

ವಿಜಯವಾಣಿ ಸುದ್ದಿಜಾಲ ಬೆಂಗಳೂರು ಗ್ರಾಮಾಂತರ
ಅಂಬೇಡ್ಕರ್ ಅವರ ತತ್ವಾದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಸಂವಿಧಾನದ ಆಶಯದೊಂದಿಗೆ ನಾವೆಲ್ಲರೂ ಮುಂದೆ ಸಾಗೋಣ ಎಂದು ಗ್ರಾಮಾಂತರ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಚ್. ಮುನಿಯಪ್ಪ ಹೇಳಿದರು.
ತಾಲೂಕು ಆಡಳಿತ, ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಡಾ.ಬಿ.ಆರ್.ಅಂಬೇಡ್ಕರ್ 134 ನೇ ಜಯಂತಿ ಹಾಗೂ ಡಾ.ಬಾಬು ಜಗಜೀವನರಾಮ್ ಜಯಂತಿ ಅಂಗವಾಗಿ ಮಹನೀಯರ ಭಾವಚಿತ್ರಗಳಿಗೆ ಪುಷ್ಪ ನಮನ ಸಲ್ಲಿಸಿ ಮಾತನಾಡಿದರು. ದೇಶದಲ್ಲಿ ಎಲ್ಲರಿಗೂ ಸಮಾನ ಅವಕಾಶ ಕಲ್ಪಿಸಿ ಕೊಟ್ಟಿರುವುದು ಭಾರತದ ಸಂವಿಧಾನ, ಅಂತಹ ಸಂವಿಧಾನ ಕೊಟ್ಟಿರುವುದು ಭಾರತ ರತ್ನ ಡಾ.ಬಿ.ಆರ್.ಅಂಬೇಡ್ಕರ್ ಆಗಿದ್ದಾರೆ ಎಂದರು. ಶೋಷಿತರಿಗೆ, ಹಿಂದುಳಿದವರಿಗೆ ಎಲ್ಲರಿಗೂ ಸಮಾನ ಅವಕಾಶ ಕಲ್ಪಿಸಿಕೊಡಬೇಕು. ಸರ್ವರು ಸ್ವಂತಂತ್ರರರು, ಸರ್ವರು ಸಮಾನರು, ಸರ್ವರಿಗೂ ಸಮಾನ ನ್ಯಾಯ, ಎಲ್ಲರಿಗೂ ಸಮಾನ ಅವಕಾಶ ಸಿಗುವಂತಾಗಬೇಕು ಎಂಬ ತತ್ವದಡಿ ಸಂವಿಧಾನ ರೂಪಿಸಿದರು ಎಂದರು. ಸಂವಿಧಾನದಿಂದ ಕೇವಲ ಒಂದು ಜಾತಿ, ಸಮುದಾಯ, ವರ್ಗಕ್ಕೆ ಸೀಮಿತವಾಗಿಲ್ಲ, ಭಾರತದ ಕಟ್ಟ ಕಡೆಯ ಪ್ರಜೆಗೂ ಸಮಾನ ಅವಕಾಶ ನೀಡಲಾಗಿದೆ. ಗುಣಮಟ್ಟದ ಶಿಕ್ಷಣ ಹಾಗೂ ಜ್ಞಾನ ವೃದ್ಧಿಯಿಂದ ಎಲ್ಲರಿಗೂ ಸಮಾನ ಅವಕಾಶ ಸಿಗುತ್ತದೆ ಎಂಬುದು ನನ್ನ ಭಾವನೆ ಎಂದರು. ರಾಜ್ಯಾದ್ಯಾಂತ ಹೋಬಳಿವಾರು ವಸತಿ ಶಾಲೆ ಸ್ಥಾಪಿಸಲು 2014 ರ ಸಿದ್ದರಾಮಯ್ಯ ಮುಖ್ಯಮಂತ್ರಿ ಅವಧಿಯಲ್ಲಿ ವರದಿ ನೀಡಲಾಗಿತ್ತು, ಈಗ ವಸತಿ ಶಾಲೆಗಳು ಬಂದು ಬಡವರ ಹಿಂದುಳಿದ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣಕ್ಕೆ ಸಹಕಾರಿಯಾಗಿದೆ ಮುಂದೆ ಪಂಚಾಯಿತಿ ವಾರು ವಸತಿ ಶಾಲೆ ನಿರ್ಮಿಸಲಾಗುವುದು ಎಂದರು. ಅಂಬೇಡ್ಕರ್ ಮತ್ತು ಡಾ. ಬಾಬು ಜಗಜೀವನ್ ರಾಮ್ ಇಬ್ಬರೂ ಸಾಕಷ್ಟು ಹೋರಾಟಗಳನ್ನು ನಡೆಸಿ, ಹಲವು ಸಮಸ್ಯೆಗಳನ್ನು ಎದುರಿಸಿ ದೇಶಕ್ಕೆ ಉತ್ತಮ ಸೇವೆ ಸಲ್ಲಿಸಿದ ಮಹಾನ್ ವ್ಯಕ್ತಿಗಳಾಗಿದ್ದಾರೆ ಎಂದರು.
ಹೆಮ್ಮೆಯ ವಿಷಯ: ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರ ಸಂಸದ ಡಾ.ಕೆ ಸುಧಾಕರ್ ಮಾತನಾಡಿ ಪ್ರಪಂಚದಾದ್ಯಂತ ವಿಶ್ವದ ಜ್ಞಾನ ದಿನ ಎಂದು ಅಂಬೇಡ್ಕರ್ ಜಯಂತಿ ಆಚರಿಸಲಾಗುತ್ತದೆ. ಇದು ನಮ್ಮೆಲ್ಲರಿಗೂ ಹೆಮ್ಮೆಯ ವಿಚಾರ ಎಂದರು. ಇವತ್ತು ಇಬ್ಬರು ಮಹಾನ್ ನಾಯಕರ ಜನ್ಮದಿನದ ಜತೆಗೆ ಸಾಮಾಜಿಕ ನ್ಯಾಯ, ಪ್ರಜಾಪ್ರಭುತ್ವ, ಜ್ಞಾನ ಇವುಗಳ ತತ್ವಗಳನ್ನು ಆಚರಣೆ ಮಾಡುವ ದಿನವಾಗಿದೆ ಎಂದರು. ಅಂಬೇಡ್ಕರ್ ಜೀವನವು ಬಹಳಷ್ಟು ಕಠಿಣವಾಗಿತ್ತು ಜಾತಿ ಪದ್ಧತಿ, ಶೋಷಣೆ, ನೋವು ಇವೆಲ್ಲವನ್ನೂ ಸಹಿಸಿಕೊಂಡು ದೇಶಕ್ಕೆ ಉತ್ತಮ ಸಂವಿಧಾನ ರಚಿಸಿದರು. ಲಂಡನ್ ಸ್ಕೂಲ್ ಆ್ ಎಕನಾಮಿಕ್ಸ್, ಕೊಲಂಬಿಯಾ ಯೂನಿವರ್ಸಿಟಿಯಲ್ಲಿ ಪಿಎಚ್‌ಡಿ ಪಡೆದ ಮೊದಲ ಭಾರತೀಯರಾಗಿದ್ದಾರೆ, ಹಾಗೆಯೇ ದೇಶದ ಮಾಜಿ ಉಪ ಪ್ರಧಾನ ಮಂತ್ರಿ ಬಾಬು ಜಗಜೀವನರಾಮ್ ಅವರು ಹಸಿರು ಕ್ರಾಂತಿಯ ಹರಿಕಾರ ಎಂದರು. ಈ ದೇಶದ ಪ್ರಧಾನಿ ಆಗಲು ಅವಕಾಶ ಹಾಗೂ ಅರ್ಹತೆ ಇದ್ದರೂ ಅದೃಷ್ಟ ಇರಲಿಲ್ಲ. ಶೋಷಿತರಿಗೆ ಅಲ್ಲ ಮೇಲ್ಪಂಕ್ತಿಗಳಿಗೂ ಸಮಾನ ಅವಕಾಶ, ಸೌಲಭ್ಯ ಸಿಗುವಂತಾಗಬೇಕು ಎಂಬ ಆಲೋಚನೆ ಹೊಂದಿದ್ದರು. ಇವರಿಬ್ಬರ ಜೀವನಶೈಲಿ, ತತ್ವಾದರ್ಶಗಳನ್ನು ಜೀವನದಲ್ಲಿ ನಾವೆಲ್ಲರೂ ಅಳವಡಿಸಿಕೊಳ್ಳಬೇಕು ಎಂದರು.