

ಮೈಸೂರು: ಅಂಬೇಡ್ಕರ್ ಮೇಣದ ಬತ್ತಿಯಂತೆ ಉರಿದು ಎಲ್ಲರಿಗೂ ಬೆಳಕಾದರು. ಅವರು ಪಡೆದ ಜ್ಞಾನವನ್ನು ತಮಗೋಸ್ಕರ ಬಳಸದೆ ಜನರಿಗೋಸ್ಕರ ಬಳಸಿದ ಮಹಾನಾಯಕ ಎಂದು ಚಾಮರಾಜನಗರದ ನಳಂದ ಬೌದ್ಧ ವಿಶ್ವವಿದ್ಯಾಲಯದ ಪ್ರಧಾನ ಕಾರ್ಯದರ್ಶಿ ಬೋಧಿದತ್ತ ಬಣ್ಣಿಸಿದರು.
ನಗರದ ಕಾಂಗ್ರೆಸ್ ಕಚೇರಿಯಲ್ಲಿ ಬುಧವಾರ ಹಮ್ಮಿಕೊಂಡಿದ್ದ ಅಂಬೇಡ್ಕರ್ ಮಹಾಪರಿನಿಬ್ಬಾಣ ಕಾರ್ಯಕ್ರಮದಲ್ಲಿ ಮಾತನಾಡಿ, ಕೊಲಂಬಿಯಾ ವಿಶ್ವವಿದ್ಯಾಲಯದ ಅತ್ಯುತ್ತಮ 100 ವಿದ್ಯಾರ್ಥಿಗಳ ಪಟ್ಟಿ ಮಾಡಲಾಗಿದ್ದು, ಇದರಲ್ಲಿ ಮೊದಲ ಹೆಸರು ಅಂಬೇಡ್ಕರ್ ಅವರದ್ದು ಇದೆ. ಇದು ಅಂಬೇಡ್ಕರ್ ಅವರ ವಿದ್ವತ್‌ಗೆ ಸಾಕ್ಷಿಯಾಗಿದೆ ಎಂದು ಹೇಳಿದರು.
ವಿದ್ಯಾವಂತರಾದವರು ಹಳ್ಳಿಯ ಕಡೆಗೆ ತೆರಳಿ ಜನರ ಏಳಿಗೆಗೆ ಶ್ರಮಿಸುತ್ತಿಲ್ಲ ಎಂದು ಅಂಬೇಡ್ಕರ್ ಸಾಕಷ್ಟು ದುಖದಿಂದ ಹೇಳಿಕೊಂ ಡಿದ್ದರು. ವಿದ್ಯೆ ಪಡೆದು ಉತ್ತಮ ನೌಕರಿ ಪಡೆದವರು ಗ್ರಾಮೀಣ ಭಾಗದಲ್ಲಿ ಜನರ ಅಭಿವೃದ್ಧಿಗೆ ಶ್ರಮಿಸಬೇಕು ಎಂಬುದು ಅಂಬೇಡ್ಕರ್ ಅವರ ಆಶಯವಾಗಿತ್ತು. ಅವರ ಕನಸನ್ನು ಎಲ್ಲರು ಸಾಕಾರಗೊಳಿಸುವ ಕಾರ್ಯ ಮಾಡಬೇಕು ಎಂದರು.
ಬುದ್ಧನ ಕಾಲಘಟ್ಟದ ನಂತರ ಬೋದಿಸತ್ವ ಎಂಬ ಬಿರುದು ಯಾರಿಗೂ ಬಂದಿರಲಿಲ್ಲ. ಆದರೆ 1954ರಲ್ಲಿ ನೇಪಾಳದ ಕಟ್ಮಂಡುವಿನಲ್ಲಿ ನೆಡೆದ ಬೌದ್ಧ ಸಮ್ಮೇಳದಲ್ಲಿ ಡಾ.ಬಿ.ಆರ್. ಅಂಬೇಡ್ಕರ್ ಅವರನ್ನು ಬೋದಿಸತ್ವ ಎಂದು ಕರೆಯಲಾಯಿತು ಎಂದು ಸ್ಮರಿಸಿದರು.
ಕಾಂಗ್ರೆಸ್ ನಗರಾಧ್ಯಕ್ಷ ಆರ್. ಮೂರ್ತಿ ಮಾತನಾಡಿ, ಅಂಬೇಡ್ಕರ್ ದೇಶಕ್ಕೆ ನೀಡಿದ ಸಂವಿಧಾನವನ್ನು ಉಳಿಸುವ ಕಾರ್ಯ ಆಗಬೇಕು. ಕಾಂಗ್ರೆಸ್ ನ ಪ್ರತಿಯೊಬ್ಬ ಕಾರ್ಯಕರ್ತರು ಸಂವಿಧಾನ ಉಳಿಸುವ ಸಂಕಲ್ಪ ಮಾಡಬೇಕು ಎಂದರು.
ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಡಾ.ಬಿ.ಜೆ. ವಿಜಯಕುಮಾರ್, ಮಾಜಿ ಸಂಸದ ಕಾಗಲವಾಡಿ ಶಿವಣ್ಣ, ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷೆ ಡಾ. ಪುಷ್ಪಾ ಅಮರ್‌ನಾಥ್, ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್, ಮಾಜಿ ಮೇಯರ್‌ಗಳಾದ ಮೋದಮಣಿ, ಟಿ.ಬಿ. ಚಿಕ್ಕಣ್ಣ, ನಾರಾಯಣ್, ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಲತಾ ಸಿದ್ದಶೆಟ್ಟಿ, ಎಂಡಿಸಿಸಿ ಬ್ಯಾಂಕ್ ಮಾಜಿ ಅಧ್ಯಕ್ಷ ಸಿ.ಬಸವಗೌಡ ಹಾಗೂ ಇತರರು ಇದ್ದರು.