

ಶ್ರೀನಿವಾಸಪುರ: ತಾಲೂಕಿನ ತಾಡಿಗೋಳ್ ಕ್ರಾಸ್ ಬಳಿ ರಾತ್ರೋರಾತ್ರಿ ಗ್ರಾಮದ ಯುವಕರ ತಂಡ ರಸ್ತೆ ಡಿವೈಡರ್ನಲ್ಲಿ ಅಂಬೇಡ್ಕರ್ ಪುತ್ಥಳಿ ಇಟ್ಟ ಕಾರಣ ಬಿಗುವಿನ ವಾತಾವರಣ ಸೃಷ್ಟಿಯಾಗಿದೆ. 2 ಗಂಟೆಯಲ್ಲಿ ನೂರಾರು ವಿವಿಧ ಸಂಘಟನೆಗಳ ದಲಿತ ಮುಖಂಡರು ಸ್ಥಳದಲ್ಲಿ ಜಮಾಯಿಸಿದ್ದರು.
ನಗರದ ತಹಸೀಲ್ದಾರ್ ಜಿ.ಎನ್.ಸುಧೀಂದ್ರ ಮಾತನಾಡಿ, ಯಾವುದೇ ಅನುಮತಿ ಪಡೆಯದೇ ಅಂಬೇಡ್ಕರ್ ಪುತ್ಥಳಿ ಸ್ಥಾಪನೆ ಮಾಡಿರುವುದು ಸರಿಯಲ್ಲ ಎಂದರು. ತಾಡಿಗೋಳ್ ಗ್ರಾಮದ ಡಿ.ಎಂ.ಭಾಸ್ಕರ್ ಮತ್ತು ಹರೀಶ್ ಮಧ್ಯ ಪ್ರವೇಶಿಸಿ, ತಾಲೂಕಿನ ರೋಜೋರಪಲ್ಲಿ ಕ್ರಾಸ್, ಪುಂಗನೂರು ಕ್ರಾಸ್ನಲ್ಲಿ ಕೆಂಪೇಗೌಡ ಪುತ್ಥಳಿ ಯಾವುದೇ ಅನುಮತಿ ಪಡೆಯದೇ ಇಟ್ಟಿರುವುದು ಸರಿಯೇ ಎಂದು ತಹಸೀಲ್ದಾರ್, ಗೌನಿಪಲ್ಲಿ ಸಿಪಿಐ ಶಿವಕುಮಾರ್, ಶ್ರೀನಿವಾಸಪುರ ಸಿಪಿಐ ಎಂ.ಬಿ.ಗೊರವನಕೊಳ್ಳ ಅವರನ್ನು ಪ್ರಶ್ನಿಸಿದರು. ಪುತ್ಥಳಿ ತೆರವುಗೊಳಿಸುವುದಾದರೆ ಮೊದಲು ನಮ್ಮ ಪ್ರಾಣ ತೆಗೆಯಲಿ. ಪ್ರಾಣ ಹೋದರೂ ಈ ಸ್ಥಳದಿಂದ ಅಂಬೇಡ್ಕರ್ ಪುತ್ಥಳಿ ತೆರವುಗೊಳಿಸಲು ಬಿಡುವುದಿಲ್ಲ ಎಂದು ಅಧಿಕಾರಿಗಳ ವಿರುದ್ಧ ಕೂಗಾಡಿದರು. ಒಂದು ವಾರದಲ್ಲಿ ಎಲ್ಲ ತಾಲೂಕು ಎಲ್ಲ ಸಮುದಾಯ ಮುಖಂಡರೊಂದಿಗೆ ಸಭೆ ನಡೆಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಜಿ.ಎನ್.ಸುಧೀಂದ್ರ ಮಾಹಿತಿ ನೀಡಿದರು.
ದಲಿತ ನಾಯಕಿ ರಾಮಾಜಮ್ಮ ಮಾತನಾಡಿ, ದೇಶವು ಅಂಬೇಡ್ಕರ್ ರಚಿತ ಸಂವಿಧಾನದ ಮೇಲೆ ನಡೆಯುತ್ತಿದ್ದು. ಅವರನ್ನು ಗೌರವಿಸುವುದನ್ನು ಬಿಟ್ಟು ಪುತ್ಥಳಿ ತೆರವು ವಿಚಾರದಲ್ಲಿ ಇಲ್ಲ ಸಲ್ಲದ ಗಲಾಟೆ ತೆಗೆಯುವುದು ಸರಿಯಲ್ಲ. ಪುತ್ಥಳಿ ತೆರವುಗೊಳಿಸದಲ್ಲಿ ರಾಜ್ಯದ್ಯಂತ ಹೋರಾಟ ಮಾಡುವುದಾಗಿ ಎಚ್ಚರಿಸಿದರು. ಈ ವೃತ್ತವನ್ನು ಅಂಬೇಡ್ಕರ್ ವೃತ್ತ ಎಂದು ನಾಮಕರಣ ಮಾಡಬೇಕು ಎಂದು ಒತ್ತಾಯಿಸಿದರು. ಸಿಪಿಐಗಳಾದ ಎಂ.ಬಿ.ಗೊರವನಕೊಳ್ಳ, ಶಿವಕುಮಾರ್, ಗೌನಿಪಲ್ಲಿ ಪಿಎಸ್ಐ ರಾಮು, ಕಂದಾಯ ಇಲಾಖೆ ಆರ್ಐ ಜನಾರ್ಧನ್, ವಿಎ ಪೃಥ್ವಿ, ಪಿಡಬ್ಲೂಡಿ ಇಲಾಖೆ ಎಇಇ ನಾರಾಯಣಸ್ವಾಮಿ, ಕಿರಿಯ ಅಭಯಂತರ ಗೋವಿಂದಪ್ಪ, ಡಿಎಸ್ಎಸ್ ಮುಖಂಡರಾದ ರಾಮಾಂಜಮ್ಮ, ಚಲ್ದಿಗಾನಹಳ್ಳಿ ಈರಪ್ಪ, ಗಾಂಡ್ಲಹಳ್ಳಿ ಚಲಪತಿ, ವರ್ತನಹಳ್ಳಿ ವೆಂಕಟೇಶ್, ನರಸಿಂಹಮೂರ್ತಿ, ಹೂವಳ್ಳಿ ಕೃಷ್ಣಪ್ಪ, ಕೊಸ್ಸಂದ್ರ ರೆಡ್ಡಪ್ಪ, ತಾಡಿಗೋಳ್ ಅಬಿ ಇದ್ದರು.