ಅಂಬೇಡ್ಕರ್ ಚಿಂತನೆ ಇಂದಿನ ಸಮಾಜಕ್ಕೆ ಅಗತ್ಯ

6 vikram 6
Published on

ವಿಜಯವಾಣಿ ಸುದ್ದಿಜಾಲ ಧಾರವಾಡ
ಡಾ. ಅಂಬೇಡ್ಕರ್ ಚಿಂತನೆಗಳು ಇಂದಿನ ಸಮಾಜಕ್ಕೆ ಅಗತ್ಯವಾಗಿದೆ. ಅಂಬೇಡ್ಕರ್ ಒಬ್ಬ ಆಧುನಿಕ ಭಾರತದ ಸಂವಿಧಾನ ಪಿತಾಮಹರಾಗಿದ್ದು ಒಬ್ಬ ದಾರ್ಶನಿಕರಾಗಿದ್ದಾರೆ ಎಂದು ಕರ್ನಾಟಕ ಕಾನೂನು ವಿಶ್ವ ವಿದ್ಯಾಲಯದ ಕುಲಪತಿ ಪ್ರೊ. ಸಿ. ಬಸವರಾಜು ಅಭಿಪ್ರಾಯಪಟ್ಟರು.
ನಗರದ ಕರ್ನಾಟಕ ವಿಶ್ವ ವಿದ್ಯಾಲಯದ ಡಾ. ಬಿ.ಆರ್. ಅಂಬೇಡ್ಕರ್ ಅಧ್ಯಯನ ವಿಭಾಗವು ಕವಿವಿ ಸೆನೆಟ್ ಸಭಾಂಗಣದಲ್ಲಿ ಬುಧವಾರ ಏರ್ಪಡಿಸಿದ್ದ ಡಾ. ಬಿ.ಆರ್.ಅಂಬೇಡ್ಕರರ 67ನೇ ಮಹಾಪರಿನಿರ್ವಾಣ ದಿನ ಸಮಾರಂಭದಲ್ಲಿ ಅವರು ಮಾತನಾಡಿದರು.
ಶೂನ್ಯದಿಂದ ಎತ್ತರಕ್ಕೆ ಏರಿದವರಲ್ಲಿ ಅಂಬೇಡ್ಕರ್ ಒಬ್ಬರು. ಅವರು ಎಲ್ಲರನ್ನು ಒಳಗೊಳ್ಳುವ ಸಾಮಾಜಿಕ ನ್ಯಾಯವನ್ನು ನೀಡುವಲ್ಲಿ ಭಾರತಕ್ಕೆ ಸಂವಿಧಾನ ನೀಡುವ ಮೂಲಕ ತಮ್ಮದೆ ಆದ ಕೊಡುಗೆ ನೀಡಿದ್ದಾರೆ. ಅಂಬೇಡ್ಕರ ಅವರನ್ನು ಒಂದೇ ಜಾತಿಗೆ ಸೀಮಿತಗೊಳಿಸಿರುವುದು ವಿಷಾದದ ಸಂಗತಿ. ದೇಶದ ಎಲ್ಲ ಜನರು ಗೌರವಯುತ ಜೀವನ ನಡೆಸಬೇಕು ಎಂಬ ಉದ್ದೇಶದಿಂದ ಹಲವು ರೀತಿಯ ಕಾನೂನು ಹಕ್ಕುಗಳನ್ನು ನೀಡಿದ್ದಾರೆ ಎಂದರು.
ಡಾ. ಹ.ರಾ.ಮಹೇಶ ಮಾತನಾಡಿ, ಅಂಬೇಡ್ಕರ್ ಅವರು ಸಂವಿಧಾನದ ಮೂಲಕ ನಮ್ಮ ಮಧ್ಯೆ ಜೀವಂತವಾಗಿದ್ದಾರೆ. ಅನೇಕ ಮಹಾನ ದಾರ್ಶನಿಕರನ್ನು ಇಂದಿಗೂ ಕೇವಲ ಅವರವರ ಜಾತಿ, ಸಮುದಾಯಕ್ಕೆ ಸೀಮಿತಗೊಳಿಸುವ ಮೂಲಕ ಅವರನ್ನು ಸಂಕುಚಿತಗೊಳಿಸಿದ್ದೇವೆ. ಪ್ರತಿಯೊಬ್ಬ ಭಾರತೀಯನಿಗೂ ಅಂಬೇಡ್ಕರ್ ಹಕ್ಕುಗಳನ್ನು ನೀಡಿದ್ದಾರೆ. ಪ್ರಸ್ತುತ ವಿವಿಧ ಬೆಳವಣಿ ಗಮನಿಸಿದಾಗ ಇಂದು ಸಂವಿಧಾನ ಅಪಾಯದಲ್ಲಿರುವಂತೆ ಕಾಣುತ್ತದೆ ಎಂದರು.
ಕವಿವಿ ಕುಲಪತಿ ಪ್ರೊ.ಕೆ.ಬಿ.ಗುಡಸಿ ಅಧ್ಯಕ್ಷತೆ ವಹಿಸಿದ್ದರು. ಕವಿವಿ ಕುಲಸಚಿವ ಡಾ.ಎ ಚನ್ನಪ್ಪ , ಪ್ರೊ.ಎನ್.ವೈ. ಮಟ್ಟಿಹಾಳ, ಹಣಕಾಸು ಅಧಿಕಾರಿ ಪ್ರೊ.ಸಿ. ಕೃಷ್ಣಮೂರ್ತಿ, ಡಾ. ರವೀಂದ್ರ ಕಾಂಬಳೆ, ಪ್ರಾಧ್ಯಾಪಕರು, ವಿದ್ಯಾರ್ಥಿಗಳು, ಇತರರು ಇದ್ದರು.
ಅಂಬೇಡ್ಕರ್ ಅಧ್ಯಯನ ವಿಭಾಗದ ಸಂಯೋಜಕ ಡಾ. ಸುಭಾಸಚಂದ್ರ ನಾಟೀಕಾರ ಪ್ರಾಸ್ತಾವಿಕವಾಗಿ ಮಾತನಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net