

ಪುತ್ತೂರು: ಸಾಹಿತ್ಯ ಮತ್ತು ಪತ್ರಿಕೋದ್ಯಮ ಭಿನ್ನ ಸಂಗತಿಗಳಲ್ಲ. ಸಾಹಿತ್ಯದಲ್ಲಿನ ವಿವಿಧ ಪ್ರಕಾರಗಳಂತೆ ಪತ್ರಿಕಾ ಸಾಹಿತ್ಯವೂ ಒಂದು ಪ್ರಕಾರ. ಆದರೆ ಪತ್ರಿಕಾ ಸಾಹಿತ್ಯ ಇತರ ಸಾಹಿತ್ಯಕ್ಕಿಂತ ವೇಗವಾಗಿ ಸೃಷ್ಟಿಯಾಗುವುದರಿಂದ ಅವಸರದ ಸಾಹಿತ್ಯ ಎಂದೂ ಕರೆಯುತ್ತಾರೆ. ಸಾಹಿತ್ಯದ ಆಸಕ್ತಿ ಇಲ್ಲದ ವ್ಯಕ್ತಿ ಪತ್ರಕರ್ತನಾಗಿ ಯಶಸ್ಸು ಪಡೆಯುವುದಕ್ಕೆ ಸಾಧ್ಯವಿಲ್ಲ ಎಂದು ಬಪ್ಪಳಿಗೆ ಅಂಬಿಕಾ ಮಹಾವಿದ್ಯಾಲಯದ ಪ್ರಾಚಾರ್ಯ ರಾಕೇಶ ಕುಮಾರ್ ಕಮ್ಮಜೆ ಹೇಳಿದರು.
ಕಾಲೇಜಿನ ಕನ್ನಡ ವಿಭಾಗದ ಅಭಿಜ್ಞಾನ ಸಾಹಿತ್ಯ ವೇದಿಕೆ ಆಶ್ರಯದಲ್ಲಿ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಸಾಹಿತ್ಯ ಮತ್ತು ಪತ್ರಿಕೋದ್ಯಮ ಎಂಬ ವಿಷಯದ ಬಗ್ಗೆ ಮಾತನಾಡಿದರು.
ಎಷ್ಟೋ ಸಾಹಿತಿಗಳು ಪತ್ರಕರ್ತರಾಗಿ ಕಾರ್ಯನಿರ್ವಹಿಸಿದ ಸಾಕಷ್ಟು ಉದಾಹರಣೆಗಳಿವೆ. ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಮಾಸ್ತಿ ವೆಂಕಟೇಶ ಅಯ್ಯಂಗಾರ್ ಅವರು ಜೀವನ ಅನ್ನುವ ಪತ್ರಿಕೆ ನಡೆಸುತ್ತಿದ್ದರು. ಸಾಹಿತಿ ಡಿ.ವಿ. ಗುಂಡಪ್ಪನವರೂ ಪತ್ರಿಕೆಗಳನ್ನು ನಡೆಸಿದವರು. ಲಂಕೇಶ್ ಅವರು ಸಾಹಿತಿಯಾಗಿ, ಪತ್ರಕರ್ತನಾಗಿ ಗುರುತಿಸಿಕೊಂಡವರು. ಹೀಗೆ ಆ ಕಾಲದಿಂದ ತೊಡಗಿ ಈ ಕಾಲದವರೆಗೂ ಸಾಹಿತ್ಯದ ಭಾಗವಾಗಿ ಪತ್ರಿಕೋದ್ಯಮ ಬೆಳೆದುಬಂದಿದೆ ಎಂದರು.
ಆಂಗ್ಲ ವಿಭಾಗದ ಮುಖ್ಯಸ್ಥ ಗಣೇಶ ಪ್ರಸಾದ್ ಎ.ಅಧ್ಯಕ್ಷತೆ ವಹಿಸಿದ್ದರು. ಕಾಲೇಜಿನ ಐಕ್ಯುಎಸಿ ಘಟಕದ ಸಂಯೋಜಕ ಚಂದ್ರಕಾಂತ ಗೋರೆ, ಕನ್ನಡ ವಿಭಾಗದ ಮುಖ್ಯಸ್ಥೆ ಜಯಂತಿ ಪಿ.ಉಪಸ್ಥಿತರಿದ್ದರು.
ಕನ್ನಡ ಉಪನ್ಯಾಸಕ ಗಿರೀಶ ಭಟ್ ಕುವೆತ್ತಂಡ, ಸಂಸ್ಕೃತ ವಿಭಾಗ ಮುಖ್ಯಸ್ಥೆ ಶಶಿಕಲಾ ವರ್ಕಾಡಿ, ವಾಣಿಜ್ಯ ವಿಭಾಗ ಮುಖ್ಯಸ್ಥೆ ಅನನ್ಯಾ ವಿ., ಉಪನ್ಯಾಸಕಿ ಶ್ರೀಕೀರ್ತನಾ, ಇಂಗ್ಲಿಷ್ ಉಪನ್ಯಾಸಕಿ ಸಂಧ್ಯಾ ಎಂ., ಪತ್ರಿಕೋದ್ಯಮ ಉಪನ್ಯಾಸಕ ಹರ್ಷಿತ್ ಪಿಂಡಿವನ, ವಿದ್ಯಾರ್ಥಿಗಳು ಹಾಜರಿದ್ದರು. ತೃಪ್ತಿ ಎಂ.ಪ್ರಾರ್ಥಿಸಿದರು. ಅನ್ವಿತ್ ಸ್ವಾಗತಿಸಿದರು. ಅಕ್ಷಿತಾ ವಂದಿಸಿದರು. ದೀಪಾ ನಿರೂಪಿಸಿದರು.
ಈಗ ಪುಸ್ತಕ ಓದುವವರ ಸಂಖ್ಯೆ ಕುಸಿಯುತ್ತಿದೆ. ಆದರೆ ಪ್ರತಿದಿನ ಪತ್ರಿಕೆಗಳನ್ನಾದರೂ ಓದುತ್ತಿದ್ದರೆ ನಮ್ಮ ಭಾಷೆ ಉತ್ಕೃಷ್ಟತೆಯೆಡೆಗೆ ಸಾಗುತ್ತದೆ. ನಾವು ಮಾಡುವ ತಪ್ಪುಗಳೇನು ಅನ್ನುವುದನ್ನು ಪತ್ರಿಕೆಗಳನ್ನು ಓದುವುದರಿಂದ ಅರ್ಥ ಮಾಡಿಕೊಳ್ಳುವುದಕ್ಕೆ ಸಾಧ್ಯ.
| ಗಣೇಶ ಪ್ರಸಾದ್ ಎ., ಮುಖ್ಯಸ್ಥ
ಕಾಲೇಜಿನ ಆಂಗ್ಲ ವಿಭಾಗದ