ಮೇ 12ಕ್ಕೆ ಅಂಬೇಡ್ಕರ್ ಜಯಂತಿ, ಪುತ್ಥಳಿ ಅನಾವರಣ

23-1
ಎಚ್.ಡಿ.ಕೋಟೆ ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ತಾಲೂಕು ಆಡಳಿತದಿಂದ ಆಯೋಜಿಸಿದ್ದ ಡಾ.ಬಿ.ಆರ್.ಅಂಬೇಡ್ಕರ್ 134ನೇ ಜಯಂತಿ ಮತ್ತು ಪುತ್ಥಳಿ ಅನಾವರಣ ಕಾರ್ಯಕ್ರಮದದ ಪೂರ್ವಭಾವಿ ಸಭೆಯಲ್ಲಿ ಶಾಸಕ ಅನಿಲ್ ಚಿಕ್ಕಮಾದು ಮಾತನಾಡಿದರು. ಶ್ರೀನಿವಾಸ, ಧರಣೇಶ್, ಎಚ್.ಸಿ.ನರಸಿಂಹ ಮೂರ್ತಿ, ಮಲಾರ ಪುಟ್ಟಯ್ಯ, ಚಾ.ನಂಜುಂಡಮೂರ್ತಿ ಇದ್ದರು.
Published on

ಎಚ್.ಡಿ.ಕೋಟೆ: ಮುಖ್ಯಮಂತ್ರಿ ಸಿದ್ದರಾಯಮಯ್ಯ ಸೇರಿದಂತೆ ವಿವಿಧ ಗಣ್ಯರನ್ನು ಆಹ್ವಾನಿಸಿ ಮೇ 12ರಂದು ಅಂಬೇಡ್ಕರ್ ಜಯಂತಿ ಮತ್ತು ಪುತ್ಥಳಿ ಅನಾವರಣ ಕಾರ್ಯಕ್ರಮವನ್ನು ಅದ್ದೂರಿಯಾಗಿ ಆಯೋಜಿಸಲಾಗುವುದು ಎಂದು ಶಾಸಕ ಅನಿಲ್ ಚಿಕ್ಕಮಾದು ತಿಳಿಸಿದರು.

ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ತಾಲೂಕು ಆಡಳಿತದ ವತಿಯಿಂದ ಬುಧವಾರ ಆಯೋಜಿಸಿದ್ದ ಡಾ.ಬಿ.ಆರ್.ಅಂಬೇಡ್ಕರ್ 134ನೇ ಜಯಂತಿ ಮತ್ತು ಪುತ್ಥಳಿ ಅನಾವರಣ ಕಾರ್ಯಕ್ರಮದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿ, ಮೇ 12ರಂದು ತಾಲೂಕಿಗೆ ಮುಖ್ಯಮಂತ್ರಿಗಳು ಆಗಮಿಸುವುದರಿಂದ ಸಮಾಜದ ಏಳಿಗೆ ಮತ್ತು ತಾಲೂಕಿನ ಅಭಿವೃದ್ಧಿಗೆ ಸಹಕಾರಿಯಾಗುತ್ತದೆ. ತಾಲೂಕು ಆಡಳಿತ ಮತ್ತು ಸಮುದಾಯದ ಜತೆಯಲ್ಲಿ ಕಾರ್ಯಕ್ರಮವನ್ನು ಆಯೋಜಿಸುತ್ತೇವೆ ಎಂದರು.

ಸಮಾಜದ ಶೋಷಣೆಯಿಂದ ನೊಂದು, ಬೆಂದು ಬಳಲಿ ಸಮಾಜದ ಏಳಿಗೆಗೆ ಶ್ರಮಿಸಿದವರು ಡಾ.ಬಿ.ಆರ್.ಅಂಬೇಡ್ಕರ್. ಶೋಷಣೆಯನ್ನು ಅನುಭವಿಸಿದರೂ ಸಹ ಕ್ರಾಂತಿಕಾರಿಯಾಗಲಿಲ್ಲ, ತಾನು ಅನುಭವಿಸಿದ ಯಾತನೆಯನ್ನು ಇತರ ಜನರು ಅನುಭವಿಸಬಾರದು ಎಂದು ಎಲ್ಲರಿಗೂ ಸಮಾನತೆ ಜತೆಗೆ ಸೋದರತ್ವವನ್ನು ಸಂವಿಧಾನದಲ್ಲಿ ಅಡಕವಾಗಿಸಿದ್ದಾರೆ ಎಂದರು.

ಮುಖಂಡ ಚೌಡಹಳ್ಳಿ ಜವರಯ್ಯ ಮಾತನಾಡಿ, ಪ್ರತಿಮೆ ಯಾವ ರೂಪದಲ್ಲಿದೆ ಎಂಬ ಬಗ್ಗೆ ಸ್ಥಳೀಯರಿಗೆ ತೋರಿಸಿ ನಂತರ ಸ್ಧಾಪನೆ ಮಾಡುವುದು ಒಳಿತು ಎಂದರು. ತಹಸೀಲ್ದಾರ್ ಶ್ರೀನಿವಾಸ, ಇಒ ಧರಣೇಶ್, ಪುರಸಭಾ ಸದಸ್ಯ ಮತ್ತು ಆದಿಕರ್ನಾಟಕ ಮಹಾಸಭಾ ಅಧ್ಯಕ್ಷ ಎಚ್.ಸಿ.ನರಸಿಂಹ ಮೂರ್ತಿ, ಮಲಾರ ಪುಟ್ಟಯ್ಯ, ಚಾ.ನಂಜುಂಡಮೂರ್ತಿ, ಸ್ಥಾಯಿ ಸಮಿತಿ ಅಧ್ಯಕ್ಷ ಎಂ.ಮಧು, ಕೆ.ಈರೇಗೌಡ, ಜೀವಿಗ ಬಸವರಾಜು, ಸೋಗಹಳ್ಳಿ ಶಿವಣ್ಣ, ರಾಮಸ್ವಾಮಿ, ಹೈರಿಗೆ ಶಿವರಾಜು, ಎಂ.ಡಿ.ಮಂಚಯ್ಯ, ಜಿವಿಕ ಉಮೇಶ್, ಬೆಟ್ಟಯ್ಯ, ನಾಗರಾಜು, ಮುದ್ದುಮಲ್ಲಯ್ಯ, ವನಸಿರಿ ಶಂಕರ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net