ಮಹಿಳಾ ಸಬಲೀಕರಣಕ್ಕೆ ಅಂಬೇಡ್ಕರ್ ಅಡಿಪಾಯ: ಕೆ.ಜೆ.ಜಯಲಕ್ಷ್ಮಿನಾಯಕ

Published on

ಮೈಸೂರು: ಮಹಿಳೆಯರನ್ನು ಸಮಾಜದ ಮುಖ್ಯ ಭೂಮಿಕೆಗೆ ತಂದು ಸಮಾನತೆ, ಸ್ವಾತಂತ್ರ್ಯವನ್ನು ಪಡೆದುಕೊಳ್ಳಲು ಅಡಿಪಾಯ ಹಾಕಿಕೊಟ್ಟರು ಡಾ.ಬಿ.ಆರ್.ಅಂಬೇಡ್ಕರ್ ಎಂದು ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯೆ ಕೆ.ಜೆ.ಜಯಲಕ್ಷ್ಮಿನಾಯಕ ಹೇಳಿದರು.

ಕರ್ನಾಟಕ ರಾಜ್ಯ ಭಿಕ್ಕು ಸಂಘದಿಂದ ನಗರದ ಮಹಾರಾಜ ಕಾಲೇಜು ಮೈದಾನದಲ್ಲಿ ನಡೆಯುತ್ತಿರುವ ಬೌದ್ಧ ಮಹಾ ಸಮ್ಮೇಳನದ ಅಂಗವಾಗಿ ಆಯೋಜಿಸಿದ್ದ ಗೋಷ್ಠಿಯಲ್ಲಿ ಧರ್ಮ ಮತ್ತು ಅಂಬೇಡ್ಕರ್ ಅವರ ದೃಷ್ಠಿಯಲ್ಲಿ ಮಹಿಳಾ ಆರ್ಥಿಕ ಸಬಲೀಕರಣ ವಿಷಯವಾಗಿ ಅವರು ಮಾತನಾಡಿದರು.

ಮತದಾನದ ಹಕ್ಕು ಕಸಿದುಕೊಂಡು ಮಹಿಳೆಯನ್ನು ಮೂಲೆಗುಂಪು ಮಾಡುವ ಸಂದರ್ಭದಲ್ಲಿ ಅಂಬೇಡ್ಕರ್ ಅವರು ಗಟ್ಟಿ ಧ್ವನಿ ಎತ್ತಿ ಮಹಿಳೆಯರಿಗೆ ಸಾಮಾಜಿಕ ಸಮಾನತೆ ತಂದುಕೊಟ್ಟಿದ್ದಾರೆ. ಸಂವಿಧಾನದಿಂದ ಮಹಿಳೆಯರಿಗೆ ವಿಶೇಷ ಸ್ಥಾನಮಾನ ದೊರಕುವಂತೆ ಮಾಡಿದ್ದಾರೆ ಎಂದರು.

ಅಂಬೇಡ್ಕರ್ ಈ ದೇಶದಲ್ಲಿ ಹುಟ್ಟದೇ ಇದ್ದಿದ್ದರೆ, ಮಹಿಳೆಯರು ಪ್ರಾಣಿಗಿಂತ ನಿಕೃಷ್ಟವಾಗಿ ಬದುಕುವ ಸ್ಥಿತಿ ಎದುರಾಗುತಿತ್ತು. ಇಂದು ಸಂವಿಧಾನದ ಸವಲತ್ತು ಪಡೆದುಕೊಳ್ಳಲು ಚಳವಳಿಗಳು ತಳಹದಿಗಳಾಗಿವೆ. ಸಂವಿಧಾನಿಕ ಹಕ್ಕುಗಳನ್ನು ಪಡೆದು ಬದುಕುತ್ತಿರುವ ಹಲವು ಮಹಿಳೆಯರಿಗೆ ಅಂಬೇಡ್ಕರ್ ಅವರ ಕೊಡುಗೆ ಬಗ್ಗೆ ತಿಳಿದೇ ಇಲ್ಲ. ಅವರನ್ನು ಎಚ್ಚರಿಸುವ ಕೆಲಸವಾಗಬೇಕಿದೆ ಎಂದರು.

ವಿಜಯನಗರ ಸಾಮ್ರಾಜ್ಯವನ್ನು ಹಿಂದು ಸುವರ್ಣ ಕಾಲ ಎಂದೂ, ಶ್ರೀಕೃಷ್ಣದೇವರಾಯನನ್ನು ಹಿಂದು ದೊರೆ ಎಂದೂ ಬಿಂಬಿಸಲಾಗುತ್ತಿದೆ. ಆದರೆ ಕೃಷ್ಣದೇವರಾಯ ಒಬ್ಬ ಬುಡಕಟ್ಟು ಸಮುದಾಯಕ್ಕೆ ಸೇರಿದ ದೊರೆ. ಬುಡಕಟ್ಟು ಸಮುದಾಯಕ್ಕೆ ಹಿಂದು ಎಂಬ ಪರಿಕಲ್ಪನೆಯೇ ಇಲ್ಲ ಎಂದರು.

ಹೋರಾಟಗಾರ ಮೋಹನ್‌ರಾಜ್ ಮಾತನಾಡಿ, ದಲಿತರು ಬದುಕುವ ಹಕ್ಕನ್ನು ಸಂವಿಧಾನದಿಂದ ಪಡೆದು ಕೊಂಡಿದ್ದೇವೆ. ಇಂದು ಅಂಬೇಡ್ಕರ್ ಅವರ ಅನುಯಾಯಿಗಳು, ದಲಿತರು, ಯುವಕರು, ಭಾರತವನ್ನು ಹಿಂದು ದೇಶವನ್ನಾಗಿಸುವ ಗುರಿ ಹೊಂದಿರುವ ಆರ್‌ಎಸ್‌ಎಸ್ ಸಂಘಟನೆಯಲ್ಲಿ ತೊಡಗಿಸಿಕೊಂಡಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು. ಕಲಬುರ್ಗಿ ಭೂಮಿ ಬುದ್ಧವಿಹಾರದ ಭಂತೆ ಅಮರಜ್ಯೋತಿ, ದಸಂಸ ಹಿರಿಯ ಹೋರಾಟಗಾರ ಬೆಟ್ಟಯ್ಯ ಕೋಟೆ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net