

ಮೈಸೂರು: ಸಂವಿಧಾನಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಮತ್ತು ಕೊಲ್ಲಾಪುರ ಸಂಸ್ಥಾನದ ಛತ್ರಪತಿ ಶಾಹು ಮಹಾರಾಜ್ ಅವರ ವೈಚಾರಿಕ ಮತ್ತು ಬೌದ್ಧಿಕ ಗೆಳೆತನವು ದೇಶದ ರಾಜಕೀಯ ಮತ್ತು ಸಾಮಾಜಿಕ ಚರಿತ್ರೆಯ ದಿಕ್ಕನ್ನೇ ಬದಲಾಯಿಸಿತು ಎಂದು ವಿಮರ್ಶಕ ಡಾ.ರಹಮತ್ ತರೀಕೆರೆ ಅಭಿಪ್ರಾಯಪಟ್ಟರು.
ಮೈಸೂರು ವಿಶ್ವವಿದ್ಯಾಲಯದ ಡಾ.ಬಿ.ಆರ್.ಅಂಬೇಡ್ಕರ್ ಸಂಶೋಧನೆ ಹಾಗೂ ವಿಸ್ತರಣಾ ಕೇಂದ್ರದಲ್ಲಿ ಗುರುವಾರ ಶಾಹು ಮಹಾರಾಜ್ ಮತ್ತು ಡಾ.ಬಿ.ಆರ್.ಅಂಬೇಡ್ಕರ್ ಅವರ ವೈಚಾರಿಕ ಸ್ನೇಹ ವಿಷಯದ ಕುರಿತು ಆಯೋಜಿಸಿದ್ದ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿ, ಮುಂಬೈ ಕಾನೂನು ಕಾಲೇಜಿನಲ್ಲಿ ಪಾಠ ಮಾಡುತ್ತಿದ್ದ ಅಂಬೇಡ್ಕರ್ ಅವರನ್ನು ಶಾಹು ಮಹಾರಾಜರು ಹುಡುಕಿಕೊಂಡು ಬಂದು ತಮ್ಮ ಸುಧಾರಣಾ ಕಾರ್ಯಕ್ರಮಕ್ಕೆ ಮಾರ್ಗದರ್ಶನ ನೀಡಬೇಕು ಎಂದು ಮನವಿ ಮಾಡಿದ್ದರು ಎಂದು ಸ್ಮರಿಸಿದರು.
ಅಂಬೇಡ್ಕರ್ ಅವರಿಗೆ ವಿದ್ಯಾರ್ಥಿವೇತನ ಕೊಟ್ಟು ಇಂಗ್ಲೆಂಡ್‌ಗೆ ಕಳುಹಿಸುವ ಶಾಹು ಮಹಾರಾಜರು, ಇಂಗ್ಲೆಂಡಿನ ತಮ್ಮ ಪರಿಚಯಸ್ಥರಿಗೆಲ್ಲ ಪತ್ರ ಬರೆದು ಅಂಬೇಡ್ಕರ್ ವಿಚಾರಗಳಿಗೆ ಮಾನ್ಯತೆ ದೊರೆಯುವಂತೆ ಮಾಡಲು ತಿಳಿಸುತ್ತಾರೆ. ‘ಅಂಬೇಡ್ಕರ್ ದಮನಿತರ ಬೆಳಕು. ರಾಜ್ಯಹೋದರೂ ಪರವಾಗಿಲ್ಲ, ನಿಮ್ಮ ಪರವಾಗಿ ಹೋರಾಟ ಮಾಡುತ್ತೇನೆ’ ಎಂದು ಶಾಹು ಮಹಾರಾಜರು ನಾಗಪುರ ಅಧಿವೇಶದಲ್ಲಿ ಕರೆ ನೀಡಿದ್ದನ್ನು ಸ್ಮರಿಸಬಹುದು ಎಂದರು.
ಬ್ರಿಟಿಷರು ಭಾರತವನ್ನು ಲೂಟಿ ಮಾಡಿದರು. ಆದರೆ, ಆಧುನಿಕ ಶಿಕ್ಷಣ, ವಿಚಾರ, ವಿಜ್ಞಾನ ನೀಡಿದರು. ಆಧುನಿಕ ರಾಜ್ಯ ಕಟ್ಟುವ ಪ್ರಯತ್ನ ಮಾಡಿದರು. ಬ್ರಿಟಿಷರು ಸಂಪತ್ತು ಸೂರೆ ಮಾಡಿದರೂ ದಮನಿತರ ದಾಸ್ಯದಿಂದ ಬಿಡುಗಡೆ ಮಾಡುವ ಪ್ರಯತ್ನ ಇತ್ತು. ಇದೀಗ ರಾಜಕೀಯ ಅಧಿಕಾರ ದೊರೆತಿದೆ, ಸಂಪನ್ಮೂಲವೂ ಇದೆ. ಆಧರೆ, ಸಾಮಾಜಿಕ ದೃಷ್ಟಿ ಇಲ್ಲ. ದೇಶವನ್ನು ಯಾವ ರೀತಿ ಕಟ್ಟಬೇಕು ಎಂಬ ದೂರದೃಷ್ಟಿ ಇಲ್ಲ. ಪ್ರಭುತ್ವಕ್ಕೆ ಮುಖ್ಯವಾಗಿ ಸಾಮಾಜಿಕ ದೃಷ್ಟಿ ಮತ್ತು ಸಮಾನ ವಿತರಣೆ ಬಗ್ಗೆ ಕಾಳಜಿ ಇರಬೇಕು ಎಂದು ಹೇಳಿದರು.