ಅಂಬೇಡ್ಕರ್ ದೇಶದ ಆಂತರಿಕ ವಿಮರ್ಶಕ ; ಮೈಸೂರು ವಿವಿ ಪ್ರಾಧ್ಯಾಪಕ ಪ್ರೊ. ಮುಜಾಫರ್ ಅಸಾದಿ ಬಣ್ಣನೆ

06Tmk_Ambedkar_ParinirvanDina
Published on

ತುಮಕೂರು: ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರು ಭಾರತದ ಮಟ್ಟಿಗೆ ಒಬ್ಬ ಆಂತರಿಕ ವಿಮರ್ಶಕ ಆಗಿದ್ದರು. ಧರ್ಮ ಎಂಬುದು ಅವರಿಗೆ ರಾಜಕೀಯ ಅಸ್ತ್ರವಾಗಿರಲಿಲ್ಲ ಎಂದು ಮೈಸೂರು ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಪ್ರೊ. ಮುಜಾಫರ್ ಅಸಾದಿ ಹೇಳಿದರು.

ತುಮಕೂರು ವಿಶ್ವವಿದ್ಯಾಲಯದ ಅಂಬೇಡ್ಕರ್ ಅಧ್ಯಯನ ಕೇಂದ್ರ ಅಂಬೇಡ್ಕರ್ ಅವರ 64ನೇ ಮಹಾ ಪರಿನಿರ್ವಾಣದ ಅಂಗವಾಗಿ ಭಾನುವಾರ ಆಯೋಜಿಸಿದ್ದ ವೆಬಿನಾರ್ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಧರ್ಮ ಎಂಬುದು ಅಂಬೇಡ್ಕರ್‌ಗೆ ಆಂತರಿಕ ವಿಮರ್ಶೆಯ ವಿಷಯವಾಗಿತ್ತು. ಹಾಗಾಗಿ ಅವರು ಈ ವಿಷಯವನ್ನು ಚರ್ಚೆಗೆ ಒಳಪಡಿಸುವುದಕ್ಕಾಗಿ ಒಂದು ವಿಮರ್ಶಾ ಸಮಾಜದ ನಿರ್ಮಾಣಕ್ಕೆ ಮುಂದಾದರು ಎಂದರು.

ಧರ್ಮವನ್ನು ಅಂಬೇಡ್ಕರ್ ಅವರು ಸಾಮಾಜಿಕ ಸಮಸ್ಯೆಯ ವಿಷಯವನ್ನಾಗಿ ನೋಡಿದ್ದಾರೆ. ಭಾರತದಲ್ಲಿನ ಜಾತಿ ವ್ಯವಸ್ಥೆ ಹಾಗೂ ಶಾಸ್ತ್ರೀಯ ಗ್ರಂಥಗಳನ್ನು ವಿಮರ್ಶಾತ್ಮಕ ದೃಷ್ಟಿಕೋನದಲ್ಲಿ ವಿಶ್ಲೇಷಿಸಿದ್ದಾರೆ. ಆದರೆ, ಅಂಬೇಡ್ಕರ್ ಅವರಿಗೆ ಸಿಗಬೇಕಾದ ಸ್ಥಾನ ಾನ 70ರ ದಶಕದವರೆಗೂ ಸಿಗಲಿಲ್ಲ. ಇದಕ್ಕೆ ರಾಜಕೀಯ ಕಾರಣಗಳೂ ಇರಬಹುದು ಎಂದು ವಿಷಾದಿಸಿದರು.

ಅಂಬೇಡ್ಕರ್ ಪುತ್ಥಳಿಗೆ ಪುಷ್ಪಾರ್ಚನೆ ಮಾಡುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿದ ವಿವಿ ಕುಲಪತಿ ಪ್ರೊ. ವೈ.ಎಸ್.ಸಿದ್ದೇಗೌಡ ಮಾತನಾಡಿ, ಅಂಬೇಡ್ಕರ್ ಅವರು ತಂದಂತಹ ಸುಧಾರಣೆಗಳಿಂದ ಭಾರತದಲ್ಲಿ ಗುರುತರವಾದ ಬದಲಾವಣೆಯಾಗಿದೆ ಎಂದರು.

ಈಗ ಮಂಚೂಣಿಗೆ ಬಂದಿರುವ ನದಿಗಳ ಜೋಡಣೆಯ ವಿಷಯದ ಬಗ್ಗೆ ಅಂಬೇಡ್ಕರ್ ಅವರು 1952ರಲ್ಲಿಯೇ ಮಾತನಾಡಿದ್ದಾರೆ. ಭಾಕ್ರಾನಂಗಲ್ ಯೋಜನೆಗೆ ಬುನಾದಿ ಹಾಕಿದ್ದಾರೆ. ಮಹಿಳಾ ಪರವಾದ ಹಕ್ಕುಗಳನ್ನು ಸಂವಿಧಾನದಲ್ಲಿ ಸೇರಿಸುವಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ. ಅಂಬೇಡ್ಕರ್ ಅವರ ತತ್ವಗಳು ಜೀವನಕ್ರಮಗಳನ್ನು ಅನುಸರಿಸಿದರೆ ಸುಖಿರಾಜ್ಯ ನಿರ್ಮಾಣವಾಗುವುದರಲ್ಲಿ ಯಾವುದೇ ಸಂಶಯವಿಲ್ಲ ಎಂದು ಅಭಿಪ್ರಾಯಪಟ್ಟರು.

ವಿವಿ ಕುಲಸಚಿವ ನರಸಿಂಹಪ್ಪ, ಅಂಬೇಡ್ಕರ್ ಅಧ್ಯಯನ ಕೇಂದ್ರದ ನಿರ್ದೇಶಕ ಡಾ. ಜಿ. ಬಸವರಾಜ, ಕಲಾ ಕಾಲೇಜಿನ ಪ್ರಾಶುಂಪಾಲ ಕೆ. ರಾಮಚಂದ್ರಪ್ಪ ಮತ್ತಿರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net