

ಎನ್.ಆರ್.ಪುರ: ಪ್ರತಿಯೊಂದು ಜೀವರಾಶಿಗೂ ಸಂವಿಧಾನದ ಮೂಲಕ ಬದುಕುವ ಹಕ್ಕನ್ನು ಕೊಟ್ಟಿದ್ದು ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಎಂದು ಕೊಪ್ಪ ಎಪಿಎಂಸಿ ನಿರ್ದೇಶಕ ಎಚ್.ಎಂ.ಶಿವಣ್ಣ ಹೇಳಿದರು.
ಡಾ.ಬಿ.ಆರ್.ಅಂಬೇಡ್ಕರ್ ವೃತ್ತದಲ್ಲಿ ಶುಕ್ರವಾರ ಸಂಜೆ ದಲಿತ ಸಂಘರ್ಷ ಸಮಿತಿ ಆಯೋಜಿಸಿದ್ದ ಡಾ.ಬಿ.ಆರ್.ಅಂಬೇಡ್ಕರ್ ರವರ 68ನೇ ಪರಿನಿರ್ವಾಣ ದಿನ ಕಾರ್ಯಕ್ರಮದಲ್ಲಿ ಮಾತನಾಡಿ, ಅಂಬೇಡ್ಕರ್ ಮಹಾನ್ ಮಾನವತಾವಾದಿಯಾಗಿದ್ದರು. ಭಾರತದಲ್ಲಿ ಜಾತಿ, ತಾರತಮ್ಯ ನೀತಿ ಹೋಗಲಾಡಿಸಲು ಶ್ರಮಿಸಿದರು. ಸಂವಿಧಾನದಲ್ಲಿ ಸ್ವಾತಂತ್ರ್ಯ, ಸಮಾನತೆ, ಭಾತೃತ್ವ ಪ್ರತಿಪಾದಿಸುವ ಮೂಲಕ ದೇಶದಲ್ಲಿ ವಾಸಿಸುವ ಎಲ್ಲ ಧರ್ಮ, ಜನಾಂಗದ ಮಹಿಳೆಯರಿಗೆ ಹಕ್ಕು ಮತ್ತು ನ್ಯಾಯ ಕೊಟ್ಟರು. ವರ್ಣಾಶ್ರಮ ವ್ಯವಸ್ಥೆ ತೊಡೆದು ಹಾಕಲು ಶ್ರಮಿಸಿ ಹಿಂದುಳಿದ ವರ್ಗದವರಿಗೆ ಧ್ವನಿ ನೀಡುವ ಕೆಲಸ ಮಾಡಿದರು. ಅಂಬೇಡ್ಕರ್ ಸಂವಿಧಾನದ ಮೂಲಕ ಇನ್ನೂ ಜೀವಂತವಾಗಿದ್ದಾರೆ ಎಂದರು.
ಪಪಂ ಸ್ಥಾಯಿ ಸಮಿತಿ ಅಧ್ಯಕ್ಷ ಪ್ರಶಾಂತ್.ಎಲ್.ಶೆಟ್ಟಿ ಮಾತನಾಡಿ, ಡಾ.ಬಿ.ಆರ್.ಅಂಬೇಡ್ಕರ್ ಅವರು ಶ್ರೇಷ್ಟ ಸಂವಿಧಾನ ನೀಡುವ ಮೂಲಕ ಭಾರತದ ಬೃಹತ್ ಪ್ರಜಾಪ್ರಭುತ್ವದ ವ್ಯವಸ್ಥೆಯ ಬಗ್ಗೆ ಜಗತ್ತು ನೋಡುವಂತೆ ಮಾಡಿದರು. ಶೋಷಿತರನ್ನು ಸಮಾಜ ಮುಖ್ಯವಾಹಿನಿಗೆ ತರಲು ಶ್ರಮಿಸಿದರು. ಭಾರತದ ಪ್ರಜಾಪ್ರಭುತ್ವ ಗಟ್ಟಿಯಾಗಲು ಡಾ.ಬಿ.ಆರ್.ಅಂಬೇಡ್ಕರ್ ಬರೆದ ಸಂವಿಧಾನ ಕಾರಣ. ಧ್ವನಿ ಇಲ್ಲದ ವರ್ಗದವರೂ ಅಧಿಕಾರ ಪಡೆಯಲು ಸಂವಿಧಾನವೇ ಕಾರಣ ಎಂದರು.
ಪಪಂ ಸದಸ್ಯೆ ಜುಬೇದಾ ಮಾತನಾಡಿ, ದೇಶದಲ್ಲಿ ಎಲ್ಲ ಧರ್ಮದವರು ಒಗ್ಗಟ್ಟಾಗಿ, ಸಹೋದರಂತೆ ಬದುಕಲು ಸಂವಿಧಾನವೇ ಕಾರಣ. ಎಲ್ಲ ಭಾರತೀಯರು ಒಪ್ಪುವಂತಹ ಏಕೈಕ ಗ್ರಂಥ ಡಾ.ಬಿ.ಆರ್.ಅಂಬೇಡ್ಕರ್ ಅವರು ಬರೆದ ಸಂವಿಧಾನ ಎಂದರು.
ನಗರ ಕಾಂಗ್ರೆಸ್ ಘಟಕದ ಅಧ್ಯಕ್ಷ ಬಿ.ವಿ.ಉಪೇಂದ್ರ, ದಲಿತ ಸಂಘರ್ಸ ಸಮಿತಿ ಸದಸ್ಯ ಎಂ.ಮಹೇಶ್, ಚಿತ್ರಪ್ಪಯರಬಾಳ, ತಾಲೂಕು ವಾಲ್ಮೀಕಿ ಸಂಘದ ಅಧ್ಯಕ್ಷ ಮಂಜುನಾಥ್, ಸತೀಶ್, ಲೋಕೇಶ್, ಸಮಾಜ ಕಲ್ಯಾಣ ಇಲಾಖೆ ಸಿಬ್ಬಂದಿ ಪ್ರೇಮ ಇದ್ದರು.