ಅಂಬೇಡ್ಕರನ್ನು ಧರ್ಮಕ್ಕೆ ಸೀಮಿತಗೊಳಿಸುವುದು ಸಲ್ಲ

15MDG1Sachin banalli
Published on

ಮೂಡಿಗೆರೆ: ಭೀಮಾ ಕೊರೆಗಾಂವ್ ವಿಜಯೋತ್ಸವ ಕಾರ್ಯಕ್ರಮದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಅವರನ್ನು ಒಂದು ರಾಜಕೀಯ ಪಕ್ಷ ಮತ್ತು ಒಂದು ಧರ್ಮಕ್ಕೆ ಸೀಮಿತಗೊಳಿಸಿ ಅವಮಾನ ಮಾಡಲಾಗಿದೆ ಎಂದು ಬಿಜೆಪಿ ಎಸ್ಸಿ ಮೋರ್ಚಾ ತಾಲೂಕು ಅಧ್ಯಕ್ಷ ಸಚಿನ್‌ಬಾನಳ್ಳಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಪಟ್ಟಣದಲ್ಲಿ ಎಲ್ಲ ಧರ್ಮಿಯರು ಮತ್ತು ವಿವಿಧ ಪಕ್ಷದ ಪ್ರಮುಖರು ಒಟ್ಟುಗೂಡಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಮುಖ್ಯ ಭಾಷಣಕಾರರೊಬ್ಬರು ಅಂಬೇಡ್ಕರ್ ದೇಶಕ್ಕೆ , ಜನರಿಗೆ ನೀಡಿದ ಕೊಡುಗೆ ಬಗ್ಗೆ ಮಾತನಾಡುವ ಬದಲು ಸಮಾಜ ಒಡೆಯುವ ಮನಸ್ಥಿತಿಯಲ್ಲಿ ಬಿಜೆಪಿ ಮತ್ತು ಸಂಘ ಪರಿವಾರಕ್ಕೆ ನಿಂದಿಸಿದ್ದಾರೆ ಎಂದು ಹೇಳಿಕೆಯಲ್ಲಿ ದೂರಿದ್ದಾರೆ.

ಸಂವಿಧಾನ ಶಿಲ್ಪಿಯ ಸಿದ್ದಾಂತದ ಅಳ ತಿಳಿಯದೆ ಬಿಜೆಪಿಯ ಹಿರಿಯ ನಾಯಕರನ್ನು ಹೀನಮಾನವಾಗಿ ನಿಂದಿಸಿದ್ದಾರೆ. ಇಂತಹ ವರ್ತನೆ ಭಾಷಣಕಾರರಿಗೆ ಶೋಭೆ ತರುವುದಿಲ್ಲ. ಮಲೆನಾಡಿನ ಜನರ ಒಗ್ಗಟ್ಟನ್ನು ಒಡೆಯುವ ಕುತಂತ್ರ ಮಾಡುತ್ತಿರುವ ರಾಜಕೀಯ ಸಂಚುಕೋರರ ಜತೆ ಸೇರಿಕೊಂಡಿರುವ ಮುಖ್ಯಭಾಷಣಕಾರರ ನಡೆ ಅನುಮಾನದಿಂದ ಕೂಡಿದೆ. ಅವರ ಭಾಷಣದ ವರ್ತನೆಯನ್ನು ಜನ ಸಹಿಸುವುದಿಲ್ಲ ಎಂದಿದ್ದಾರೆ.

ಅಂಬೇಡ್ಕರ್ ಪರವಾದ ಯಾವುದೇ ಕಾರ್ಯಕ್ರಮದಲ್ಲಿ ದೇಶದ ಜನರ ಒಗ್ಗಟ್ಟನ್ನು ಕಾಪಾಡಿಕೊಂಡು ಹೋಗುವ ವಿಚಾರವನ್ನು ಮುನ್ನಡೆಗೆ ತರಬೇಕೆ ಹೊರತು ಅಂಬೇಡ್ಕರ್ ಅವರನ್ನು ಒಂದು ವರ್ಗಕ್ಕೆ ಒಂದು ರಾಜಕೀಯ ಪಕ್ಷಕ್ಕೆ ಸೀಮಿತಗೊಳಿಸುವ ಕೆಲಸ ಮಾಡಬಾರದು ಎಂದು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net