

ರಾಯಚೂರು: ಭೂಮಿ, ಬಂಡವಾಳ ಮತ್ತು ಅಧಿಕಾರವನ್ನು ಸಮನಾಗಿ ಹಂಚಿದಾಗ ಸಮಾಜದಲ್ಲಿ ಸಮಾನತೆ ಸಾಕಾರಗೊಳ್ಳಲಿದೆ ಎಂದು ಕೃಷಿ ವಿಜ್ಞಾನಗಳ ವಿವಿ ಕುಲಪತಿ ಡಾ.ಹನುಮಂತಪ್ಪ ಹೇಳಿದರು.
ಕೃಷಿ ವಿಜ್ಞಾನಗಳ ವಿವಿ ಪ್ರೇಕ್ಷಾಗೃಹದಲ್ಲಿ ದಲಿತ ಸಂಘರ್ಷ ಸಮಿತಿಯಿಂದ ಆಯೋಜಿಸಿದ್ದ ಪ್ರೊ.ಬಿ.ಕೃಷ್ಣಪ್ಪ ಜನ್ಮದಿನ ಹಾಗೂ ಸದಸ್ಯತ್ವ ನೋಂದಣಿ ಅಭಿಯಾನ ಉದ್ಘಾಟಿಸಿ ಸೋಮವಾರ ಮಾತನಾಡಿದರು. ಯುವಜನತೆ ಅಂಬೇಡ್ಕರ್ ಮತ್ತು ಪ್ರೊ.ಬಿ.ಕೃಷ್ಣಪ್ಪ ಅವರ ಚಿಂತನೆಗಳನ್ನು ಅರಿಯುವ ಅಗತ್ಯತೆ ಹಿಂದಿಗಿಂತ ಈಗ ಹೆಚ್ಚಾಗಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಸಮಿತಿಯ ಸಂಚಾಲಕ ಎಂ.ಗುರುಮೂರ್ತಿ ಮಾತನಾಡಿ, ದಲಿತ ಸಂಘರ್ಷ ಸಮಿತಿಯ ರಥವನ್ನು ನಾಡಿನ ಉದ್ದಗಲಕ್ಕೆ ಎಳೆದುಕೊಂಡು ಹೋಗಿ ದಲಿತರಲ್ಲಿ ಪ್ರತಿಭಟನೆಯನ್ನು ಪ್ರೊ.ಬಿ.ಕೃಷ್ಣಪ್ಪ ಕಿಚ್ಚು ಹಚ್ಚಿದ್ದರು. ಸಮಾಜದಲ್ಲಿ ಅರಿವಿನ ಬೆಳಕು ತೋರಿಸಿದ ಧೀಮಂತ ಚೇತನ ಪ್ರೊ.ಬಿ.ಕೃಷ್ಣಪ್ಪ ಆಗಿದ್ದಾರೆ ಎಂದು ಹೇಳಿದರು.
ಸಂಘಟನಾ ಸಂಚಾಲಕ ಹನುಮಂತಪ್ಪ ಕಾಕರಗಲ್ ಮಾತನಾಡಿ, ರಾಜ್ಯದಲ್ಲಿ ಸಮಿತಿಯ ಕಾರ್ಯಕರ್ತರ ಸಂಖ್ಯೆ ಎಷ್ಟಿದೆ ಎನ್ನುವುದರ ಬಗ್ಗೆ ನಿಖರವಾದ ಅಂಕಿ-ಅಂಶ ಇಲ್ಲದಿರುವುದರಿಂದ ದಲಿತ ಸಂಘರ್ಷ ಸಮಿತಿ ಪ್ರಮುಖರು ಕಡ್ಡಾಯವಾಗಿ ಸದಸ್ಯತ್ವ ನೋಂದಣಿ ಮಾಡಿಸಿ ರಾಜ್ಯ ಸಮಿತಿಗೆ ವರದಿ ನೀಡಬೇಕು ಎಂದು ತಿಳಿಸಿದರು.