ಅಂಬೇಡ್ಕರ್ ಜನ್ಮದಿನ ಸರಳ ಆಚರಣೆ

14Tmk_Ambedkar_Jayanthi
Published on

ತುಮಕೂರು: ಸಂವಿಧಾನ ಶಿಲ್ಪಿ, ಭಾರತ ರತ್ನ ಡಾ.ಬಿ.ಆರ್.ಅಂಬೇಡ್ಕರ್ ಅವರ 129ನೇ ಜಯಂತಿಯನ್ನು ಜಿಲ್ಲಾಡಳಿತದ ವತಿಯಿಂದ ಸರಳವಾಗಿ ಆಚರಿಸಲಾಯಿತು.

ಲಾಕ್‌ಡೌನ್ ಹಿನ್ನೆಲೆಯಲ್ಲಿ ಮಂಗಳವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಶಾಸಕ ಜಿ.ಬಿ. ಜ್ಯೋತಿಗಣೇಶ್ ಹಾಗೂ ಜಿಲ್ಲಾಧಿಕಾರಿ ಡಾ.ಕೆ. ರಾಕೇಶ್ ಕುಮಾರ್ ಪುಷ್ಟಾರ್ಚನೆ ಮಾಡಿ ಗೌರವ ಸಲ್ಲಿಸಿದರು.

ಜಿಪಂ ಸದಸ್ಯ ವೈ.ಎಚ್. ಹುಚ್ಚಯ್ಯ, ಜಿಪಂ ಸಿಇಒ ಶುಭ ಕಲ್ಯಾಣ್ , ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಕೆ.ವಂಶಿಕೃಷ್ಣ, ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕ ಪ್ರೇಮನಾಥ್, ನಿರ್ಮಿತಿ ಕೇಂದ್ರದ ಡಿ.ರಾಜಶೇಖರ್ ಸೇರಿದಂತೆ ವಿವಿಧ ಸಂಘಟನೆಗಳ ಮುಖಂಡರು ಉಪಸ್ಥಿತರಿದ್ದರು.

ಜಿಪಂನಲ್ಲೂ ಸರಳ ಆಚರಣೆ: ಜಿಲ್ಲಾ ಪಂಚಾಯಿತಿ ಕಚೇರಿಯಲ್ಲಿ ಡಾ.ಬಿ.ಆರ್ ಅಂಬೇಡ್ಕರ್ ಅವರ ಜನ್ಮದಿನವನ್ನು ಸರಳವಾಗಿ ಆಚರಿಸಲಾಯಿತು. ಜಿಪಂ ಉಪಾಧ್ಯಕ್ಷೆ ಶಾರದಾ, ಸಿಇಒ ಶುಭಾ ಕಲ್ಯಾಣ್, ಅಭಿವೃದ್ಧಿ ಉಪಕಾರ್ಯದರ್ಶಿ ರಮೇಶ್, ಆಡಳಿತ ಉಪಕಾರ್ಯದರ್ಶಿ ಕೃಷ್ಣಮೂರ್ತಿ ಇತರರಿದ್ದರು.

ದೊಮ್ಮನಕುಪ್ಪೆಯಲ್ಲಿ ಜಯಂತಿ: ತಾಲೂಕಿನ ದೊಮ್ಮನಕುಪ್ಪೆ ದಲಿತ ಕಾಲನಿಯಲ್ಲಿ ಅಂಬೇಡ್ಕರ್ ಯುವಕ ಸಂಘದಿಂದ ಡಾ.ಬಾಬಾ ಸಾಹೇಬರ ಜನ್ಮದಿನ ಆಚರಿಸಲಾಯಿತು. ಅಂಬೇಡ್ಕರ್ ಅವರ ಸಂಘಟನಾ ಶಕ್ತಿಯನ್ನು ನಾವೆಲ್ಲ ಬೆಳೆಸಿಕೊಳ್ಳಬೇಕು. ಅವರಲಿದ್ದ ಸಾಮಾಜಿಕ ಕಳಕಳಿ, ಶಿಕ್ಷಣ ಸಮಾನತೆ, ಸಮಪಾಲು-ಸಮಬಾಳು ಮತ್ತಿತರ ಧ್ಯೇಯೋದ್ದೇಶಗಳಿಂದ ನಾವಿಂದು ನೆಮ್ಮದಿಯಿಂದ ಬದುಕುತ್ತಿದ್ದೇವೆ ಎಂದು ಜಾನಪದ ಕಲಾವಿದ ಡಿ.ಸಿ ಕುಮಾರ್ ತಿಳಿಸಿದರು. ಅಂಬೇಡ್ಕರ್ ಯುವಕ ಸಂಘದ ಪದಾಧಿಕಾರಿಗಳು, ಗ್ರಾಮಸ್ಥರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net