ತಿ.ನರಸೀಪುರದಲ್ಲಿ ಅಂಬೇಡ್ಕರ್ ಸ್ತಬ್ಧಚಿತ್ರಕ್ಕೆ ಪುಷ್ಪಾರ್ಚನೆ

Samvidnana jagruthi ratha
ತಿ.ನರಸೀಪುರಕ್ಕೆ ಆಗಮಿಸಿದ ಸಂವಿಧಾನ ಜಾಗೃತಿ ಜಾಥಾ ರಥವನ್ನು ತಾಲೂಕು ಆಡಳಿತ ವತಿಯಿಂದ ಸ್ವಾಗತಿಸಲಾಯಿತು.
Published on

ತಿ.ನರಸೀಪುರ: ಪಟ್ಟಣಕ್ಕೆ ಸೋಮವಾರ ಆಗಮಿಸಿದ ಸಂವಿಧಾನ ಜಾಗೃತಿ ಜಾಥಾ ರಥವನ್ನು ಅದ್ದೂರಿಯಾಗಿ ಸ್ವಾಗತಿಸಲಾಯಿತು.

ತಹಸೀಲ್ದಾರ್ ಟಿ.ಜೆ.ಸುರೇಶ್ ಆಚಾರ್, ತಾಪಂ ಇಒ ಕೃಷ್ಣ, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಭೀಮರಾಯ ವಡ್ಡದ, ಪುರಸಭೆ ಮುಖ್ಯಾಧಿಕಾರಿ ವಸಂತಕುಮಾರಿ ಸೇರಿದಂತೆ ಹಲವರು ಅಂಬೇಡ್ಕರ್ ಸ್ತಬ್ಧಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿದರು.

ಬಳಿಕ ರಥ ಪಟ್ಟಣದ ಮಿನಿ ವಿಧಾನ ಸೌಧಕ್ಕೆ ಆಗಮಿಸಿತು. ನಂತರ ವೇದಿಕೆ ಕಾರ್ಯಕ್ರಮ ನಡೆಯಿತು. ಈ ವೇಳೆ ಸಂವಿಧಾನ ಪೀಠಿಕೆಯನ್ನು ಬೋಧಿಸಲಾಯಿತು. ಪೂರ್ಣ ಕುಂಭ ಹೊತ್ತ ಮಹಿಳೆಯರು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.ಡೊಳ್ಳು ಕುಣಿತ, ಬೊಂಬೆಯಾಟ, ವಾದ್ಯ ಮೇಳ ಮೆರುಗು ನೀಡಿದವು.

ಶಾಲಾ ಮಕ್ಕಳು ಅಂಬೇಡ್ಕರ್ ಸಹಿತ ವಿವಿಧ ನಾಯಕರ ವೇಷ ಭೂಷಣ ಧರಿಸಿ ಗಮನ ಸೆಳೆದರು. ಜಾಥಾದಲ್ಲಿ ವಿವಿಧ ಶಾಲೆಯ ಶಾಲಾ ಮಕ್ಕಳು, ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತೆಯರು, ಪೌರ ಕಾರ್ಮಿಕರು, ವಿವಿಧ ಇಲಾಖೆ ಅಧಿಕಾರಿಗಳು, ಜನಪ್ರತಿನಿಧಿಗಳು ಹೆಜ್ಜೆ ಹಾಕಿದರು. ವಿವಿಧ ಸಂಘಟನೆಗಳ ಪ್ರಮುಖರು, ಗ್ರಾಮಸ್ಥರು ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಅರಿವು ಮೂಡಿಸಿದರು. ಪಟ್ಟಣವನ್ನು ತಳಿರು ತೋರಣಗಳಿಂದ ಸಿಂಗರಿಸಲಾಗಿತ್ತು.

ಮಿನಿವಿಧಾನ ಸೌಧದ ಆವರಣದಲ್ಲಿ ನಡೆದ ವೇದಿಕೆ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದ ಅರಗು ಮತ್ತು ಬಣ್ಣ ಇಲಾಖೆಯ ಜನರಲ್ ಮ್ಯಾನೇಜರ್ ಹರಕುಮಾರ್, ಸಮಾನತೆ, ಮಾನವತಾವಾದ, ಸಮಾಜವಾದ ಹಾಗೂ ನಿರಪೇಕ್ಷೆಗಳಂತ ಮೌಲ್ಯಗಳನ್ನು ಸಂವಿಧಾನ ಜನರಿಗೆ ಕೊಡುಗೆಯಾಗಿ ನೀಡಿದೆ. ಅಂಬೇಡ್ಕರ್ ಅವರು ಕೋಟ್ಯಂತರ ಭಾರತೀಯರನ್ನು ಒಂದು ವ್ಯವಸ್ಥೆಯಲ್ಲಿ ತರುವ ಮೂಲಕ ಅತ್ಯುತ್ತಮ ಪ್ರಜಾತಂತ್ರ ರೂಪಿಸಲು ಸಂವಿಧಾನವನ್ನು ಕಾಣಿಕೆಯಾಗಿ ನೀಡಿದ್ದಾರೆ. ನಮ್ಮ ಸಂವಿಧಾನದಲ್ಲಿ ಜಾತಿ,ಧರ್ಮ, ಭಾಷೆ, ಸಂಸ್ಕೃತಿ,ಆರ್ಥಿಕ, ಸಾಮಾಜಿಕ, ರಾಜಕೀಯವನ್ನು ಗೌರವಿಸುವ ಜತೆಗೆ ಅನ್ಯರಿಗೆ ನೋವಾಗದಂತೆ ಸರ್ವರಿಗೂ ಧರ್ಮ, ಜಾತಿ, ಆಚಾರ, ವಿಚಾರಗಳನ್ನು ಆಚರಿಸಲು ಭಾರತದ ಸಾರ್ವಭೌಮತ್ವವನ್ನು ಎತ್ತಿ ಹಿಡಿದಿದೆ ಎಂದರು.

ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಚರಿಸಿದ ರಥ ಕರೋಹಟ್ಟಿ ಗ್ರಾಮಕ್ಕೆ ತೆರಳಿತು. ಕೊಳ್ಳೇಗಾಲ ಮುಖ್ಯ ರಸ್ತೆ ಬಳಿ ರಥಕ್ಕೆ ಬೀಳ್ಕೊಡಲಾಯಿತು. ಬಿಇಒ ಶೋಭಾ, ಕೃಷಿ ಇಲಾಖೆ ಸಹಾಯಕ ನಿರ್ದೇಶಕಿ ಸುಹಾಸಿನಿ,ಅಂಬೇಡ್ಕರ್ ಅಭಿವೃದ್ಧಿ ಸಂಘದ ಅಧ್ಯಕ್ಷ ಮಹದೇವಯ್ಯ, ಬಾಬು ಜಗಜೀವನ ರಾಂ ಸಂಘದ ಅಧ್ಯಕ್ಷ ಪುಟ್ಟಯ್ಯ, ತಾ.ಪಂ.ಮಾಜಿ ಉಪಾಧ್ಯಕ್ಷ ಬಿ.ಮರಯ್ಯ, ಆಲಗೂಡು ಶಿವಕುಮಾರ್, ಬಿಎಸ್‌ಪಿ ಜಿಲ್ಲಾಧ್ಯಕ್ಷ ಪುಟ್ಟಸ್ವಾಮಿ, ಪುರಸಭಾ ಸದಸ್ಯರಾದ ತುಂಬಲ ಪ್ರಕಾಶ್, ಮಂಜುನಾಥ್, ಮೂಗೂರು ಸಿದ್ದರಾಜು, ಕುಕ್ಕೂರು ಪ್ರಸನ್ನ, ಮನ್ಸೂರ್ ಅಲಿ, ಎಚ್.ಡಿ.ಮಾದಪ್ಪ, ನಂಜುಂಡಯ್ಯ, ಸೋಮಯ್ಯ, ಪುಟ್ಟಮಲ್ಲಯ್ಯ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net