

ಮೈಸೂರು: ಅಶೋಕಪುರಂನ ಜನತಾ ಅಸೋಸಿಯೇಷನ್ ವತಿಯಿಂದ ಮಂಗಳವಾರ ಅಶೋಕಪುರಂನಲ್ಲಿ ಭೀಮ ಜಯಂತ್ಯುತ್ಸವ ಆಚರಿಸಲಾಯಿತು.
ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕ ರಂಗೇಗೌಡ ಮಾತನಾಡಿ, ಅಂಬೇಡ್ಕರ್ ಜಗತ್ತು ಕಂಡ ಶ್ರೇಷ್ಠ ಮಹಾಮಾನವತಾವಾದಿ. ಅವರು ಸರ್ವ ಕಾಲಕ್ಕೂ ಸಲ್ಲುವ ಸಂವಿಧಾನವನ್ನು ನೀಡಿದ್ದು, ಸಂವಿಧಾನದಲ್ಲಿರುವ ಎಲ್ಲ ಅಂಶಗಳನ್ನು ಅಳವಡಿಸಿಕೊಂಡು ಸಮಾನತೆಯಿಂದ ಬದುಕಬೇಕು ಎಂದರು.
ಅಸ್ಪಶ್ಯತೆ ಸಂಪೂರ್ಣವಾಗಿ ನಿಲ್ಲಬೇಕು, ಸಮಾನತೆಯ ಬೆಳಕು ಪರಿಪೂರ್ಣವಾಗಿ ಎಲ್ಲ ರಂಗದಲ್ಲೂ ಪಸರಿಸಬೇಕು. ಆಗ ಮಾತ್ರ ಸಮಾಜ ಮುಂದುವರಿಯಲು ಸಾಧ್ಯವಾಗುತ್ತದೆ. ವಿದ್ಯಾರ್ಥಿಗಳು ಸರ್ಕಾರದಿಂದ ಸಿಗುವ ಸವಲತ್ತುಗಳನ್ನು ಸದುಪಯೋಗಪಡಿಸಿಕೊ ಂಡು ವಿದ್ಯಾವಂತರಾಗಿ ಉತ್ತಮ ಬದುಕು ರೂಪಿಸಿಕೊಳ್ಳಬೇಕು ಎಂದು ಕರೆ ನೀಡಿದರು.
ವಿದ್ಯಾರ್ಥಿಗಳು ಕೆಎಎಸ್, ಐಎಎಸ್, ಐಪಿಎಸ್ ಅಧಿಕಾರಿಗಳಾಗಲು ಸ್ಪರ್ಧಾತ್ಮಕ ಪರೀಕ್ಷೆಗೆ ಸಜ್ಜುಗೊಳ್ಳಬೇಕು. ಸರ್ಕಾರಿ ಅಧಿಕಾರಿಗಳಾಗಿ ಉದ್ಯೋಗ ಪಡೆದು ತಮ್ಮ ಕೈಲಾದ ಸಹಾಯವನ್ನು ಸಮಾಜಕ್ಕೆ ಮಾಡಬೇಕು ಎಂದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ಡಾ.ಪಿ.ಸಿ.ಕುಮಾರಸ್ವಾಮಿ ಮಾತನಾಡಿ, ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ಆದರ್ಶ ವ್ಯಕ್ತಿಗಳ ಆದರ್ಶಗಳನ್ನು ಅಳವಡಿಸಿಕೊಳ್ಳಬೇಕು. ಡಾ.ಬಿ.ಆರ್.ಅಂಬೇಡ್ಕರ್, ಬುದ್ಧ, ಬಸವ ಅವರಂತಹ ಮಹಾನ್ ನಾಯಕರು ಹಾಕಿಕೊಟ್ಟಿರುವ ಮಾರ್ಗದಲ್ಲಿ ಮುನ್ನಡೆಯಬೇಕು ಎಂದು ಕರೆ ನೀಡಿದರು.
ಈ ಸಂದರ್ಭ ಪಿಚ್‌ಡಿ ಪದವಿ ಗಳಿಸಿದ ಡಾ.ಜಯರಾಜು, ಡಾ.ಜೆ.ವಿಂದ್ಯಾ, ಡಾ.ಸಿ.ಸೋಮೇಶ್, ಡಾ.ರಾಜು, ಡಾ.ವಿ.ಸಿ.ಪುನೀತ ಅವರನ್ನು ಸನ್ಮಾನಿನಿಸಲಾಯಿತು. ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಈ ಬಾರಿ ಅತ್ಯುನ್ನತ ಸ್ಥಾನದಲ್ಲಿ ತೇರ್ಗಡೆ ಹೊಂದಿದ ಎನ್. ಸೃಜನಾ, ಸೌಜನ್ಯ, ಐಶ್ವರ್ಯ, ಚೈತನ್ಯ, ಸೋಹನ್‌ರಾಜ್, ದೀಪ್ತಿ, ಪರಿಣಿತ, ರಕ್ಷಿತ, ಭೂಮಿಕ, ಕಿವುಡು ಮತ್ತು ಅಂಧರ ಕೈಗಾರಿಕಾ ತರಬೇತಿ ಕೇಂದ್ರದಲ್ಲಿ ಪಿಯುಸಿ ತತ್ಸಮಾನ ಪರೀಕ್ಷೆಯಲ್ಲಿ ಅತ್ಯುನ್ನತ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ ವಿ. ಅಜಿತ್ ಅವರನ್ನು ಸನ್ಮಾನಿಸಿಸಲಾಯಿತು.
ವೇದಿಕೆಯಲ್ಲಿ ಮಾಜಿ ಮೇಯರ್ ಪುರುಷೋತ್ತಮ್, ನಗರಪಾಲಿಕೆ ಮಾಜಿ ಸದಸ್ಯೆ ಪಲ್ಲವಿ ಬೇಗಂ, ಕೆ.ಆರ್.ಬ್ಯಾಂಕ್ ಮಾಜಿ ಅಧ್ಯಕ್ಷ ವಾಸು, ಹೋಮಿಯೋಪತಿ ತಜ್ಞರಾದ ಹೇಮಂತ್, ಶಿವಪ್ರಸಾದ್, ಜನತಾ ಅಸೋಸಿಯೇಷನ್ ಅಧ್ಯಕ್ಷ ಸಿ.ರುದ್ರಸ್ವಾಮಿ, ಉಪಾಧ್ಯಕ್ಷ ಉಪನ್ಯಾಸಕ ವಿಜಯಕುಮಾರ್, ಕಾರ್ಯದರ್ಶಿ ಪ್ರಾಧ್ಯಾಪಕ ಶ್ರೀನಿವಾಸ್, ಖಜಾಂಚಿ ಅವಿನಾಶ್, ಪದಾಧಿಕಾರಿಗಳಾದ ಚಿದಂಬರ, ರಘು, ಜೀವನ್, ರಶ್ಮಿ, ಕುಮುದಾ ಹಾಗೂ ಇತರರು ಇದ್ದರು.