

ಚಾಮರಾಜನಗರ:ಕೊಳ್ಳೇಗಾಲ
ಸಂವಿಧಾನವನ್ನು ಅರ್ಥಮಾಡಿಕೊಂಡು ಅದರಲ್ಲಿರುವ ಅಂಶಗಳನ್ನು ಜವಾಬ್ದಾರಿಯುತವಾಗಿ ಪ್ರತಿಯೊಬ್ಬರು ಪಾಲಿಸಬೇಕು ಎಂದು ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ರಾಜೇಶ್ ಕರೆ ನೀಡಿದರು.
ಪಟ್ಟಣದ ಸಮಾಜ ಕಲ್ಯಾಣ ಇಲಾಖೆಯ ಕಚೇರಿಯಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಸಂವಿಧಾನ ಸಮರ್ಪಣಾ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಅಂಬೇಡ್ಕರ್ ಅವರು ಜಗತ್ತು ಕಂಡ ದೊಡ್ಡ ಮಾನವತಾವಾದಿಗಳಾಗಿದ್ದಾರೆ. ಇದಕ್ಕೆ ಸಾಕ್ಷಿಯಾಗಿ ಇಡೀ ವಿಶ್ವಕ್ಕೆ ಮಾದರಿಯಾಗಿರುವ ಸಂವಿಧಾನವನ್ನು ನೀಡುವ ಮೂಲಕ ಎಲ್ಲ ವರ್ಗದ ಜನರಿಗೂ, ಅದರಲ್ಲೂ ಶೋಷಿತ ಸಮಾಜದ ನೋವುಗಳಿಗೆ ಧ್ವನಿಯಾಗಿದ್ದಾರೆ.
ಸಂವಿಧಾನ ರಚನೆ ನಂತರ ಇದನ್ನು ಅಂದಿನ ರಾಷ್ಟ್ರಪತಿಗೆ ನೀಡಿದ ದಿನವಾಗಿರುವುದಕ್ಕೆ ಇದನ್ನು ಸಂವಿಧಾನ ಸಮರ್ಪಣಾ ದಿನ ಎಂದು ಆಚರಿಸಲಾಗುತ್ತದೆ ಎಂದರು.
ಹಕ್ಕುಗಳನ್ನು ಕೇಳುವ ನಮಗೆ, ಕರ್ತವ್ಯಗಳನ್ನು ಪಾಲಿಸುವ ಜರೂರತ್ತು ಹಿಂದೆಂದಿಗಿಂತಲೂ ಪ್ರಸ್ತುತ ತುಸು ಹೆಚ್ಚಾಗಿಯೇ ಇದೆ. ಇದರಲ್ಲಿ ಯಾವುದೇ ಲೋಪ ಸಲ್ಲದು. ಸಂವಿಧಾನ ನೀಡಿರುವ ಹಕ್ಕುಗಳನ್ನು ದುರ್ಬಳಕೆ ಮಾಡಿಕೊಳ್ಳುವ ಕೆಟ್ಟ ಚಾಳಿ ನಮ್ಮಲ್ಲಿ ಹೆಚ್ಚುತ್ತಿದ್ದು, ಇದರ ನಿಯಂತ್ರಣ ಅಗತ್ಯವಾಗಿದೆ. ಸಂವಿಧಾನ ಆಶಯಗಳಿಗೆ ಅನುಗುಣವಾಗಿ ನಡೆದುಕೊಳ್ಳುವ ಹೊಣೆ ನಮ್ಮ ಮೇಲಿದೆ. ಬಾಬಾ ಸಾಹೇಬರು ನೀಡಿರುವ ಸಂವಿಧಾನದ ನಿಜವಾದ ಆಶಯ ದೌರ್ಜನ್ಯ, ಶೋಷಣೆ ರಹಿತ ಸಮಾಜ ನಿರ್ಮಾಣವಾಗಿದೆ. ಸಹೋದರತೆ, ಭಾತೃತ್ವದ ಬದುಕು ನಮ್ಮದಾಗಬೇಕಿದೆ. ಇದನ್ನು ಅಳವಡಿಸಿಕೊಂಡರೆ ಸಂವಿಧಾನ ಮೂಲ ಆಶಯ ಈಡೇರುತ್ತದೆ ಎಂದರು.
ಗ್ರಾಪಂ ಮಾಜಿ ಅಧ್ಯಕ್ಷ ಗೌಡಹಳ್ಳಿ ರವಿ, ನಿಲಯಪಾಲಕಿ ನೇತ್ರಾವತಿ, ನಾಗರಾಜು, ಗುರುಸ್ವಾಮಿ, ಸುರೇಶ, ಪ್ರಜ್ವಲ್ ಸೇರಿದಂತೆ ಅನೇಕರು ಇದ್ದರು.