ಅಂಬೇಡ್ಕರ್ ಆಶಯಗಳು ಇನ್ನೂ ಈಡೇರಿಲ್ಲ

Dodda kodli ಅಂಬೇಡ್ಕರ್ pratime udgatane
ದೊಡ್ಡಕೊಡ್ಲಿ ಗ್ರಾಮದಲ್ಲಿ ನಿರ್ಮಾಣ ಮಾಡಿರುವ ಅಂಬೇಡ್ಕರ್ ಪ್ರತಿಮೆಯನ್ನು ಶಾಸಕ ಮಂತರ್ ಗೌಡ ಅನಾವರಣ ಮಾಡಿದರು. ಡಿ.ಕೆ.ಪ್ರಸನ್ನ. ಡಿ.ಸಿ.ಸುರೇಶ್, ಅಪ್ಸರಿ ಬೇಗಂ ಕೆ.ಆರ್.ಚಂದ್ರಶೇಖರ್, ಜಗದೀಶ್, ಮಂಜುನಾಥ್ ಇದ್ದರು.
Published on

ಶನಿವಾರಸಂತೆ: ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಆಶಯಗಳು ಇನ್ನೂ ಈಡೇರಿಲ್ಲ. ಇದಕ್ಕಾಗಿ ದೊಡ್ಡ ಮಟ್ಟದಲ್ಲಿ ಬದಲಾವಣೆ ಅಗತ್ಯ ಎಂದು ಮಡಿಕೇರಿ ಶಾಸಕ ಡಾ.ಮಂತರ್ ಗೌಡ ಹೇಳಿದರು.

ಅಂಬೇಡ್ಕರ್ ಜಯಂತಿ ಅಂಗವಾಗಿ ಸಮೀಪದ ದೊಡ್ಡಕೊಡ್ಲಿ ಗ್ರಾಮದಲ್ಲಿ ನಿರ್ಮಿಸಿದ್ದ ಸೋಮವಾರ ಡಾ.ಬಿ.ಆರ್.ಅಂಬೇಡ್ಕರ್ ಅವರ ಪ್ರತಿಮೆ ಅನಾವರಣಗೊಳಿಸಿ ಬಳಿಕ ಸಭಾ ಕಾರ್ಯಕ್ರಮ ಉದ್ಬಾಟಿಸಿ ಮಾತನಾಡಿದರು.

ಸಮಾಜದಲ್ಲಿ ಸಮಾನತೆ ತರಲು ಅಂಬೇಡ್ಕರ್ ನಿರಂತರವಾಗಿ ಶ್ರಮಿಸಿದರು. ವಿದೇಶದಲ್ಲಿ ಶಿಕ್ಷಣ ಪಡೆದರು ಸಹ ಅಲ್ಲೆ ಉಳಿಯದೆ ಸ್ವದೇಶಕ್ಕೆ ಬಂದು ಸಮಾನತೆಗಾಗಿ ಹೋರಾಡಿದರು. ಆದರೆ ಅವರ ಆಶಯಗಳು ಇನ್ನೂ ಈಡೇರದೆ ಇರುವುದು ಬೇಸರದ ಸಂಗತಿ. ಪ್ರತಿಮೆ ನಿರ್ಮಾಣದಿಂದ ಅವರ ಆಶಯಗಳು ಜೀವಂತವಾಗಿರಬೇಕು. ಅವರು ಓದಿದಂತೆ ಮಕ್ಕಳನ್ನು ಓದಿಸಿ ಎಂದು ಕಿವಿಮಾತು ಹೇಳಿದರು.

ವಿಚಾರವಾದಿ, ವಾಗ್ಮಿ ಜಯರಾಮ್ ಚನ್ನಪಟ್ಟಣ ಮಾತನಾಡಿ, ದೇಶದ ಪ್ರತಿಯೊಬ್ಬ ಪ್ರಜೆಗೂ ಮತದಾನದ ಹಕ್ಕನ್ನು ನೀಡಿದ ಕೀರ್ತಿ ಅಂಬೇಡ್ಕರ್ ಅವರಿಗೆ ಸಲ್ಲುತ್ತದೆ. ಅವರ ಪ್ರತಿಮೆ ನಿರ್ಮಾಣದ ಹಿಂದಿನ ಉದ್ದೇಶ ಮುಂದಿನ ಪೀಳಿಗೆಯ ಮಕ್ಕಳಿಗೆ ಅವರು ರೋಲ್ ಮಾಡಲ್ ಆಗಲಿ ಎಂಬುದಾಗಿದೆ. ಸಿನಿಮಾ ತಾರೆಯರು, ಕ್ರೀಡಾಪಟುಗಳಿಗಿಂತ ಅಂಬೇಡ್ಕರ್ ಅವರು ಯುವಕರಿಗೆ ಮಾರ್ಗದರ್ಶಕರಾಗಿರಬೇಕು. ಅವರ ವಿಚಾರಧಾರೆಗಳನ್ನು ಜೀವನದಲ್ಲಿ ಆಳವಡಿಸಿಕೊಳ್ಳಬೇಕು ಎಂದು ಅಭಿಪ್ರಾಯಪಟ್ಟರು.

ಶನಿವಾರಸಂತೆ ಪೊಲೀಸ್ ಠಾಣೆಯ ಪ್ರೊಬೆಸನರಿ ಎಎಸ್ಪಿ ಡಾ.ಬೆನಕ ಪ್ರಸಾದ್ ಮಾತನಾಡಿ,

ಮನುಷ್ಯರನ್ನು ಇಂದು ನಾವು ಸಮಾನವಾಗಿ ಕಾಣುತ್ತಿರುವುದಕ್ಕೆ ಅಂಬೇಡ್ಕರ್ ಅವರ ಹೋರಾಟ ಕಾರಣ. ತಾನು ಕಷ್ಟದಲ್ಲಿ ಬೆಳೆದು ಶ್ರಮಪಟ್ಟು ಹಲವಾರು ಪದವಿಗಳನ್ನು ಸಂಪಾದಿಸಿ ಜಗತ್ತಿಗೆ ಬೆಳಕಾದ ಅಂಬೇಡ್ಕರ್ ಅವರನ್ನು ಒಂದು ಜನಾಂಗಕ್ಕೆ ಸೀಮಿತಗೊಳಿಸಬಾರದು. ಅವರು ಇಡೀ ಮನುಕುಲಕ್ಕೆ ಸೇರಿದವರು. ಎಲ್ಲ ಧರ್ಮಗ್ರಂಥಗಳಿಗಿಂತ ಪವಿತ್ರವಾದ ಸಂವಿಧಾನ ಗ್ರಂಥವನ್ನು ಅವರು ಕೊಟ್ಟು ಹೊಗಿದ್ದಾರೆ ಎಂದು ಬಣ್ಣಿಸಿದರು.

ಪ್ರತಿಮೆ ನಿರ್ಮಾಣ ಸಮಿತಿ ಕಾರ್ಯದರ್ಶಿ ಡಿ.ಎನ್.ವಸಂತ್ ಮಾತನಾಡಿದರು. ಗ್ರಾ.ಪಂ. ಸದಸ್ಯ ಡಿ.ಕೆ.ಪ್ರಸನ್ನ ಅಧ್ಯಕ್ಷತೆ ವಹಿಸಿದ್ದರು. ಚನ್ನಪಟ್ಟಣ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಡಿ.ಸಿ.ಸುರೇಶ್, ಕೊಡ್ಲಿಪೇಟೆ ಗ್ರಾ.ಪಂ. ಅಧ್ಯಕ್ಷೆ ಅಪ್ಸರಿ ಬೇಗಂ, ಸದಸ್ಯ ಕೆ.ಆರ್.ಚಂದ್ರಶೇಖರ್ ಮಾತನಾಡಿದರು. ಸ್ಥಳೀಯ ಸರ್ಕಾರಿ ಶಾಲೆಯ 1ನೇ ತರಗತಿ ವಿದ್ಯಾರ್ಥಿ ತನ್ವಿತ್ ಇಂಗ್ಲಿಷ್‌ನಲ್ಲಿ ಅಂಬೇಡ್ಕರ್ ಕುರಿತು ಚುಟುಕು ಭಾಷಣ ಮಾಡಿ ಪ್ರಶಂಸೆಗೆ ಪಾತ್ರನಾದ. ಗ್ರಾಪಂ ಸದಸ್ಯರಾದ ಅಶ್ವಿನಿ ಮಂಜುನಾಥ್,ಗೀತಾ ತ್ಯಾಗರಾಜ್, ನಗೀನಾ ಭಾನು, ಸುನಂದಾ, ಹನೀಫ್ ಕಿರಿಕೊಡ್ಲಿ, ರಾಜೇಂದ್ರ, ಜಗದೀಶ್ , ಮಂಜುನಾಥ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net