

ಮಂಡ್ಯ: ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗದ ಜನರಿಗೆ ಕಾಂಗ್ರೆಸ್ ಪಕ್ಷದಿಂದ ದೊಡ್ಡಮಟ್ಟದ ಅನ್ಯಾಯವಾಗುತ್ತಿದೆ ಎಂದು ಅಂಬೇಡ್ಕರ್ ವಾರಿಯರ್ಸ್ ರಾಜ್ಯಾಧ್ಯಕ್ಷ ಎಚ್.ಜಿ.ಗಂಗರಾಜ್ ಆರೋಪಿಸಿದರು.
ಎಸ್ಸಿ, ಎಸ್ಟಿ ಸಮುದಾಯ ನೀಡಿದ ಮತಗಳಿಂದಲೇ 134 ಕಾಂಗ್ರೆಸ್ ಶಾಸಕರು ಆಯ್ಕೆಯಾಗಿದ್ದಾರೆ. ಆದರೆ ಇದುವರೆಗೂ ಸಮುದಾಯಕ್ಕೆ ಯಾವುದೇ ಹಕ್ಕು ಅವಕಾಶಗಳನ್ನು ಒದಗಿಸುತ್ತಿಲ್ಲ ಎಂದು ಸುದ್ದಿಗೋಷ್ಠಿಯಲ್ಲಿ ದೂರಿದರು.
ಯುವ ನಾಟಕ ರಾಹುಲ್ ಗಾಂಧಿ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮುಖ ನೋಡಿ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಲು ಎಸ್ಸಿ, ಎಸ್ಟಿ ಸಮುದಾಯದ ಜನರು ಬೆಂಬಲ ನೀಡಿದ್ದರು. ಆದರೆ ಸಮುದಾಯಕ್ಕೆ ಹಾಲಿ ಇರುವ ವಿವಿಧ ಯೋಜನೆಗಳನ್ನು ಮೊಟಕುಗೊಳಿಸಿ ಅವಮಾನ ಮಾಡುತ್ತಿದ್ದಾರೆ. ಸಮುದಾಯಕ್ಕೆ ನ್ಯಾಯ ಒದಗಿಸುವ ದೃಷ್ಠಿಯಿಂದ ಕೂಡಲೇ ರಾಜ್ಯದಲ್ಲಿ ಪರಿಶಿಷ್ಟ ಸಮುದಾಯದವರನ್ನು ಮುಖ್ಯಮಂತ್ರಿಯನ್ನಾಗಿ ಆಯ್ಕೆ ಮಾಡಬೇಕು. ಎಸ್ಸಿ, ಎಸ್ಟಿ ಆಯೋಗಕ್ಕೆ ಕೂಡಲೇ ಅಧ್ಯಕ್ಷರನ್ನು ನೇಮಿಸಬೇಕು. ಎಸ್‌ಸಿಎಸ್‌ಪಿ ಮತ್ತು ಟಿಎಸ್‌ಪಿ ಯೋಜನೆಯ ಮೀಸಲು ಹಣ ಇತರೆ ಯೋಜನೆಗೆ ಬಳಸಬಾರದು ಜತೆಗೆ ಈಗಾಗಲೇ ವರ್ಗಾಯಿಸಿಕೊಂಡ ಹಣವನ್ನು ವಾಪಸ್ ನೀಡಬೇಕು. ಎಸ್‌ಸಿಎಸ್‌ಪಿ ಮತ್ತು ಟಿಎಸ್‌ಪಿ ಯೋಜನೆಯ ಲೆಕ್ಕ ಪರಿಶೋಧನೆ ಮಾಡಬೇಕು ಸೇರಿದಂತೆ ಹಲವು ಬೇಡಿಕೆಗಳನ್ನು ಈಡೇರಿಸಬೇಕು. ಇಲ್ಲದಿದ್ದರೆ ಉಗ್ರ ಹೋರಾಟ ಮಾಡುವುದರ ಜತೆಗೆ ನ್ಯಾಯಾಲಯದ ಮೊರೆ ಹೋಗಲಾಗುವುದು ಎಂದು ಎಚ್ಚರಿಕೆ ನೀಡಿದರು.
ಎಂ.ಸಿ.ಚನ್ನಕೇಶವ, ವೇಣುಗೋಪಾಲ್, ಅರುಣ ಇತರರಿದ್ದರು.