

ಹಳಿಯಾಳ: ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ಅವರು ಸಂವಿಧಾನ ರೂಪಿಸುವ ಮೂಲಕ ಎಲ್ಲರಿಗೂ ಸಮಾನವಾದ ಸ್ಥಾನ ಮಾನ ನೀಡಲು ಶ್ರಮಿಸಿದ್ದಾರೆ. ದಲಿತ ಸಮುದಾಯಕ್ಕೆ ದೇವರ ರೂಪದಲ್ಲಿ ಬಂದ ಭೀಮರಾವ್ ಅವರು, ಅಸ್ಪೃಶ್ಯತೆ ನಿಮೂಲನೆ ಮಾಡುವಲ್ಲಿ ಮಹತ್ವದ ಪಾತ್ರ ವಹಿಸಿದ್ದು, ಅವರು ಸರ್ವಕಾಲಕ್ಕೂ ಸ್ಮರಣೀಯರಾಗಿದ್ದಾರೆ ಎಂದು ಶಾಸಕ ಆರ್.ವಿ. ದೇಶಪಾಂಡೆ ಹೇಳಿದರು.
ಪಟ್ಟಣದ ಪುರಭವನದಲ್ಲಿ ಸೋಮವಾರ ಆಯೋಜಿಸಿದ್ದ ಡಾ.ಬಿ.ಆರ್. ಅಂಬೇಡ್ಕರ್ ಹಾಗೂ ಡಾ. ಬಾಬು ಜಗಜೀವನರಾಂ ಅವರ ಜಯಂತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಅಂಬೇಡ್ಕರ್ ಅವರು ದಲಿತ ಸಮುದಾಯಕ್ಕೆ ನೀಡಿದ ಕಾನೂನಿನ ದುರಪಯೋಗ ಆಗದಂತೆ ಸಮುದಾಯದ ಹಿರಿಯರು ನೋಡಿಕೊಳ್ಳಬೇಕಾಗಿದೆ. ದ್ವೇಷದ ಬದಲು ಎಲ್ಲರಿಗೂ ಪ್ರೀತಿ ಹಂಚುವ ಕೆಲಸವಾಗಬೇಕು ಎಂದರು.
ಪ್ರತಿಭಾವಂತ ಎಸ್ಸಿ, ಎಸ್ಪಿ ಸಮುದಾಯದ ಮಕ್ಕಳು, ಯುವ ಪ್ರತಿಭೆಗಳು ಹಾಗೂ ಸಮುದಾಯದ ಉನ್ನತಿಗಾಗಿ ಹೋರಾಟ ಮಾಡಿದವರನ್ನು ಗೌರವಿಸಲಾಯಿತು. ಸಂವಿಧಾನದ ಪೀಠಿಕೆ ಓದಲಾಯಿತು. ಸುರೇಶ ಕಡೇಮನಿ ಹಾಗೂ ಶಾಂತಾರಾಮ ಚಿಬ್ಬುಲ್ಕರ ಅವರು ವಿಶೇಷ ಉಪನ್ಯಾಸ ನೀಡಿದರು.
ತಹಶೀಲ್ದಾರ್ ಪ್ರವೀಣಕುಮಾರ ಹುಚ್ಚನ್ನವರ, ಪುರಸಭೆ ಅಧ್ಯಕ್ಷೆ ದ್ರೌಪದಿ ಅಗಸರ, ಉಪಾಧ್ಯಕ್ಷೆ ಲಕ್ಷ್ಮೀ ವಡ್ಡರ, ಸದಸ್ಯೆ ಸುವರ್ಣಾ ಮಾದರ, ಮುಖಂಡರಾದ ಹನುಮಂತ ಮೇತ್ರಿ, ಚಂದ್ರಕಾಂತ ಕಲಭಾವಿ, ಯಲ್ಲಪ್ಪ ಹೊನ್ನೋಜಿ, ಮಾರುತಿ ಕಲಭಾವಿ, ಮಾರುತಿ ಚಿನಗಿನಕೊಪ್ಪ, ಪೊಮಣ್ಣ ದಾನಪ್ಪನ್ನವರ, ರಾಜು ಮೇತ್ರಿ, ಯಶವಂತ ಮೇತ್ರಿ, ಸಮಾಜ ಕಲ್ಯಾಣ ಇಲಾಖೆಯ ಅಶೋಕ ಪವಾರ, ಇತರರಿದ್ದರು.