

ಹೊಳೆನರಸೀಪುರ: ದೊಡ್ಡಹಳ್ಳಿ ಕೊಪ್ಪಲು ಸಂತೆ ಮೈದಾನದಲ್ಲಿ ಅಳವಡಿಸಿದ್ದ ಡಾ.ಬಿ.ಆರ್.ಅಂಬೇಡ್ಕರ್ ಅವರ ನಾಮಫಲಕದ ವಿವಾದ ಬುಧವಾರ ಸುಖಾಂತ್ಯ ಕಂಡಿತು.
ಪಟ್ಟಣದ ತಾಲೂಕು ಕಚೇರಿ ಸಭಾಂಗಣದಲ್ಲಿ ತಹಸೀಲ್ದಾರ್ ವೈ.ಎಂ.ರೇಣು ಕುಮಾರ್, ಡಿವೈಎಸ್‌ಪಿ ಶಾಲು, ಸಿಪಿಐ ಬಿ.ಆರ್.ಪ್ರದೀಪ್, ತಾ.ಪಂ. ಇಒ ಮುನಿರಾಜ್ ನೇತೃತ್ವದಲ್ಲಿ ದೊಡ್ಡಹಳ್ಳಿ ಕೊಪ್ಪಲಿನಲ್ಲಿ ಆಯೋಜಿಸಿದ್ದ ಶಾಂತಿ ಸಭೆಯಲ್ಲಿ ಎರಡು ಸಮುದಾಯದ ಮುಖಂಡರನ್ನು ಆಹ್ವಾನಿಸಿ ಮಹತ್ವದ ತೀರ್ಮಾನವನ್ನು ತೆಗೆದುಕೊಳ್ಳಲಾಯಿತು.
ತಾಲೂಕಿನ ಹಳ್ಳಿ ಮೈಸೂರು ಹೋಬಳಿ ದೊಡ್ಡಕೊಪ್ಪಲು ಬಾರೆ ಸಂತೆ ಮೈದಾನದಲ್ಲಿ ಸಂಗೊಳ್ಳಿ ರಾಯಣ್ಣರ ಪ್ರತಿಮೆ ನಿರ್ಮಿಸಲಾಗಿತ್ತು. ಅದರಂತೆ ಅಂಬೇಡ್ಕರ್ ಪ್ರತಿಮೆ ನಿರ್ಮಿಸುತ್ತೇವೆ ಎಂದು ಒಂದು ತಿಂಗಳ ಹಿಂದೆ ದಲಿತ ಸಮುದಾಯದ ಯುವಕರು ರಾತ್ರೋರಾತ್ರಿ ಡಾ.ಬಿ.ಆರ್.ಅಂಬೇಡ್ಕರ್ ನಾಮಫಲಕ ಅಳವಡಿಸಿದ್ದರು. ಈ ವಿಷಯಕ್ಕೆ ಸಂಬಂಧಿಸಿದಂತೆ 2 ಸಮುದಾಯಗಳ ನಡುವೆ ಘರ್ಷಣೆ ಉಂಟಾಗಿತ್ತು.
ಕುರುಬ ಸಮಾಜದ ರಾಜೇಗೌಡ ಸಭೆಯಲ್ಲಿ ಮಾತನಾಡಿ, ನಾವು ಈಗಾಗಲೇ ಸಂಗೊಳ್ಳಿ ರಾಯಣ್ಣ ಪ್ರತಿಮೆಯನ್ನು ನಿರ್ಮಿಸಿದ್ದೇವೆ. ಸಂಗೊಳ್ಳಿ ರಾಯಣ್ಣ ಪ್ರತಿಮೆ ನಿರ್ಮಿಸುತ್ತಿರುವಾಗಲೇ ವಿರೋಧಿಸಿದ್ದರೆ ನಾವು ಇದನ್ನು ಮಾಡುತ್ತಿರಲಿಲ್ಲ. ಈಗ ಪ್ರತಿಮೆಯನ್ನು ತೆರವುಗೊಳಿಸಿ ಎಂದರೆ ಹೇಗೆ ಸಾಧ್ಯ ಎಂದು ಪ್ರಶ್ನಿಸಿದರು.
ಬಾರೆಸಂತೆ ಮೈದಾನದಲ್ಲಿ ನಾಮಫಲಕ ಅಳವಡಿಸಿರುವುದು ಸರಿಯಲ್ಲ. ಸಂತೆ ನಡೆಯಲು ತೊಂದರೆಯಾಗುತ್ತದೆ. ಆದ್ದರಿಂದ ಆ ಸ್ಥಳದ ಬದಲು ಬೇರೆ ಸ್ಥಳದಲ್ಲಿ ಪ್ರತಿಮೆ ಹಾಗೂ ಭವನವನ್ನು ನಿರ್ಮಿಸಲು ಅವಕಾಶ ಕಲ್ಪಿಸಬೇಕು ಎಂದು ಹೇಳಿದರು.
ದಲಿತ ಮುಖಂಡರು ಇದಕ್ಕೆ ವಿರೋಧ ವ್ಯಕ್ತಪಡಿಸಿ ಸಂಗೊಳ್ಳಿ ರಾಯಣ್ಣ ಸಮಾಜಕ್ಕೆ ತಮ್ಮದೇ ಆದ ಕೊಡುಗೆ ನೀಡಿದ್ದಾರೆ. ಸಂಗೊಳ್ಳಿ ರಾಯಣ್ಣ ಅವರ ಪ್ರತಿಮೆ ನಿರ್ಮಿಸುವಾಗ ಕೆಲವು ದಲಿತರು ದೇಣಿಗೆ ನೀಡಿದ್ದಾರೆ. ನಾವುಗಳು ಅಂದು ವಿರೋಧ ವ್ಯಕ್ತಪಡಿಸಲಿಲ್ಲ. ಅಂಬೇಡ್ಕರ್ ಕೂಡ ವಿಶ್ವಕ್ಕೆ ಜ್ಞಾನದ ಬೆಳಕಾಗಿದ್ದಾರೆ. ಸಂವಿಧಾನ ರಚಿಸಿ ಎಲ್ಲರಿಗೂ ಸಮಾನತೆ ಹಕ್ಕನ್ನು ದೊರಕಿಸಿ ಕೊಟ್ಟಿದ್ದಾರೆ. ಅಂಬೇಡ್ಕರ್ ಅವರನ್ನು ಅರ್ಥ ಮಾಡಿಕೊಳ್ಳದ ನೀವು ಭಾವಚಿತ್ರ ತೆರವುಗೊಳಿಸಲು ಒತ್ತಾಯ ಮಾಡುತ್ತಿರುವುದು ಸರಿಯಲ್ಲ ಎಂದರು. ಈ ವೇಳೆ ಎರಡು ಸಮುದಾಯಗಳ ನಡುವೆ ವಾಗ್ವಾದ ನಡೆಯಿತು.
ಮಧ್ಯ ಪ್ರವೇಶಿಸಿದ ತಹಶೀಲ್ದಾರ್ ವೈ.ಎಂ.ರೇಣುಕುಮಾರ್ ಮಾತನಾಡಿ, ಎರಡು ಸಮುದಾಯದವರು ತಪ್ಪು ಮಾಡಿದ್ದೀರಿ. ಈ ಹಿಂದೆ ಈ ಇಬ್ಬರು ನಾಯಕರ ನಾಮಫಲಕ ನಿರ್ಮಾಣಕ್ಕಾಗಿ ಗ್ರಾಮ ಪಂಚಾಯಿತಿಗೆ ಅರ್ಜಿ ಸಲ್ಲಿಸಿದ್ದರು. ಆದರೆ ಎರಡೂ ಅರ್ಜಿಗಳು ತಿರಸ್ಕಾರಗೊಂಡಿವೆ. ಆದರೂ ರಾತ್ರೋರಾತ್ರಿ ಇಬ್ಬರು ನಾಯಕರ ಪ್ರತಿಮೆ ಹಾಗೂ ನಾಮಫಲಕ ಅಳವಡಿಸಲಾಗಿದೆ. ಇದಕ್ಕೆ ಸುಪ್ರೀಂ ಕೋರ್ಟ್‌ನಿಂದ ಅನುಮತಿ ಪಡೆಯಬೇಕು. ಮಹಾನಾಯಕರ ನಾಮಫಲಕಗಳನ್ನು ರಸ್ತೆಯ ಬದಿ, ಸರ್ಕಾರಿ ಜಾಗಗಳಲ್ಲಿ ಅಳವಡಿಸಬಾರದೆಂದು ಆದೇಶ ಹೊರಡಿಸಿದೆ. ನೀವೆಲ್ಲ ಒಮ್ಮತದಿಂದ ತೀರ್ಮಾನ ತೆಗೆದುಕೊಂಡರೆ ನಮ್ಮ ಯಾವುದೇ ಅಭ್ಯಂತರವಿಲ್ಲ. ಈ ರೀತಿ ಸಮಾಜದಲ್ಲಿ ಶಾಂತಿ ಕದಡಿದರೆ ಮುಲಾಜಿಲ್ಲದೆ ಎರಡು ನಾಮಫಲಕ ತೆರವುಗೊಳಿಸಲಾಗುತ್ತದೆ. ಅಲ್ಲದೆ ಪ್ರಕರಣ ದಾಖಲು ಮಾಡುವುದಾಗಿ ಎಚ್ಚರಿಕೆ ನೀಡಿದರು. ಆದರೂ ಅಧಿಕಾರಿಗಳ ಮಾತಿಗೂ ಜಗ್ಗದ ಸಮುದಾಯಗಳು ಜಟಾಪಟಿಗೆ ನಿಂತರು.
ಕೊನೆಗೆ ಸುದೀರ್ಘ ಚರ್ಚೆ ನಡೆದು ಸಂಗೊಳ್ಳಿ ರಾಯಣ್ಣ ಪ್ರತಿಮೆ ಮಾಡಿದಂತೆ ಅಂಬೇಡ್ಕರ್ ಅವರ ನಾಮಫಲಕ ಉಳಿಸುವುದರ ಜತೆಗೆ ಇಬ್ಬರ ಪ್ರತಿಮೆಗಳನ್ನು ಉಳಿಸಿ ಪ್ರೀತಿ ವಿಶ್ವಾಸದಿಂದ ಗ್ರಾಮದಲ್ಲಿ ಬದುಕಲು ಅವಕಾಶ ಮಾಡಿಕೊಡಿ ಎಂದು ಮುಖಂಡರು ಮನವಿ ಮಾಡಿದರು. ಮನವಿಗೆ ಪೂರಕವಾಗಿ ಸ್ಪಂದಿಸಿದ ಕುರುಬ ಸಮುದಾಯ ಅಂಬೇಡ್ಕರ್ ಅವರ ನಾಮಫಲಕ ನಿರ್ಮಿಸಲು ಸಂಪೂರ್ಣ ಬೆಂಬಲಿಸುವುದಾಗಿ ತಿಳಿಸಿದರು. ಅಲ್ಲಿಯವರೆಗೆ ಯಾವುದೇ ಪ್ರತಿಮೆ, ನಾಮಫಲಕಗಳನ್ನು ತೆರವುಗೊಳಿಸಿದಂತೆ ಸಿಪಿಐ ಪ್ರದೀಪ್ ಅವರು ಸಲಹೆ ಸೂಚನೆ ನೀಡಿದರು.
ವಕೀಲ ಎಚ್.ಕೆ. ಹರೀಶ್, ದಸಂಸ ರಾಜ್ಯ ಸಂಚಾಲಕ ಎಂ ಸೋಮಶೇಖರ್. ಇತರರು ಹಾಜರಿದ್ದರು.