಜ್ಞಾನ ರಾಶಿಯ ಕಾರಣದಿಂದಾಗಿದೆ. ನಮ್ಮ ಪರಂಪರೆಯು ಸಂಪತ್ತಿಗಿಂತ ಜ್ಞಾನ ಮಿಗಿಲೆಂಬ ಆದರ್ಶವನ್ನು ತಲೆತಲಾಂತರಗಳಿಂದ ಪಸರಿಸುತ್ತಾ ಬಂದಿದೆ. ಇದನ್ನು ಮುಂದುವರಿಸುತ್ತಾ ಮುಂದಿನ ಪೀಳಿಗೆಗೆ ಜ್ಞಾನವಾರಿಽಯನ್ನು ಹರಿಸುವ ಜವಾಬ್ದಾರಿ ನಮ್ಮ ಮೇಲಿದೆ ಎಂದು ವಾಗ್ಮಿ ಹಾರಿಕಾ ಮಂಜುನಾಥ್ ಹೇಳಿದರು.

ಅಂಬಿಕಾ ವಿದ್ಯಾಲಯ ಸಿಬಿಎಸ್‌ಇ ಹಾಗೂ ಅಂಬಿಕಾ ಪದವಿಪೂರ್ವ ವಿದ್ಯಾಲಯಗಳ ಆಶ್ರಯದಲ್ಲಿ ಆಯೋಜಿಸಲಾದ ಪಾರಂಪರಿಕ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ರಾಜಶ್ರೀ ನಟ್ಟೋಜ ಮಾತನಾಡಿ, ಪಾರಂಪರಿಕ ದಿನಾಚರಣೆಯ ನೆಲೆಯಲ್ಲಿ ಪರಂಪರೆಯಿಂದ ಸಾಗಿಬಂದ ವಸ್ತ್ರ ಧರಿಸುವುದರೊಂದಿಗೆ ಅದರ ಹಿನ್ನೆಲೆ, ಅದಕ್ಕಿರುವ ಪಾವಿತ್ರ್ಯವನ್ನು ಅರ್ಥ ಮಾಡಿಕೊಳ್ಳಬೇಕು. ಹಣೆಗೆ ಕುಂಕುಮ ಧರಿಸುವುದರ ಹಿಂದೆ ಆಧ್ಯಾತ್ಮಿಕವಾದ ಕಾರಣಗಳಿವೆ. ಹಣೆಗೆ ಹಚ್ಚುವ ಕುಂಕುಮ, ಗಂಧವೇ ಮೊದಲಾದವುಗಳು ನಮ್ಮನ್ನು ಜಾಗೃತಾವಸ್ಥೆಯಲ್ಲಿಡುವಂತೆ ಮಾಡುವ ಚೈತನ್ಯವನ್ನು ಪ್ರೇರೇಪಿಸುತ್ತವೆ ಎಂದರು.

ಹಾರಿಕಾ ಮಂಜುನಾಥ್ ಹಾಗೂ ಅವರ ಪಾಲಕರನ್ನು ಸನ್ಮಾನಿಸಲಾಯಿತು. ಕಾಲೇಜು ವಾರ್ಷಿಕೋತ್ಸವ ಪ್ರಯುಕ್ತ ನಡೆಸಲಾದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ಅಧ್ಯಕ್ಷತೆಯನ್ನು ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಸುಬ್ರಹ್ಮಣ್ಯ ನಟ್ಟೋಜ ವಹಿಸಿದ್ದರು. ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಆಡಳಿತ ಮಂಡಳಿ ಸದಸ್ಯರಾದ ಸುರೇಶ ಶೆಟ್ಟಿ, ಡಾ.ಎಚ್.ಮಾಧವ ಭಟ್, ಪ್ರಸನ್ನ ಭಟ್ ಉಪಸ್ಥಿತರಿದ್ದರು.

ನೆಲ್ಲಿಕಟ್ಟೆ ಅಂಬಿಕಾ ಪದವಿಪೂರ್ವ ವಿದ್ಯಾಲಯದ ಪ್ರಾಚಾರ್ಯ ಸತ್ಯಜಿತ್ ಉಪಾಧ್ಯಾಯ ಸ್ವಾಗತಿಸಿದರು. ಬಪ್ಪಳಿಗೆಯ ಅಂಬಿಕಾ ಪದವಿಪೂರ್ವ ವಿದ್ಯಾಲಯದ ಪ್ರಾಚಾರ್ಯೆ ಸುಚಿತ್ರಾ ಪ್ರಭು ವಂದಿಸಿದರು. ಉಪನ್ಯಾಸಕಿಯರಾದ ಅಪರ್ಣಾ ಉಪಾಧ್ಯಾಯ, ಚೈತ್ರಿಕಾ ನನ್ಯ, ಜಯಂತಿ ಹೊನ್ನಮ್ಮ ಹಾಗೂ ಅಕ್ಷತಾ ಬಹುಮಾನಿತರ ಪಟ್ಟಿ ವಾಚಿಸಿದರು. ವಿದ್ಯಾರ್ಥಿಗಳಾದ ಅನಘ ಶೆಟ್ಟಿ ಹಾಗೂ ಶ್ರೀವತ್ಸ ಕಾರ್ಯಕ್ರಮ ನಿರ್ವಹಿಸಿದರು.

ಹಿಂದು ಸಮಾಜಕ್ಕಾಗಿ ದೇಶಾದ್ಯಂತ ಸಂಚರಿಸಿ ಜಾಗೃತಿ ಮೂಡಿಸುವ ಹಾರಿಕಾ ಮಂಜುನಾಥ್ ಅಂಥವರ ಬಗೆಗೆ ಸಮಾಜಕ್ಕೂ ಜವಾಬ್ದಾರಿ ಇರಬೇಕಾದದ್ದು ಅತ್ಯಂತ ಅಗತ್ಯ.

| ಸುಬ್ರಹ್ಮಣ್ಯ ನಟ್ಟೋಜ ಅಧ್ಯಕ್ಷರು, ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net