ಮೈಸೂರು: ಶೋಷಿತ ಸಮುದಾಯದ ಏಳಿಗೆಗೋಸ್ಕರ ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ಜಾರಿಗೊಳಿಸಿದ ಮೀಸಲಾತಿ ಪ್ರಸ್ತುತ ಎಲ್ಲ ಸಮುದಾಯಗಳಿಗೂ ವಿಸ್ತರಣೆಗೊಂಡಿರುವ ಹಿನ್ನೆಲೆಯಲ್ಲಿ ಮೀಸಲಾತಿ ತನ್ನ ಮೌಲ್ಯ ಕಳೆದುಕೊಳ್ಳುತ್ತಿದೆ ಕೊಳ್ಳೆಗಾಲ ಶಾಸಕ ಎ.ಆರ್.ಕೃಷ್ಣಮೂರ್ತಿ ಬೇಸರ ವ್ಯಕ್ತಪಡಿಸಿದರು.
ರಾಜ್ಯ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ನೌಕರರ ಸಂಘ ನಗರದ ಕಲಾಮಂದಿರದಲ್ಲಿ ಭಾನುವಾರ ಸಂವಿಧಾನ ಶಿಲ್ಪಿ ಡಾ.ಬಿ. ಆರ್. ಅಂಬೇಡ್ಕರ್ ಜಯಂತಿ ಪ್ರಯುಕ್ತ ಆಯೋಜಿಸಿದ್ದ ಪ್ರತಿಭಾ ಪುರಸ್ಕಾರ ಹಾಗೂ ಅಭಿನಂದನಾ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ಪ್ರಸ್ತುತ ಮೀಸಲಾತಿ ಪಡೆಯದ ಸಮುದಾಯಗಳೇ ಇಲ್ಲದಂತಾಗಿದೆ. ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಹಾಗೂ ಆರ್ಥಿಕವಾಗಿ ಶೋಷಣೆಗೆ ಗುರಿಯಾದ ಸಮುದಾಯಗಳಿಗೆ ದೊರೆಯಬೇಕಾಗಿದ್ದ ಮೀಸಲಾತಿ ಸೌಲಭ್ಯ ಪ್ರಸ್ತುತ ಎಲ್ಲ ಸಮುದಾಯಗಳಿಗೂ ವಿಸ್ತರಿಸಲಾಗಿದೆ. ಹೀಗಾಗಿ ಮೀಸಲಾತಿಯು ಅರ್ಥ ಕಳೆದುಕೊಳ್ಳುತ್ತಿದೆ ಎಂದರು.
ಪರಿಶಿಷ್ಟರ ಮೀಸಲಾತಿ ಹೆಚ್ಚಳಕ್ಕೆ ಸಾಕಷ್ಟು ಹೋರಾಟಗಳು ನಡೆದಿವೆ. ಬಜೆಟ್ ಹಂಚಿಕೆಯಲ್ಲೂ ಪರಿಶಿಷ್ಟ ಸಮುದಾಯಗಳಿಗೆ ಸೂಕ್ತ ಪ್ರಮಾಣದಲ್ಲಿ ಅನುದಾನ ದೊರೆಯುತ್ತಿಲ್ಲ. ಸಿದ್ದರಾಮಯ್ಯ ಮೊದಲ ಬಾರಿ ಮುಖ್ಯಮಂತ್ರಿಯಾಗಿದ್ದ ಸಂದರ್ಭ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಅಭಿವೃದ್ಧಿಗೆ ನೀಡಿದ ಅನುದಾನವನ್ನು ಸಂಪೂರ್ಣ ಕಾಲಮಿತಿಯೊಳಗೆ ಬಳಸಬೇಕು ಎಂಬ ಕಾಯ್ದೆಯನ್ನು ಜಾರಿಗೆ ತಂದರು. ಆದರೆ, ನಂತರ ಬಂದ ಸರ್ಕಾರಗಳು ಆ ಬಗ್ಗೆ ಹೆಚ್ಚಿನ ಗಮನ ಕೊಡಲಿಲ್ಲ, ಮಾತ್ರವಲ್ಲ ಅನುದಾನವನ್ನು ಸಹ ಕಡಿತಗೊಳಿಸಿತು ಎಂದು ಬೇಸರ ವ್ಯಕ್ತಪಡಿಸಿದರು.
ಕೊಳ್ಳೇಗಾಲದ ಚೇತವನ ಬುದ್ಧ ವಿಹಾರದ ಮನೋರಕ್ಕಿತ ಬಂತೇಜಿ ಮಾತನಾಡಿ, ದೇಶಕ್ಕೆ ಉತ್ತಮ ಸಂವಿಧಾನ ನೀಡಲು ಅಂಬೇಡ್ಕರ್ ಪಟ್ಟ ಪಡಿಪಾಡು ಹೇಳತೀರದು. ಜಾತಿ ವಿನಾಶ ಕೃತಿಯಲ್ಲಿ ಈ ದೇಶದ ಜಾತಿ ಕ್ರೌರ್ಯದ ಬಗ್ಗೆ ಅಂಬೇಡ್ಕರ್ ಬರೆದಿರುವು ದನ್ನು ಪ್ರತಿಯೊಬ್ಬರೂ ಓದಬೇಕು. ಶಿಕ್ಷಣದ ಮಹತ್ವ ಎಂತಹದ್ದು ಎಂದು ಗೊತ್ತಿದ್ದ ಕಾರಣದಿಂದಲೇ ಅಂಬೇಡ್ಕರ್ ದೊಡ್ಡ ವ್ಯಕ್ತಿಯಾಗಲು ಸಾಧ್ಯವಾಯಿತು ಎಂದರು.
ಗಾಂಧಿನಗರದ ಶ್ರೀ ಉರಿಲಿಂಗಿ ಪೆದ್ದಿಮಠದ ಶ್ರೀ ಜ್ಞಾನಪ್ರಕಾಶ ಸ್ವಾಮೀಜಿ ಮಾತನಾಡಿ, ಮೀಸಲಾತಿಯನ್ನು ದುರ್ಬಲಗೊಳಿಸುವ ಪ್ರಯತ್ನ ನಿರಂತರವಾಗಿ ನಡೆಯುತ್ತಿದೆ. ಅದೇ ರೀತಿ ಅಂಬೇಡ್ಕರ್ ನೀಡಿದ ಸಂವಿಧಾನವನ್ನು ಸಹ ತಿರುಚುವ ಕಾರ್ಯ ನಡೆಯುತ್ತಿರುವುದು ಕಳವಳಕಾರಿ ಸಂಗತಿ ಎಂದು ಹೇಳಿದರು.
ದಾವಣಗೆರೆಯ ರಾಜನಹಳ್ಳಿಯ ಶ್ರೀ ವಾಲ್ಮೀಕಿ ಗುರುಪೀಠದ ಶ್ರೀ ಪ್ರಸನ್ನಾನಂದ ಸ್ವಾಮೀಜಿ ಮಾತನಾಡಿ, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರು ಒಂದಾದರೆ ತಮಗೆ ಸಿಗಬೇಕಾದ ನ್ಯಾಯಬದ್ಧ ಹಕ್ಕುಗಳನ್ನು ಪಡೆಯಲು ಸಾಧ್ಯವಿದೆ. ನಮ್ಮಲ್ಲಿರುವ ಒಳ ಜಗಳ ಬಿಟ್ಟು ಅಂಬೇಡ್ಕರ್ ಹಾಕಿಕೊಟ್ಟ ಮಾರ್ಗದಲ್ಲಿ ಸಾಗಬೇಕು ಎಂದು ಕರೆ ನೀಡಿದರು.
ವೇದಿಕೆಯಲ್ಲಿ ಶಾಸಕ ಪಿ.ಎಂ. ನರೇಂದ್ರಸ್ವಾಮಿ, ವಿಧಾನಪರಿಷತ್ ಸದಸ್ಯ ಡಾ.ಡಿ.ತಿಮ್ಮಯ್ಯ, ಮಾಜಿ ಮೇಯರ್ ಪುರುಷೋತ್ತಮ್, ಸಾಮಾಜಿಕ ಹೋರಾಟಗಾರ ಅಹಿಂದ ಜವರಪ್ಪ, ಸಂಘದ ರಾಜ್ಯಾಧ್ಯಕ್ಷ ಡಿ. ಚಂದ್ರಶೇಖರಯ್ಯ, ಜಿಲ್ಲಾಧ್ಯಕ್ಷ ಡಾ.ಶಿವರಾಮಕೃಷ್ಣ, ಪ್ರಧಾನ ಕಾರ್ಯದರ್ಶಿ ಪಿ. ರಾಘವೇಂದ್ರ ಹಾಗೂ ಇತರರು ಇದ್ದರು.