ಸಂವಿಧಾನವನ್ನು ಎಲ್ಲರಿಗೂ ಅರ್ಥೈಸುವ ಕೆಲಸವಾಗಲಿ: ಮಳವಳ್ಳಿ ಶಾಸಕ ಪಿ.ಎಂ.ನರೇಂದ್ರಸ್ವಾಮಿ ಹೇಳಿಕೆ

Ambedkar Jayanti Pre-Meeting Mandya
Published on

ಮಂಡ್ಯ: ಲೋಕಸಭಾ ಚುನಾವಣಾ ನೀತಿ ಸಂಹಿತೆಗೆ ಅಡ್ಡಿಯಾಗದಂತೆ ಏ.14ರಂದು ಡಾ.ಬಿ.ಆರ್.ಅಂಬೇಡ್ಕರ್ ಜಯಂತಿಯನ್ನು ವಿಶಿಷ್ಟವಾಗಿ ಆಚರಿಸೋಣ. ಈ ನಿಟ್ಟಿನಲ್ಲಿ ದೇಶದ ಸಂವಿಧಾನದವನ್ನು ಎಲ್ಲ ವರ್ಗದ ಜನರಿಗೂ ಅರ್ಥೈಸುವ ಕೆಲಸ ಆಗಬೇಕಿದೆ ಎಂದು ಮಳವಳ್ಳಿ ಶಾಸಕ ಪಿ.ಎಂ.ನರೇಂದ್ರಸ್ವಾಮಿ ಹೇಳಿದರು.

ನಗರದ ಗಾಂಧಿಭವನದಲ್ಲಿ ಆಯೋಜಿಸಿದ್ದ ಅಂಬೇಡ್ಕರ್ ಜಯಂತಿ ಆಚರಣೆ ಸಂಬಂಧ ಛಲವಾದಿ ಸಮುದಾಯದ ಮುಖಂಡರೊಂದಿಗೆ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ಅಂಬೇಡ್ಕರ್ ಅವರ ಘೋಷವಾಕ್ಯ ಹಾಗೂ ಸಂವಿಧಾನದ ಆಶಯಗಳ ಅಂಶಗಳುಳ್ಳ ಅವರ ಭಾವಚಿತ್ರ ಮತ್ತು ಕ್ಯಾಂಡಲ್‌ಗಳನ್ನು ಹಿಡಿದು ಸಾವಿರಾರು ಸಂಖ್ಯೆಯಲ್ಲಿ ಅಂದು ಮೆರವಣಿಗೆ ಮಾಡೋಣ ಎಂದು ತಿಳಿಸಿದರು.

ಜಿಲ್ಲೆಯ ಎಲ್ಲ ತಾಲೂಕುಗಳಲ್ಲೂ ಏ.14ರಂದು ಸಂಜೆ ಅಂಬೇಡ್ಕರ್ ಭಾವಚಿತ್ರಗಳನ್ನು ಹಿಡಿದು ಮೆರವಣಿ ನಡೆಸುವ ಮೂಲಕ ಬಾಬಾಸಾಹೇಬರ ಜನ್ಮದಿನವನ್ನು ವಿಶಿಷ್ಟವಾಗಿ ಆಚರಿಸೋಣ. ಜಯಂತಿ ದಲಿತ ಸಮುದಾಯದ ಹಬ್ಬವಲ್ಲ, ಬದಲಿಗೆ ಈ ರಾಷ್ಟದ ಹಬ್ಬವಾಗಬೇಕು. ಅದಕ್ಕಾಗಿ ಸಂವಿಧಾನದ ತಿರುಳನ್ನು ಮನೆಮನೆಗೆ ತಲುಪಿಸುವ ಕೆಲಸವಾಗಬೇಕಿದೆ. ಒಂದು ದಿನದಲ್ಲಿ ಬದಲಾವಣೆ ಅಸಾಧ್ಯ. ಆದ್ದರಿಂದ ಸಾಮೂಹಿಕ ಪ್ರಯತ್ನದಿಂದ ಹಂತಹಂತವಾಗಿ ಈ ಕಾರ್ಯ ಆಗಬೇಕಿದೆ ಎಂದು ಅಭಿಪ್ರಾಯಪಟ್ಟರು.

ವಿಶ್ವದ ಶ್ರೇಷ್ಠ ಮಹಾನಾಯಕ, ನಮ್ಮೆಲ್ಲರ ಸರ್ವಕಾಲೀಕ ಏಕೈಕ ನಾಯಕ ಅಂಬೇಡ್ಕರ್. ಆದ್ದರಿಂದ ಅವರ ಆಶಯಗಳನ್ನು ಜನರಿಗೆ ತಲುಪಿಸುವುದು ಸರ್ವಶ್ರೇಷ್ಠ ಕೆಲಸವೂ ಆಗಿದೆ. ಸಂವಿಧಾನದಲ್ಲಿ ಕೇವಲ ದಲಿತರಿಗೆ ಮಾತ್ರ ಮೀಸಲು ಸೌಲಭ್ಯ ಕಲ್ಪಿಸಿಲ್ಲ. ಎಲ್ಲ ವರ್ಗದ ಜನರು ಹಾಗೂ ಮಹಿಳೆಯರಿಗೂ ಮೀಸಲು ಜಾರಿಗೊಳಿಸಿದ್ದಾರೆ. ಸಮಾನತೆಯ ಹಕ್ಕು ಸಿಕ್ಕಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಮ್ಮ ಅನಿವಾರ್ಯತೆಯನ್ನು ತಿಳಿಸುವ ಪರಿಸ್ಥಿತಿ ಈಗ ಎದುರಾಗಿದೆ. ಇದಕ್ಕಾಗಿ ಸಮುದಾಯದ ಜನರು ಒಗ್ಗೂಡಬೇಕು. ನಾವು ಬೇರೆಯವರನ್ನು ಹುಡುಕಿಕೊಂಡು ಹೋಗಬಾರದು. ನಮ್ಮನ್ನು ಬೇರೆಯವರು ಹುಡುಕಿಕೊಂಡು ಬರುವಂತಾಗಬೇಕು. ವೈಯಕ್ತಿಕ ದ್ವೇಷ-ಅಸೂಯೆ, ಭಿನ್ನಮತ ಮರೆದು ಸಮುದಾಯದ ಸದಾಶಯಕ್ಕಾಗಿ ನಾವೆಲ್ಲರೂ ಸಂಘಟಿರಾಗಬೇಕು. ನಾವು ಸ್ವಾಭಿಮಾನದ ಸಂಕೇತವಾಗಿರಬೇಕು. ಬೌದ್ಧಿಕವಾಗಿ ಪ್ರಬಲರಾಗಬೇಕು. ಸಂವಿಧಾನದ ರಕ್ಷಣೆಗೆ ನಾವೆಲ್ಲರೂ ಕಟಿಬದ್ಧರಾಗಬೇಕೆಂದು ಕರೆ ನೀಡಿದರು.

ಜಿಲ್ಲಾ ಕಾಂಗ್ರೆಸ್ ಪರಿಶಿಷ್ಟ ಜಾತಿ ವಿಭಾಗದ ಅಧ್ಯಕ್ಷ ಎಂ.ಎನ್.ಶ್ರೀಧರ್ ಅಧ್ಯಕ್ಷತೆ ವಹಿಸಿದ್ದರು. ಜಿ.ಪಂ ಮಾಜಿ ಅಧ್ಯಕ್ಷ ಸುರೇಶ್ ಕಂಠಿ, ನಗರಸಭೆ ಮಾಜಿ ಅಧ್ಯಕ್ಷೆ ವಿಜಯಲಕ್ಷ್ಮೀ ರಘುನಂದನ್, ನಗರಸಭೆ ಸದಸ್ಯರಾದ ಗೀತಾ, ಶಿವಪ್ರಕಾಶ್, ಕೆ.ಆರ್.ಪೇಟೆ ಪುರಸಭೆ ಸದಸ್ಯ ಪ್ರೇಮಕುಮಾರ್, ಹೋರಾಟಗಾರ ಪ್ರೊ.ಚಂದ್ರಶೇಖರಯ್ಯ, ಜಿಲ್ಲಾ ಕಾಂಗ್ರೆಸ್ ಮಾಧ್ಯಮ ವಕ್ತಾರ ದೀಪಕ್, ಬಸ್ತಿರಂಗಪ್ಪ, ಶಾಂತರಾಜು ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net