ಅಂಬೇಡ್ಕರ್ ಆಶಯ ಸಾಕಾರಗೊಳಿಸಿ ; ಜಿಲ್ಲಾ ಉಸ್ತುವಾರಿ ಸಚಿವ ಡಾ ಕೆ.ಸುಧಾಕರ್ ಅಭಿಪ್ರಾಯ

CBP 1
Published on

ಚಿಕ್ಕಬಳ್ಳಾಪುರ : ಅಂಬೇಡ್ಕರ್ ಆಶಯಗಳನ್ನು ಈಡೇರಿಸುವ ಜವಾಬ್ದಾರಿ ಪ್ರತಿಯೊಬ್ಬ ಪ್ರಜೆಯ ಮೇಲಿದೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ, ಜಿಲ್ಲಾ ಉಸ್ತುವಾರಿ ಸಚಿವ ಡಾ ಕೆ.ಸುಧಾಕರ್ ಅಭಿಪ್ರಾಯಪಟ್ಟರು.

ಜಿಲ್ಲಾಡಳಿತ ಭವನದಲ್ಲಿನ ಸಭಾಂಗಣದಲ್ಲಿ ಬುಧವಾರ ಆಯೋಜಿಸಿದ್ದ ಅಂಬೇಡ್ಕರ್ ಮತ್ತು ಬಾಬು ಜಗಜೀವನರಾಮ್ ಜಯಂತಿಯಲ್ಲಿ ಮಾತನಾಡಿ, ಅಂಬೇಡ್ಕರ್ ಅವರಿಗಿದ್ದ ಪ್ರತಿಭೆಗೆ ವಿದೇಶಗಳಿಗೆ ತೆರಳಿ ವೈಭವದ ಜೀವನ ನಡೆಸಬಹುದಾಗಿತ್ತು. ಆದರೆ, ಅವರು ದೇಶದ ಒಳಿತಿಗಷ್ಟೇ ಸೀಮಿತವಾದರು.

ಸ್ವಾತಂತ್ರ್ಯ ಬಂದು ಹಲವು ವರ್ಷ ಕಳೆದಿದ್ದರೂ ಪರಿಪೂರ್ಣವಾದ ಸಮಾನತೆಯ ವಾತಾವರಣ ನಿರ್ಮಾಣವಾಗಿಲ್ಲ. ಈಗಲೂ ಗ್ರಾಮೀಣ ಭಾಗದಲ್ಲಿ ಬಲಹೀನ ವರ್ಗಗಳು ಶೋಷಣೆ ಮತ್ತು ಮೂಲ ಸೌಕರ್ಯಗಳ ಕೊರತೆಯಿಂದ ತೊಂದರೆ ಅನುಭವಿಸುತ್ತಿವೆ. ಇದಕ್ಕೆ ಕೇಂದ್ರ ಸರ್ಕಾರವು ಉಚಿತ ವಸತಿ, ನೀರಿನ ವ್ಯವಸ್ಥೆ ಸೇರಿ ಹಲವು ಸೌಲಭ್ಯ ಒದಗಿಸುವ ಮೂಲಕ ಅಂಬೇಡ್ಕರ್ ಆಶಯಗಳನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ ಶ್ರಮಿಸುತ್ತಿದೆ ಎಂದರು.

ಜಿಪಂ ಅಧ್ಯಕ್ಷ ಎಂ.ಬಿ.ಚಿಕ್ಕನರಸಿಂಹಯ್ಯ ಮಾತನಾಡಿ, ಸಂವಿಧಾನವನ್ನು ದೇಶಕ್ಕೆ ಕೊಡುಗೆ ನೀಡಿದ ಅಂಬೇಡ್ಕರ್ ಪ್ರತಿಯೊಂದು ವಿಚಾರದ ಬಗ್ಗೆಯೂ ಆಳವಾಗಿ ಅಧ್ಯಯನ ನಡೆಸಿದ್ದಾರೆ. ಇದಕ್ಕೆ ಒಳ್ಳೆಯ ಅರ್ಥಶಾಸ್ತ್ರಜ್ಞ, ರಾಜಕಾರಣಿ, ಸಮಾಜ ಸುಧಾರಕ, ಮಾನವತಾವಾದಿ, ಲೇಖಕ, ಸಾಮಾಜಿಕ ವಿಜ್ಞಾನಿ, ಶಿಕ್ಷಣ ತಜ್ಞ, ಸ್ವಾತಂತ್ರ್ಯ ಹೋರಾಟಗಾರ, ಪತ್ರಕರ್ತ, ಮಾನವ ಹಕ್ಕುಗಳ ಕಾರ್ಯಕರ್ತ, ತತ್ವಜ್ಞಾನಿ ಎನಿಸಿಕೊಂಡಿದ್ದಾರೆ ಎಂದು ಬಣ್ಣಿಸಿದರು.

ಅಂಬೇಡ್ಕರ್ ಅಭಿವೃದ್ಧಿ ನಿಗಮದಿಂದ ಪರಿಶಿಷ್ಟ ಜಾತಿ ಫಲಾನುಭವಿಗಳಿಗೆ ವಾಹನ ವಿತರಿಸಲಾಯಿತು. ಜಿಲ್ಲಾಧಿಕಾರಿ ಆರ್.ಲತಾ , ಜಿಪಂ ಸ್ಥಾಯಿ ಸಮಿತಿ ಅಧ್ಯಕ್ಷ ಕೆ.ಸಿ.ರಾಜಾಕಾಂತ್, ರಾಜ್ಯ ಮಾವು ಮತ್ತು ಮಾರುಕಟ್ಟೆ ಅಭಿವೃದ್ಧಿ ನಿಗಮದ ಅಧ್ಯಕ್ಷ ಕೆ.ವಿ.ನಾಗರಾಜ್, ತಾಪಂ ಅಧ್ಯಕ್ಷ ಬಿ.ಎಂ.ರಾಮಸ್ವಾಮಿ, ಸಿಇಒ ಪಿ.ಶಿವಶಂಕರ್, ಎಸ್ಪಿ ಜಿ.ಕೆ.ಮಿಥುನ್ ಕುಮಾರ್, ಉಪ ವಿಭಾಗಾಧಿಕಾರಿ ಎ.ಎನ್.ರಘುನಂದನ್ ಮತ್ತಿತರರು ಇದ್ದರು.

ಸಂಘಟನೆಗಳಿಂದ ಮಾಲಾರ್ಪಣೆ: ದಲಿತ ಪರ ವಿವಿಧ ಸಂಘಟನೆಗಳ ಮುಖಂಡರು ಜೈ ಭೀಮ್ ವಸತಿ ನಿಲಯ ಆವರಣ ಮತ್ತು ಚಾಮರಾಜಪೇಟೆಯಲ್ಲಿರುವ ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಿದರು. ಮುಖಂಡರಾದ ಸು.ಧಾ.ವೆಂಕಟೇಶ್, ಬಿ.ವಿ.ಆನಂದ್, ತಿಪ್ಪೇನಹಳ್ಳಿ ನಾರಾಯಣಸ್ವಾಮಿ, ವೇಣು, ಬಿ.ಎನ್.ಗಂಗಾಧರ್, ವೆಂಕಟರಮಣಪ್ಪ, ನಾರಾಯಣಸ್ವಾಮಿ ಇದ್ದರು.

ಕಾಮಗಾರಿಗೆ ಚಾಲನೆ : ನಗರದ ಅಂಬೇಡ್ಕರ್ ಕಾಲನಿ ಮತ್ತು ಬಾಪೂಜಿನಗರದಲ್ಲಿ ನಿರ್ಮಿಸಿರುವ ಸಮುದಾಯ ಶೌಚಗೃಹಕ್ಕೆ ಸಚಿವರು ಚಾಲನೆ ನೀಡಿದರು. ಅಂಬೇಡ್ಕರ್ ಕಾಲನಿಯಲ್ಲಿ ನಗರೋತ್ಥಾನ 3 ನೇ ಹಂತದ ಯೋಜನೆಯ 50 ಲಕ್ಷ ರೂ ವೆಚ್ಚದ ಅನುದಾನದಲ್ಲಿ ಸಿಸಿ ರಸ್ತೆ ಮತ್ತು ಚರಂಡಿ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಲಾಯಿತು. ನಗರಸಭಾ ಅಧ್ಯಕ್ಷ ಡಿ.ಎಸ್.ಆನಂದ್ ರೆಡ್ಡಿ, ಪೌರಾಯುಕ್ತ ಡಿ.ಲೋಹಿತ್, ಮುಖಂಡರಾದ ಕೆ.ವಿ.ನವೀನ್ ಕಿರಣ್, ಮಿಲ್ಟನ್ ವೆಂಕಟೇಶ್ ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net