

ಮೈಸೂರು: ಡಾ.ಬಿ.ಆರ್.ಅಂಬೇಡ್ಕರ್ ಅವರ ಅಂತರಂಗವನ್ನು ಅನಾವರಣ ಮಾಡುವುದು ಭಾರತದ ಪ್ರತಿಯೊಬ್ಬ ಪ್ರಜ್ಞಾವಂತ ನಾಗರಿಕನ ಹೊಣೆಯಾಗಿದೆ ಎಂದು ವಾಗ್ಮಿ ಸುಧಾಕರ್ ಹೊಸಳ್ಳಿ ಹೇಳಿದರು.
ಸಾಮರಸ್ಯ ವೇದಿಕೆಯು ಮಾಧವ ಕೃಪದಲ್ಲಿ ಬುಧವಾರ ಆಯೋಜಿಸಿದ್ದ ಡಾ.ಬಿ.ಆರ್.ಅಂಬೇಡ್ಕರ್ ಅವರ 67ನೇ ಮಹಾ ಪರಿನಿರ್ವಾಣ ದಿನ ಕಾರ್ಯಕ್ರಮದಲ್ಲಿ ‘ಅಂಬೇಡ್ಕರ್ ಅವರ ಅಂತರಂಗದ ಅನಾವರಣ’ ವಿಷಯದ ಬಗ್ಗೆ ಉಪನ್ಯಾಸ ನೀಡಿದರು.
ಡಾ.ಬಿ.ಆರ್.ಅಂಬೇಡ್ಕರ್ ಎಂದಾಕ್ಷಣ ಸಂವಿಧಾನ ಶಿಲ್ಪಿ, ಸಮಾನತೆಯ ಹರಿಕಾರ…ಹೀಗೆ ನಾನಾ ವಿಷಯ ನೆನಪಾಗುತ್ತದೆ. ಭಾರತದ ಗಡಿದಾಟಿ ಅಂಬೇಡ್ಕರ್ ಸ್ಮರಣೆ ನಡೆಯುತ್ತಿದೆ. ಇಂತಹ ದಿನದಲ್ಲಿ ಅಂಬೇಡ್ಕರ್ ಅವರನ್ನು ಕೇವಲ ಪೂಜೆಗೆ, ಆಚರಣೆಗೆ ಸೀಮಿತ ಮಾಡುವುದು ಎಷ್ಟು ಸರಿ? ಅವರು ಯಾವ ಸಂಗತಿಗಳನ್ನು ಸಮಾಜಕ್ಕೆ ತಿಳಸಬೇಕು ಎನ್ನುತ್ತಿದ್ದರು ಅವು ಸಮಾಜಕ್ಕೆ ತಲುಪಿದವಾ ಎಂದು ಪ್ರಶ್ನೆ ಮಾಡಿಕೊಳ್ಳಬೇಕಿದೆ. ಒಂದು ವೇಳೆ ತಲುಪಿದ್ದರೂ ಯಾವ ಮಾದರಿಯಲಿ ತಲುಪಿವೆ ಎಂದು ಪರಾಮರ್ಶೆ ಮಾಡಿಕೊಳ್ಳಬೇಕು ಎಂದರು.
ಅಂಬೇಡ್ಕರ್ ಅವರ ಬಹುಪಾಲು ಸತ್ಯಗಳನ್ನು, ಚಿಂತನೆಗಳನ್ನು ನಕಾರಾತ್ಮಕವಾಗಿ ಬಿಂಬಿಸಬಾರದು. ಇದನ್ನು ಮಾರ್ಪಾಡು ಮಾಡಬೇಕಾದ ಹೊಣೆಗಾರಿಕೆ ನಮ್ಮ ಮೇಲೆ ಇದೆ ಎಂದರು.
ಇಡೀ ಜಗತ್ತಿನ ದೃಷ್ಟಿಯನ್ನು ತನ್ನ ಕಡೆ ಸೆಳೆಯುವಲ್ಲಿ ಭಾರತಕ್ಕೆ ಅನೇಕ ಸಂಗತಿಗಳಿವೆ. ಸಂವಿಧಾನದ ಕಾರಣಕ್ಕಾಗಿ ಭಾರತದ ಕಡೆ ತಿರುಗಿ ನೋಡುವ ಸಂಖ್ಯೆಯೂ ದೊಡ್ಡದಾಗಿದೆ. ಇಂತಹ ಸಂವಿಧಾನವನ್ನು ಅಂಬೇಡ್ಕರ್ ಅವರು ಅಪಾರ ಶ್ರಮದೊಂದಿಗೆ ರಚನೆ ಮಾಡಿಕೊಟ್ಟಿದ್ದಾರೆ. ಆದರೆ, ಈಗ ಎಲ್ಲಿ ಹುಡುಕಿದರೂ ಸಂವಿಧಾನದ ಹಳೆಯ ಪ್ರಸ್ತಾವನೆ ಸಿಗುವುದಿಲ್ಲ. ಸಂವಿಧಾನದ ಮೂಲ ಪ್ರಸ್ತಾವನೆ ಬದಲಿಗೆ ಸುಳ್ಳು ತೋರಿಸುವ ಕೆಲಸ ಮಾಡಲಾಗಿದೆ ಎಂದರು.
ಅಂಬೇಡ್ಕರ್ ಅವರು ತಮ್ಮ ಬದುಕಿನ ಅವಧಿಯಲ್ಲಿ ಜಾತ್ಯತೀತತೆಯನ್ನು ಸಂವಿಧಾನದ ಭಾಗವಾಗಿ ಮಾಡಲು ಸಿದ್ಧರಿರಲಿಲ್ಲ. ಹಾಗಾಗಿ ಸಂವಿಧಾನ ಓದುವ ವರ್ಗಕ್ಕೆ ಬಾಬಾ ಸಾಹೇಬರೇ ಜಾತ್ಯತೀತತೆ ಬಗ್ಗೆ ಹೇಳಿದ್ದಾರೆ ಎಂಬ ಭಾವನೆ ಬಿತ್ತಲಾಗಿದೆ. ಮೂಲ ವಿಷಯ ವಸ್ತುವನ್ನು ಮರೆಮಾಡಲಾಗಿದೆ. ಹಾಗಾಗಿ, ನಾವು ಅದರ ಸತ್ಯದ ಬಗ್ಗೆ ಸಾರಿ ಸಾರಿ ಹೇಳಬೇಕಿದೆ ಎಂದರು.
‘ಭಾರತವನ್ನು ಅಂಬೇಡ್ಕರ್ ಅವರು ಪ್ರೀತಿಸಿದಂತೆ ನೀವು ಪ್ರೀತಿಸಬೇಕು. ಅವರು ಗೌರವಿಸಿದಂತೆ ನೀವು ಗೌರವಿಸಬೇಕು’ ಎನ್ನುವ ಮಾತನ್ನು ಯುವ ಸಮುದಾಯಕ್ಕೆ ಹೇಳಿಕೊಟ್ಟರೆ ಭಾರತದ ಸಮಾಜಿಕ ಸಮಸ್ಯೆ ಬಗೆ ಹರಿಯುತ್ತದೆ. ಆದರೆ, ಇಂದು ಅಂಬೇಡ್ಕರ್ ಅವರ ಭಾವಚಿತ್ರವನ್ನು ದೇಶ ವಿಭಜನೆಯ ಹೋರಾಟದಲ್ಲಿ ಬಳಕೆ ಮಾಡಿಕೊಳ್ಳಲಾಗುತ್ತಿದೆ ಎಂದು ಬೇಸರ ವ್ಯಕ್ತ ಪಡಿಸಿದರು.
ಹಿರಿಯ ಮುಖಂಡ ಮಾ.ವೆಂಕಟರಾಮ್, ನಿವೃತ್ತ ಡಿಸಿಪಿ ಶಿವರಾಜು ಇದ್ದರು.