

ವಿಜಯವಾಣಿ ಸುದ್ದಿಜಾಲ ಬೆಂಗಳೂರು ಗ್ರಾಮಾಂತರ
ಯುವ ಪೀಳಿಗೆಗೆ ಸಂವಿಧಾನಶಿಲ್ಪಿ ಡಾ.ಬಿ.ಆರ್,ಅಂಬೇಡ್ಕರ್ ಮಾದರಿಯಾಗಿದ್ದಾರೆ ಅವರ ಮಾರ್ಗದರ್ಶನ ಎಲ್ಲರಿಗೂ ಸ್ಪೂರ್ತಿಯಾಗಿದೆ ಎಂದು ಗ್ರಾಮಾಂತರ ಜಿಲ್ಲೆಯ ಜಿಲ್ಲಾಧಿಕಾರಿ ಎ.ಬಿ.ಬಸವರಾಜು ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಸಮಾಜ ಕಲ್ಯಾಣ ಇಲಾಖೆ ವತಿಯಿಂದ ದೇವನಹಳ್ಳಿಯ ಜಿಲ್ಲಾಡಳಿತಭವನದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಡಾ.ಬಿ.ಆರ್.ಅಂಬೇಡ್ಕರ್ ಜಯಂತಿಯಲ್ಲಿ ಮಾತನಾಡಿದರು. ನಮ್ಮ ದೇಶ ಕಂಡ ಅಪ್ರತಿಮ ಮಹಾನ್ ಧೀಮಂತ ವ್ಯಕ್ತಿಯಾಗಿರುವ ಅಂಬೇಡ್ಕರ್ ಅವರು ನಮಗೆ ಸಂವಿಧಾನವನ್ನು ರಚಿಸಿಕೊಟ್ಟ, ಸರಳ ಮತ್ತು ಸಜ್ಜನಿಕೆಯ ವ್ಯಕಿತ್ವದವರಾಗಿದ್ದರು ಎಂದು ಬಣ್ಣಿಸಿದರು. ಅಂಬೇಡ್ಕರ್ ಅವರು ಸುಮಾರು 32 ಪದವಿಗಳನ್ನು ಅಧ್ಯಯನ ಮಾಡಿದ್ದಾರೆ. ನಮ್ಮ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಬಗ್ಗೆ ಎಷ್ಟೇ ಮಾತನಾಡಿದರೂ ಅದು ಕಡಿಮೆ ಎನಿಸುತ್ತದೆ ಅವರ ಸಾಧನೆ ಒಂದು ಜನಾಂಗಕ್ಕೆ ಮಾತ್ರ ಸೀಮಿತ ಅಲ್ಲ, ಸರ್ವರಿಗೂ ಸಲ್ಲುವಂತದ್ದಾಗಿದೆ, ಇಡೀ ಜಗತ್ತು ತಿರುಗಿ ನೋಡುವಂತೆ ಮಾಡಿದ ಸಾಧಕರಾಗಿದ್ದಾರೆ ಎಂದರು.
ಹೆಮ್ಮೆಯ ಕ್ಷಣ: ಜಿಲ್ಲಾ ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಡಾ.ಕೆ.ಎನ್.ಅನುರಾಧಾ ಅವರು ಡಾ.ಬಿ.ಅರ್.ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ಮಾತನಾಡಿದರು. ಬಾಬಾ ಸಾಹೇಬ್ ಅವರು ಮಾಡಿರುವ ಸಾಧನೆ ಅಗಾಧ. ಅವರು ನಡೆದ ದಾರಿಯಲ್ಲಿ ಇಂದಿನ ಯುವ ಜನಾಂಗವು ಸಾಗಬೇಕು, ಅಂಬೇಡ್ಕರ್ ಅವರ ರೀತಿಯಲ್ಲಿ ಯುವ ಜನಾಂಗದವರು ಶಿಕ್ಷಣಕ್ಕೆ ಆದ್ಯತೆಯನ್ನು ನೀಡುವುದರಿಂದ ದೇಶದಲ್ಲಿ ಇನ್ನೂ ಮಹತ್ತರವಾದ ಬದಲಾವಣೆಯನ್ನು ಕಾಣಬಹುದು. ಇಂದು ನಾವು ಅವರ 134ನೇ ಜನ್ಮ ದಿನಾಚರಣೆ ಮಾಡುತ್ತಿರುವುದು ನಮ್ಮ ಹೆಮ್ಮೆಯ ಕ್ಷಣವಾಗಿದೆ ಎಂದರು