ಅಂಬೇಡ್ಕರ್ ಹೆಸರು ಕಾಂಗ್ರೆಸ್‌ನ ಚುನಾವಣಾ ಪ್ರಚಾರದ ಸರಕು

savndana book
Published on

ಮಡಿಕೇರಿ: ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರನ್ನು ಇಡೀ ಪ್ರಪಂಚ ಕೊಂಡಾಡಿದರೂ ಕಾಂಗ್ರೆಸ್ ಮಾತ್ರ ಅವರನ್ನು ನಿರಂತರವಾಗಿ ಅವಮಾನಿಸಿ ಸಿಗಬೇಕಾದ ಗೌರವವನ್ನು ನೀಡದೆ, ಇದೀಗ ಅವರ ಹೆಸರನ್ನು ಚುನಾವಣಾ ಪ್ರಚಾರದ ಸರಕನ್ನಾಗಿ ಮಾಡಿಕೊಂಡಿದೆ ಎಂದು ಮಾಜಿ ಸಚಿವ ಎನ್.ಮಹೇಶ್ ತೀವ್ರ ವಾಗ್ದಾಳಿ ನಡೆಸಿದರು.

ನಗರದ ಅಂಬೇಡ್ಕರ್ ಭವನದಲ್ಲಿ ಇತ್ತೀಚೆಗೆ ಸಿಟಿಜನ್ಸ್ ಫಾರ್ ಸೋಶಿಯಲ್ ಜಸ್ಟೀಸ್ ಸಂಘಟನೆ ವತಿಯಿಂದ ನಡೆದ ಸಂವಿಧಾನ ಸಮ್ಮಾನ್ ಅಭಿಯಾನ ಮತ್ತು ಸಂವಿಧಾನ ಬದಲಿಸಿದ್ದು ಯಾರು? ಪುಸ್ತಕ ಲೋಕಾರ್ಪಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಅಂಬೇಡ್ಕರ್ ಅವರಿಗೆ ಅವಮಾನ ಹಾಗೂ ಸನ್ಮಾನ ಮಾಡಿದವರು ಯಾರು?. ಸಂವಿಧಾನವನ್ನು ದುರ್ಬಲ ಹಾಗೂ ಸಬಲ ಮಾಡಿದವರು ಯಾರು? ಎಂಬ ಪ್ರಶ್ನೆಗೆ ಉತ್ತರ ಹುಡಕಲು ಈ ಅಭಿಯಾನ ಕೈಗೊಳ್ಳಲಾಗಿದೆ. ಇತ್ತೀಚಿನ ವರ್ಷಗಳಲ್ಲಿ ಅಂಬೇಡ್ಕರ್ ಹೆಸರು ಕಾಂಗ್ರೆಸ್ ಹಾಗೂ ಅದರ ಮಿತ್ರಪಕ್ಷಗಳ ಚುನಾವಣಾ ಪ್ರಚಾರದ ಸರಕಾಗಿ ಮಾರ್ಪಟ್ಟಿದೆ. ಜೈಭೀಮ್ ಘೋಷಣೆ ಕೂಗುವ ನೈತಿಕತೆ ಕಾಂಗ್ರೆಸ್ ನಾಯಕರಿಗಿಲ್ಲ. ಅಂಬೇಡ್ಕರ್ ಅವರ ಜೀವನದ ಅಂತ್ಯದ ತನಕವೂ ಕಾಂಗ್ರೆಸ್ ನಾಯಕರು ನೋವನ್ನು ಮಾತ್ರ ನೀಡಿದ್ದಾರೆ. ಪ್ರಪಂಚಕ್ಕೆ ಮಾದರಿ ಸಂವಿಧಾನ ನೀಡಿದ ಅಂಬೇಡ್ಕರ್ ನೋವುಂಡರು ದೇಶದ ಉನ್ನತಿ ಹಾಗೂ ಅಭ್ಯುಧಯಕ್ಕಾಗಿ ಅದನ್ನು ಸಹಿಸಿಕೊಂಡು ಕೆಲಸ ಮುಂದುವರೆಸಿದ್ದರು ಎಂದರು.

ಅಂಬೇಡ್ಕರ್ ಕನಸುಗಳನ್ನು ನುಚ್ಚುನೂರು ಮಾಡಿದ ಕಾಂಗ್ರೆಸ್‌ಗೆ ಜೈಭೀಮ್ ಎನ್ನುವ ಅಧಿಕಾರವಿಲ್ಲ. ಸಂವಿಧಾನ ರಚನೆ ಬಳಿಕ ಅಂಬೇಡ್ಕರ್ ಅವರು ಸದನ ಪ್ರವೇಶಿಸಬೇಕಿತ್ತು. ೫೨ರ ಚುನಾವಣೆಯಲ್ಲಿ ಜವಹಾರ್‌ಲಾಲ್ ನೆಹರು ಅಂಬೇಡ್ಕರ್ ಅವರ ಆಪ್ತಕಾರ್ಯದರ್ಶಿಯನ್ನು ನಿಲ್ಲಿಸಿ ಅಂಬೇಡ್ಕರ್ ಸೋಲಿಸಿದ್ದರು. ಇದರಲ್ಲಿ ೭೪ ಸಾವಿರ ಅಸಿಂಧು ಮತಗಳಾಗಿದ್ದವು. ಇದನ್ನು ಗಮನಿಸಿದಾಗ ವ್ಯವಸ್ಥಿತವಾಗಿ ಅಂಬೇಡ್ಕರ್ ಅವರನ್ನು ಸೋಲಿಸಿ ಅದನ್ನು ಸಂಭ್ರಮಿಸಿದ್ದರು. ಅನಂತರದ ೫೪ರ ಉಪಚುನಾವಣೆಯಲ್ಲಿಯೂ ಸೋಲಿಸುತ್ತಾರೆ. ಇಷ್ಟೆಲ್ಲ ಅವಮಾನ ನೀಡಿದ ಕಾಂಗ್ರೆಸ್ ಇಂದು ಅಂಬೇಡ್ಕರ್ ಅವರನ್ನು ಮತಕ್ಕಾಗಿ ಸ್ಮರಿಸಿಕೊಳ್ಳುತ್ತಿರುವುದು ವಿಪರ್ಯಾಸ. ನಿರಂತರ ಸೋಲಿನಿಂದ ಜರ್ಝರಿತರಾಗಿ ನಿಧನರಾಗುತ್ತಾರೆ. ಅನಂತರವೂ ಸಿಗಬೇಕಾದ ಗೌರವ ಜವಹಾರ್ ಲಾಲ್ ನೆಹರು ನೀಡಿಲ್ಲ. ಪಾರ್ಥಿವ ಶರೀರ ತರಲು ೫ ಸಾವಿರ ಹಣವಿಲ್ಲದೆ ಸಾಲ ಮಾಡಿ ತರಬೇಕಾದ ಸ್ಥಿತಿ ನಿರ್ಮಾಣವಾಗಿತ್ತು. ಅವರ ಅಂತ್ಯಸಂಸ್ಕಾರಕ್ಕೆ ಸೂಕ್ತ ಜಾಗ ಒದಗಿಸಲಿಲ್ಲ. ಸಮುದ್ರ ದಡದಲ್ಲಿ ಅಂತ್ಯಸಂಸ್ಕಾರ ಮಾಡಲಾಯಿತು ಎಂದರು.

ಮಾಜಿ ಶಾಸಕ ಎಂ.ಪಿ.ಅಪ್ಪಚ್ಚು ರಂಜನ್ ಮಾತನಾಡಿ, ಸಂವಿಧಾನ ಬದಲಾವಣೆಯನ್ನು ಯಾರು ಒಪ್ಪುವುದಿಲ್ಲ. ಈ ರೀತಿ ಚರ್ಚೆ ಬಿಜೆಪಿಗೆ ಹಿನ್ನಡೆಯಾಗಿದೆ. ಇದು ಕಾಂಗ್ರೆಸ್‌ನಿಂದ ಕುತಂತ್ರ ಎಂದು ಟೀಕಿಸಿದ ಅವರು, ಜನಪ್ರತಿನಿಧಿಗಳಾಗಲು ಸಂವಿಧಾನ ಕಾರಣವಾಗಿದೆ. ಅಂಬೇಡ್ಕರ್ ಕೇವಲ ದಲಿತ ನಾಯಕರಲ್ಲ. ಅವರು ಪ್ರಪಂಚದ ಅಗ್ರಗಣ್ಯ ನಾಯಕ ಎಂದು ಬಣ್ಣಿಸಿದರು.

ನಿರಂತರ ಅಧ್ಯಯನ ಮೂಲಕ ಸಂವಿಧಾನ ರಚಿಸಿ ದೇಶಕ್ಕೆ ನೀಡಿದ್ದಾರೆ. ಕಾಂಗ್ರೆಸ್ ಮತ ಬ್ಯಾಂಕ್‌ಗಾಗಿ ಅಂಬೇಡ್ಕರ್ ಹೆಸರು ಬಳಕೆ ಮಾಡಿಕೊಳ್ಳುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಸಂವಿಧಾನ ಬದಲಿಸಿದ್ದು ಯಾರು? ಪುಸ್ತಕ ಲೇಖಕ ವಿಕಾಸ್ ಪುತ್ತೂರು ಮಾತನಾಡಿ, ಭಾರತದ ಸಂವಿಧಾನ ಪ್ರಪಂಚದ ಅಗ್ರಗಣ್ಯ ಸ್ಥಾನದಲ್ಲಿದೆ. ಇದಕ್ಕಾಗಿ ಹಲವು ವರ್ಷಗಳ ಶ್ರಮವಿದೆ. ಸಂವಿಧಾನವನ್ನು ಕಾಂಗ್ರೆಸ್ ಸರಕಾರ ೭೫ ಬಾರಿ ಬದಲಾವಣೆ ಮಾಡಿದೆ. ೧೯೭೬ರಲ್ಲಿ ತುರ್ತು ಪರಿಸ್ಥಿತಿ ಹೇರಿದ ಇಂದಿರಾ ಗಾಂಧಿ ಕೂಡ ಸಂವಿಧಾನ ಬದಲಾವಣೆ ಮಾಡಿದ್ದಾರೆ. ಸಂವಿಧಾನ ಬದಲಿಸುವುದು ಸದನದ ಕರ್ತವ್ಯ, ನ್ಯಾಯಾಲಯದಲ್ಲ ಎಂದು ಬಹಿರಂಗವಾಗಿ ಹೇಳಿದ್ದಾರೆ. ಅನಂತಕುಮಾರ್ ಹೆಗ್ಗಡೆ ಮಾತನ್ನು ವಿರೋಧಿಸುವವರು ಇಂದಿರಾ ಗಾಂದಿ ಮಾತನ್ನು ಏಕೆ ವಿರೋಧಿಸುತ್ತಿಲ್ಲ ಎಂದು ಪ್ರಶ್ನಿಸಿದರು.

ಶ್ರೀ ಮದೆಮಹದೇಶ್ವರ ಪದವಿ ಪೂರ್ವ ಕಾಲೇಜು ಪ್ರಾಂಶುಪಾಲ ಸಿದ್ದರಾಜು ಬೆಳ್ಳಯ್ಯ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮೈಸೂರು ಸಾಮಾಜಿಕ ನ್ಯಾಯ ವೇದಿಕೆ ಕಾರ್ಯದರ್ಶಿ ಎಂ.ಎಸ್.ಪರಮಾನಂದ, ಬಿಜೆಪಿ ಜಿಲ್ಲಾಧ್ಯಕ್ಷ ನಾಪಂಡ ರವಿಕಾಳಪ್ಪ, ಬಿಜೆಪಿ ಎಸ್.ಸಿ.ಮೋರ್ಚಾ ಅಧ್ಯಕ್ಷ ರವಿ, ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಆರ್.ಕೆ.ಚಂದ್ರು, ಹಿಂದುಳಿದ ವರ್ಗಗಳ ಘಟಕದ ಅಧ್ಯಕ್ಷ ಅಪ್ರು ರವೀಂದ್ರ, ಸಿಟಿಜನ್ ಫಾರ್ ಸೋಶಿಯಲ್ ಜಸ್ಟೀಸ್ ಸಂಚಾಲಕ ವಿ.ಕೆ.ಲೋಕೇಶ್ ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net