

ಚಾಮರಾಜನಗರ: ಯಳಂದೂರು ತಾಲೂಕಿನ ಕೆಸ್ತೂರು ಗ್ರಾಮದಲ್ಲಿ ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ಜಯಂತಿಯನ್ನು ಶನಿವಾರ ಅದ್ದೂರಿಯಾಗಿ ಆಚರಿಸಲಾಯಿತು.
ಮುಂಜಾನೆ ಅಂಬೇಡ್ಕರ್ ಭವನದಲ್ಲಿರುವ ಬುದ್ಧ ಮತ್ತು ಅಂಬೇಡ್ಕರ್ ಭಾವಚಿತ್ರಕ್ಕೆ ಗ್ರಾಮದ ಯಜಮಾನರು, ಸಂಘದ ಪದಾಧಿಕಾರಿಗಳು ಪುಷ್ಪನಮನ ಸಲ್ಲಿಸಿದರು. ನಂತರ ಅಂಬೇಡ್ಕರ್ ಭಾವಚಿತ್ರಗಳನ್ನು ಪಲ್ಲಕ್ಕಿ ಹಾಗೂ ಎತ್ತಿನಗಾಡಿ, ಟ್ರಾೃಕ್ಟರ್‌ಗಳಲ್ಲಿ ಇರಿಸಿ ವಿವಿಧ ಫಲ ಪುಷ್ಪಗಳಿಂದ ಸಿಂಗಾರಗೊಳಿಸಿ ಗ್ರಾಮದ ಎಲ್ಲ ಜನಾಂಗದ ಬೀದಿಗಳಲ್ಲಿ ಮೆರವಣಿಗೆ ಮಾಡಿದರು.
ಬುದ್ಧ, ಬಸವ, ಅಂಬೇಡ್ಕರ್ ಹಾಗೂ ಸಂವಿಧಾನದ ಪ್ರಸ್ತಾವನೆ ಚಿತ್ರಗಳು ಮೆರವಣಿಗೆಯಲ್ಲಿ ಇರಿಸಲಾಗಿತ್ತು. ಯುವಕರು ಮುಖಂಡರು ಬಿಳಿ ವಸ್ತ್ರ ಮತ್ತು ನೀಲಿ ಶಾಲುಗಳನ್ನು ಧರಿಸಿ ಕುಣಿದು ಕುಪ್ಪಳಿಸಿದರು. ರಸ್ತೆ ಉದ್ದಕ್ಕೂ ನೀರು, ಮಜ್ಜಿಗೆ, ಪಾನಕ ವಿತರಿಸಿದರು. ಗ್ರಾಮದ ಮಹಿಳೆಯರು ಪುಷ್ಪ ನಮನ ಸಲ್ಲಿಸಿ ಸಂತಸಪಟ್ಟರು. ಅಂಬೇಡ್ಕರ್ ಜಯಂತಿ ಪ್ರಯುಕ್ತ ಭಾನುವಾರ ವೇದಿಕೆ ಕಾರ್ಯಕ್ರಮ ಆಯೋಜಿಸಲಾಗಿದೆ. ಅಲ್ಲದೆ, ಭೋಜನ ವ್ಯವಸ್ಥೆ ಮಾಡಲಾಗಿದೆ. ಸುಮಾರು 5000ಕ್ಕೂ ಹೆಚ್ಚು ಜನರಿಗೆ ಊಟದ ವ್ಯವಸ್ಥೆ ಮಾಡಲಾಗಿದೆ ಎಂದು ಗ್ರಾಮಸ್ಥರು ತಿಳಿಸಿದರು.
ಗ್ರಾಮದ ಯಜಮಾನರು ನಿವೃತ್ತ ಪ್ರಾಧ್ಯಾಪಕ ಪುಟ್ಟಸ್ವಾಮಿ, ನಿವೃತ್ತ ಉಪನಿರ್ದೇಶಕ ಸಿದ್ದರಾಜು, ಅಂಬೇಡ್ಕರ್ ಸಂಘದ ಅಧ್ಯಕ್ಷ, ಪದಾಧಿಕಾರಿಗಳು. ಮುಖಂಡರು, ಗ್ರಾಮಸ್ಥರು, ಯುವಕರು ಇದ್ದರು.