ಜನಕಲ್ಯಾಣಕ್ಕೆ ಅಂಬೇಡ್ಕರ್ ಕೊಡುಗೆ ಅಪಾರ, ನೆಲಮಂಗಲದಲ್ಲಿ ಬಾಬಾ ಸಾಹೇಬರ ಕಂಚಿನ ಪ್ರತಿಮ ನಿರ್ಮಾಣಕ್ಕೆ ಚಾಲನೆ

11 Nela Ph 01 Gudali Pooje
Published on

ನೆಲಮಂಗಲ: ಸಮಾಜದ ಎಲ್ಲ ವರ್ಗದ ಜನರ ಅಭಿವೃದ್ಧಿ ಮತ್ತು ಕಲ್ಯಾಣಕ್ಕೆ ಡಾ. ಬಿ.ಆರ್. ಅಂಬೇಡ್ಕರ್ ಅವರು ಅಪಾರ ಕೊಡುಗೆ ನೀಡಿದ್ದಾರೆ ಎಂದು ಶಾಸಕ ಡಾ. ಕೆ. ಶ್ರೀನಿವಾಸಮೂರ್ತಿ ತಿಳಿಸಿದರು.

ನಗರದ ಡಾ. ಬಿ.ಆರ್. ಅಂಬೇಡ್ಕರ್ ವೃತ್ತದ ಬಳಿ ಅಂಬೇಡ್ಕರ್ ಅವರ ಕಂಚಿನ ಪ್ರತಿಮ ನಿರ್ಮಾಣಕ್ಕೆ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿದರು. ಒಂದು ವರ್ಗಕ್ಕೆ ಸೀಮಿತವಾಗಿ ಸಂವಿಧಾನವನ್ನು ರಚನೆ ಮಾಡಿಲ್ಲ. ಅಂದಾಜು 2 ವರ್ಷ 10 ತಿಂಗಳು 12 ದಿನಗಳಲ್ಲಿ ಸುಮಾರು 10 ಸಾವಿರ ಪುಟಗಳನ್ನು ಒಳಗೊಂಡಿರುವ ಎಲ್ಲರಿಗೂ ಹಕ್ಕು ಕಲ್ಪಿಸುವಂಯೆ ಲಿಖಿತ ರೂಪದ ಬೃಹತ್ ಸಂವಿಧಾನವನ್ನು ರಚಿಸಿದ್ದಾರೆ ಎಂದರು.

ಸಂವಿಧಾನದಲ್ಲಿ ನೀಡಿರುವ ಅವಕಾಶಗಳಿಂದಾಗಿ ಎಲ್ಲ ವರ್ಗಗಳಿಗೆ ಸಾಮಾಜಿಕ ಮತ್ತು ರಾಜಕೀಯ ಪ್ರಾತಿನಿಧ್ಯ ದೊರೆಯುತ್ತಿದೆ. ಶಿಕ್ಷಣ, ಸಂಘಟನೆ ಹೋರಾಟದ ಮನೋಭಾವವನ್ನೂ ಬೆಳೆಸಿದ್ದಾರೆ. ಪ್ರತಿಮೆ ನಿರ್ಮಿಸುವ ಜತೆಗೆ ಅಂಬೇಡ್ಕರ್ ಹಾಕಿಕೊಟ್ಟ ಮಾರ್ಗದಲ್ಲ್ಲಿ ಪ್ರತಿಯೊಬ್ಬರೂ ನಡೆಯಬೇಕು ಎಂದರು.

ವನಕಲ್ಲು ಮಠದ ಶ್ರೀ ಬಸವರಾಮಾನಂದ ಸ್ವಾಮೀಜಿ ಮಾತನಾಡಿ, 8 ವಿಷಯಗಳಲ್ಲಿ ಪಿಎಚ್‌ಡಿ ಮತ್ತು 16 ಗೌರವ ಡಾಕ್ಟರೇಟ್ ಪಡೆದಿರುವ ಕೀರ್ತಿ ಅಂಬೇಡ್ಕರ್ ಅವರಿಗೆ ಸಲ್ಲುತ್ತದೆ. ವಿಶ್ವಸಂಸ್ಥೆ ಅಂಬೇಡ್ಕರ್ ಅವರ ಜನ್ಮದಿನವನ್ನು ಜ್ಞಾನ ದಿನವಾಗಿ ಆಚರಿಸುತ್ತದೆ. ಸಂವಿಧಾನ ತತ್ವ, ಆದರ್ಶ ಸೇರಿ ಸಿದ್ಧಾಂತವನ್ನು ಪ್ರತಿಯೊಬ್ಬರೂ ಅರ್ಥ ಮಾಡಿಕೊಳ್ಳಬೇಕಿದೆ. ವಿಶ್ವಕ್ಕೆ ಭಾರತದ ಮಹತ್ವವನ್ನು ತೊರಿಸಿಕೊಟ್ಟ ಡಾ. ಬಿ.ಆರ್. ಅಂಬೇಡ್ಕರ್ ಅವರ ಕಂಚಿನ ಪತ್ರಿಮೆ ನಿರ್ಮಿಸುತ್ತಿರುವುದು ಸಂತಸದ ಸಂಗತಿ. ಸಮುದಾಯದ ಮುಖಂಡರು, ಜನಪ್ರತಿನಿಧಿಗಳು ಇದಕ್ಕೆ ಸಹಕರಿಸಬೇಕು ಎಂದು ಹೇಳಿದರು.

ನಗರದ ಮುಖ್ಯರಸ್ತೆಯಲ್ಲಿ ಅಂಬೇಡ್ಕರ್ ವೃತ್ತ ನಿರ್ಮಿಸಲು ಸಕ್ರಿಯವಾಗಿ ತೊಡಗಿಸಿಕೊಂಡಿದ್ದ ಗಂಗಚನ್ನಯ್ಯ ಅವರನ್ನು ಗಣ್ಯರು ಸನ್ಮಾನಿಸಿದರು.

ನಗರಸಭೆ ಸದಸ್ಯರಾದ ಕೆ.ಎಂ. ಶಿವಕುಮಾರ್, ನರಸಿಂಹಮೂರ್ತಿ, ಜೆಡಿಎಸ್ ತಾಲೂಕು ಅಧ್ಯಕ್ಷ ಎನ್.ಪಿ. ಹೇಮಂತ್‌ಕುಮಾರ್, ಕರವೇ (ಪ್ರವೀಣ್‌ಶೆಟ್ಟಿ) ಉಪಾಧ್ಯಕ್ಷ ಉಮೇಶ್‌ಗೌಡ, ಕರವೇ (ಶಿವರಾಮೇಗೌಡ ಬಣ) ತಾಲೂಕು ಅಧ್ಯಕ್ಷ ಸುರೇಶ್, ಗ್ರಾಪಂ ಮಾಜಿ ಅಧ್ಯಕ್ಷರಾದ ಮಂಜಮ್ಮ, ಯಲ್ಲಪ್ಪ, ನರಸಿಂಹರಾಜು, ಹನುಮಂತಮ್ಮ, ವಕೀಲ ಶಿವಣ್ಣ, ಪ್ರತಿಮೆ ನಿರ್ಮಾಣ ಸಮಿತಿ ಸದಸ್ಯ ಬಿ.ಆರ್. ಭಾಸ್ಕರ್‌ಪ್ರಸಾದ್, ಮುಖಂಡರಾದ ಹೊಂಬಯ್ಯ, ದೀಪಕ್‌ಕಿರಣ್, ರವಿಕುಮಾರ್, ಗಂಗಾಧರ್, ಎನ್.ಆರ್. ನಾಗರಾಜು, ಛಲವಾದಿ ನಾಗೇಂದ್ರ, ಎಂ. ಶಿವಕುಮಾರ್, ಬಿ.ಎಂ.ಗಂಗಬೈಲಪ್ಪ, ಚಿಕ್ಕಣ್ಣಸ್ವಾಮಿ, ಡಿ. ಗಂಗರಾಜು, ಡಿ. ರಾಜಗೋಪಾಲ, ಎಚ್. ಮಧು, ಮಹದೇವ, ನಿಡವಂದರಾಜು, ನಾರಾಯಣಸ್ವಾಮಿ, ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net