ಜಿಲ್ಲಾದ್ಯಂತ ಅಂಬೇಡ್ಕರ್ ಸ್ಮರಣೆ: ಸಂಘಟನೆಗಳಿಂದ ಗೌರವ ಸಮರ್ಪಣೆ

ambedkar parinirvana day mandya
Published on

ಮಂಡ್ಯ: ಜಿಲ್ಲಾದ್ಯಂತ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ 68ನೇ ಪರಿನಿರ್ವಾಣ ದಿನವನ್ನು ಆಚರಣೆ ಮಾಡಲಾಯಿತು.

ಜಿಲ್ಲಾಡಳಿತದಿಂದ ನಗರದ ಡಿಸಿ ಕಚೇರಿ ಎದುರಿನ ಕಾವೇರಿ ಉದ್ಯಾನದಲ್ಲಿರುವ ಡಾ.ಬಿ.ಆರ್.ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಹಾಗೂ ಪುಷ್ಪಾರ್ಚನೆ ನೆರವೇರಿಸಲಾಯಿತು. ಜಿಲ್ಲಾಧಿಕಾರಿ ಡಾ.ಕುಮಾರ ಮಾತನಾಡಿ, ಅಂಬೇಡ್ಕರ್ ಅವರ ಕೊಡುಗೆ, ಸಾಧನೆಗ, ಆದರ್ಶ, ಚಿಂತನೆ ಹಾಗೂ ಮೌಲ್ಯಗಳು ಇಂದಿಗೂ ಜೀವಂತವಾಗಿದೆ. ಪ್ರತಿಯೊಬ್ಬರೂ ತಮ್ಮ ಜೀವನದಲ್ಲಿ ಅವರ ಚಿಂತನೆ, ತತ್ವ ಹಾಗೂ ಆದರ್ಶವನ್ನು ಅಳವಡಿಸಿಕೊಳ್ಳಬೇಕು ಎಂದರು.

ಜಿಪಂ ಸಿಇಒ ಶೇಖ್ ತನ್ವೀರ್ ಆಸಿಫ್ ಮಾತನಾಡಿ, ಅಂಬೇಡ್ಕರ್ ಬರೆದಿರುವ ಪುಸ್ತಕಗಳು ಪ್ರಸ್ತುತ ದಿನದಲ್ಲಿಯೂ ಜೀವಂತವಾಗಿದೆ. ದೇಶಕ್ಕೆ ಅವರು ಕೊಟ್ಟಿರುವ ಸಂವಿಧಾನವು ನಮ್ಮ ಬದುಕಿಗೆ ದಾರಿಯಾಗಿದೆ. ಪ್ರತಿಯೊಬ್ಬರಿಗೂ ಸಮಾನತೆ, ಐಕ್ಯತೆ, ಸಾಮಾಜಿಕ, ಆರ್ಥಿಕ, ರಾಜಕೀಯ ನ್ಯಾಯವನ್ನು ಸಂವಿಧಾನದ ಮೂಲಕ ನೀಡಿ ಜನರಿಗೆ ಶಕ್ತಿ ತುಂಬಿದ್ದಾರೆ ಎಂದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ ಮಾತನಾಡಿ, ಅಂಬೇಡ್ಕರ್ ನೀಡಿದ ಸಂವಿಧಾನದ ಆಧಾರದ ಮೇಲೆ ಇಂದಿಗೂ ಕಾನೂನು ವ್ಯವಸ್ಥೆ ನಿಂತಿದೆ. ಇನ್ನೂ ಸಾವಿರಾರು ವರ್ಷ ಕಳೆದರೂ ಅವರ ಹೆಸರು ಚಿರಸ್ಥಾಯಿ ಎಂದು ಹೇಳಿದರು.

ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಡಾ.ಸಿದ್ದಲಿಂಗೇಶ್, ನಗರಸಭೆ ಮಾಜಿ ಅಧ್ಯಕ್ಷೆ ವಿಜಯಲಕ್ಷ್ಮೀ ರಘುನಂದನ್, ವಿವಿಧ ಸಂಘಟನೆಗಳ ಸೋಮಶೇಖರ್ ಕೆರಗೋಡು, ಗುರುಪ್ರಸಾದ್, ಮಂಜುನಾಥ್, ತುಳಸೀಧರ್, ಜೆ.ರಾಮಯ್ಯ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net