

ಮಂಡ್ಯ: ಸಂವಿಧಾನದ ಮೂಲ ಆಶಯವನ್ನು ಪೂರೈಸುವಲ್ಲಿ ಸರ್ಕಾರಗಳು ಸಪೂರ್ಣವಾಗಿ ವಿಫಲವಾಗಿವೆ. ದೇಶದ ಎಲ್ಲ ಅವಕಾಶಗಳನ್ನು ಪರಿಶಿಷ್ಟ ಜಾತಿ ಮತ್ತು ವರ್ಗಕ್ಕೆ ಸಮನಾಗಿ ಹಂಚಿಕೆಯಾಗುವಂತೆ ಕ್ರಮ ವಹಿಸಬೇಕು ಎಂದು ಡಾ.ಬಿ.ಆರ್.ಅಂಬೇಡ್ಕರ್ ವಾರಿಯರ್ಸ್ನ ರಾಜ್ಯಾಧ್ಯಕ್ಷ ಗಂಗರಾಜು ಆಗ್ರಹಿಸಿದರು.
ಆಸ್ತಿ, ಹಕ್ಕು, ಅವಕಾಶ ಎಲ್ಲವೂ ಸಮನಾಗಿ ಹಂಚುವ ವ್ಯವಸ್ಥೆ ರೂಪುಗೊಂಡಿಲ್ಲ. ಇದಕ್ಕೆ ಅದಕ್ಷ ಆಡಳಿತ ವ್ಯವಸ್ಥೆ, ರಾಜಕೀಯ ಅಸ್ಥಿರತೆ, ಸ್ಪಷ್ಟ ಹಾಗೂ ನಿಖರ ಸ್ಥಿರ ಚಿಂತನೆಯಿಲ್ಲದಿರುವುದು ಕಾರಣ ಎಂದು ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು.
ರಾಜ್ಯದಲ್ಲಿ ಪರಿಶಿಷ್ಟ ಜಾತಿ ಮತ್ತು ವರ್ಗದ ಜನಸಂಖ್ಯೆ 2 ಕೋಟಿಗೂ ಅಧಿಕವಿದೆ. ಬಹುಸಂಖ್ಯಾತ ವರ್ಗವಾಗಿದ್ದರೂ ಇಂದಿಗೂ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ, ರಾಜಕೀಯ, ಧಾರ್ಮಿಕ, ಸಾಂಸ್ಕೃತಿಕ, ಕಲೆ, ಸಾಹಿತ್ಯ ಸೇರಿದಂತೆ ಹಲವು ಕೇಂದ್ರಗಳಲ್ಲಿ ಹಿಂದುಳಿದಿದೆ. ಸ್ವಂತ ಮನೆಗಳಿಲ್ಲದೇ ಹಲವು ಸವಲತ್ತು ವಂಚಿತರಾಗಿದ್ದಾರೆ. ನಿರಂತರ ದೌರ್ಜನ್ಯ, ದಬ್ಬಾಳಿಕೆ, ಹಿಂಸೆ, ಕ್ರೌರ್ಯ, ಅತ್ಯಾಚಾರ, ಜಾತಿ ದ್ವೇಷದ ಕೊಲೆಗಳು, ಸಾಮಾಜಿಕ ಬಹಿಷ್ಕಾರ, ಹಕ್ಕು ಅವಕಾಶ ವಂಚನೆಯಂತಹ ಅಮಾನವೀಯ ಕೃತ್ಯಗಳು ನಡೆಯುತ್ತಿವೆ. ಇವುಗಳಿಂದ ಮೂಲ ಸೌಕರ್ಯ, ಉಚಿತ, ಕಡ್ಡಾಯವಾಗಿ ಸ್ನಾತಕೋತ್ತರ ಪದವಿ ಕೊಡಿಸುವುದು, ಚಿಕಿತ್ಸಾ ವೆಚ್ಚ ಭರಿಸುವುದು ಸೇರಿದಂತೆ ಹಲವು ಬೇಡಿಕೆಗಳನ್ನು ಸರ್ಕಾರ ಈಡೇರಿಸಬೇಕು. ಸಮುದಾಯಕ್ಕೆ ಸಾಮಾಜಿಕ ಬಹಿಷ್ಕಾರ ತಡೆ ನಿಷೇಧ ಕಾಯ್ದೆ ಜಾರಿಗೊಳಿಸಬೇಕು. ರಾಜ್ಯಾದ್ಯಂತ ವಿಶ್ವಮಾನವರ ಪ್ರತಿಮೆಗಳಿಗೆ ಸಿಸಿ ಕ್ಯಾಮೆರಾ ಅಳವಡಿಸಿ ರಕ್ಷಣೆ ನೀಡಬೇಕು ಎಂದು ಮನವಿ ಮಾಡಿದರು.
ಭಾರತೀಯ ಬೌದ್ಧ ಮಹಾಸಭಾದ ಜೆ.ರಾಮಯ್ಯ, ಸಿಐಟಿಯು ಪ್ರಧಾನ ಕಾರ್ಯದರ್ಶಿ ಸಿ.ಕುಮಾರಿ, ನಿರಂಜನ್, ರಾಜು ಗೌಡ, ಅಂಬುಜಿ, ಎಂ.ಬಿ.ನಾಗಣ್ಣಗೌಡ, ಅಮ್ಜದ್ಪಾಷ ಇತರರಿದ್ದರು.