ದೇಶದ ಅಖಂಡತೆಗೆ ಅಂಬೇಡ್ಕರ್ ಸೇವೆ ಅನನ್ಯ

IMG20241206111632
ಆಲೂರು ಪಟ್ಟಣದ ಬಿ.ಎಂ ರಸ್ತೆಯಲ್ಲಿರುವ ಆಟೋ ನಿಲ್ದಾಣದಲ್ಲಿ ಡಾ. ಬಾಬಾಸಾಹೇಬ್ ಅಂಬೇಡ್ಕರ ಅವರ ಮಹಾ ಪರಿನಿರ್ವಾಣ ದಿನಾಚರಣೆ ಕಾರ್ಯಕ್ರಮದಲ್ಲಿ ಮಾಜಿ ಶಾಸಕ ಎಚ್.ಕೆ.ಕುಮಾರಸ್ವಾಮಿ ಭಾಗವಹಿಸಿ ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಗೌರವ ಸಮರ್ಪಣೆ ಮಾಡಿದರು.
Published on

ಆಲೂರು: ಅಂಬೇಡ್ಕರ್ ಎಂದರೆ ಬರೀ ವ್ಯಕ್ತಿಯಲ್ಲ. ಅವರು ಮಹಾನ್ ಶಕ್ತಿ. ದೇಶದ ಅಖಂಡತೆಗೆ ಅವರ ಸೇವೆ ಅನನ್ಯವಾದುದು. ಅವರನ್ನು ಕೇವಲ ಶೋಷಿತ ವರ್ಗದ ನಾಯಕರು ಎಂದು ಭಾವಿಸುವಂತಿಲ್ಲ. ಅವರು ಸಮಾಜದ ಎಲ್ಲ ವರ್ಗಗಳ ನಾಯಕರಾಗಿದ್ದಾರೆ ಎಂದು ಮಾಜಿ ಶಾಸಕ ಎಚ್.ಕೆ.ಕುಮಾರಸ್ವಾಮಿ ಹೇಳಿದರು.

ತಾಲೂಕು ಮಹಾಬೋಧಿ ಚಾರಿಟಬಲ್ ಟ್ರಸ್ಟ್ ಹಾಗೂ ಪ್ರಗತಿಪರ ಸಂಘಟನೆಗಳಿಂದ ಆಯೋಜಿಸಿದ್ದ ಪಟ್ಟಣದ ಬಿ.ಎಂ ರಸ್ತೆಯಲ್ಲಿರುವ ಆಟೋ ನಿಲ್ದಾಣದಲ್ಲಿ ಶುಕ್ರವಾರ ಆಯೋಜಿಸಿದ್ದ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಮಹಾ ಪರಿನಿರ್ವಾಣ ದಿನವನ್ನು ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಗೌರವ ಸಮರ್ಪಿಸಿ ಮಾತನಾಡಿದರು.

ಅಂಬೇಡ್ಕರ್ ಅವರು ಸಂಘರ್ಷದ ಹಾದಿ ತುಳಿಯದೆ ಸಾಮರಸ್ಯದ ಮೂಲಕ ಸಮಾಜವು ಒಗ್ಗೂಡುವಂತೆ ಮಾಡಿದ್ದಾರೆ. ಅವರ ವ್ಯಕ್ತಿತ್ವ, ಆದರ್ಶಗಳನ್ನು ಪಾಲನೆ ಮಾಡುವ ಮೂಲಕ ಅವರಿಗೆ ಗೌರವ ಸಲ್ಲಿಸಬೇಕಿದೆ. ಇಂತಹ ವಿಶ್ವಮಾನವನಿಗೆ ತಾಲೂಕು ಆಡಳಿತ ಇಂದು ಅಪಮಾನ ಮಾಡಿದೆ. ಮಿನಿವಿಧಾನಸೌಧ ಆವರಣದಲ್ಲಿರುವ ಅಂಬೇಡ್ಕರ್ ಅವರ ಪುತ್ಥಳಿಗೆ ಮಾಲಾರ್ಪಣೆ ಮಾಡದಿರುವುದನ್ನು ಎಲ್ಲ ಮುಖಂಡರ ಪರವಾಗಿ ನಾನು ತೀವ್ರವಾಗಿ ಖಂಡಿಸುತ್ತೇನೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ನಿವೃತ್ತ ತಹಸೀಲ್ದಾರ್ ಶಾರದಾಂಬ ಮಾತನಾಡಿ, ಅಂಬೇಡ್ಕರ್ ತಮ್ಮ ಜೀವನದುದ್ದಕ್ಕೂ ಅಸ್ಪಶ್ಯತೆ, ಜಾತಿ ಪದ್ಧತಿ, ಲಿಂಗಭೇದ, ಅಸಮಾನತೆ ವಿರುದ್ಧ ಹೋರಾಡಿ ಶೋಷಿತ ಸಮುದಾಯದ ಏಳಿಗೆಗೆ ತಮ್ಮ ಜೀವನವನ್ನೇ ಮುಡಿಪಾಗಿಟ್ಟು ರಚಿಸಿದ ಸಂವಿಧಾನದಲ್ಲಿ ಎಲ್ಲರಿಗೂ ಹಕ್ಕು ಮತ್ತು ಜವಾಬ್ದಾರಿ ನೀಡಲಾಗಿದೆ. ನಾಗರಿಕರ ಹಕ್ಕುಗಳನ್ನು ಪ್ರತಿಪಾದಿಸುವುದರ ಜತೆಗೆ ಗುರುತರ ಜವಾಬ್ದಾರಿ ನಿರ್ವಹಿಸಬೇಕಿದೆ. ಯುವಜನರು ಸಂವಿಧಾನದ ಆಶಯಗಳನ್ನು ಅರ್ಥೈಸಿಕೊಳ್ಳಬೇಕಿದೆ ಎಂದು ಸಲಹೆ ನೀಡಿದರು.

ಕಾರ್ಯಕ್ರಮಕ್ಕೂ ಮುನ್ನ ಮಿನಿ ವಿಧಾನಸೌಧದ ಆವರಣದಲ್ಲಿ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಮಾಜಿ ಶಾಸಕ ಎಚ್.ಕೆ.ಕುಮಾರಸ್ವಾಮಿ ಅವರು ಮಾಲಾರ್ಪಣೆ ಮಾಡಿದರು. ಇದೇ ಸಂದರ್ಭದಲ್ಲಿ ರಕ್ತದಾನ ಉಚಿತ ಶಿಬಿರವನ್ನು ಏರ್ಪಡಿಸಲಾಗಿತ್ತು. ಸುಮಾರು 46ಕ್ಕೂ ಹೆಚ್ಚು ಜನ ಸ್ವಯಂ ಪ್ರೇರಿತರಾಗಿ ರಕ್ತದಾನ ಮಾಡಿದರು. ಎಲ್ಲರಿಗೂ ಲಘು ಉಪಾಹಾರದ ವ್ಯವಸ್ಥೆಯನ್ನು ಏರ್ಪಡಿಸಲಾಗಿತ್ತು.

ಕಾರ್ಯಕ್ರಮದಲ್ಲಿ ಎಸ್.ಸಿ.ಐ ಸಂಸ್ಥೆಯ ರಾಷ್ಟ್ರೀಯ ಉಪಾಧ್ಯಕ್ಷ ಎಂ.ಆರ್.ಜಹೇಶ್, ಬೆಂಗಳೂರು ನಗರ ಅಧ್ಯಕ್ಷ ಸಿದ್ಧಗಂಗಯ್ಯ, ಸೂಪರಿಂಟೆಂಡೆಂಡ್ ಇಂಜಿನಿಯರ್ ಹನುಮಂತರಾಯಪ್ಪ, ಮಹಾಬೋಧಿ ಚಾರಿಟಬಲ್ ಟ್ರಸ್ಟ್‌ನ ತಾಲೂಕು ಅಧ್ಯಕ್ಷ ಶಿವಾನಂದ, ಉಪಾಧ್ಯಕ್ಷ ಶಿವಣ್ಣ, ಖಜಾಂಚಿ ರವಿ, ಕಾರ್ಯದರ್ಶಿ ಮಂಜು, ತಾಲೂಕು ಎಸ್ಸಿ, ಎಸ್ಟಿ ಘಟಕದ ಅಧ್ಯಕ್ಷ ಅಜ್ಜನಹಳ್ಳಿ ಲೋಕೇಶ್, ಕರವೇ ಜಿಲ್ಲಾ ಕಾರ್ಯದರ್ಶಿ ರಘು ಪಾಳ್ಯ, ಕಾಂಗ್ರೆಸ್‌ನ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶಾಂತಕೃಷ್ಣ ಸೇರಿದಂತೆ ಮಹಾಬೋಧಿ ಚಾರಿಟಬಲ್ ಟ್ರಸ್ಟಿಗಳು ಹಾಗೂ ತಾಲೂಕಿನ ವಿವಿಧ ದಲಿತಪರ ಸಂಘಟನೆಯ ಮುಖಂಡರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net