

ಬಂಗಾರಪೇಟೆ : ಡಾ.ಬಿ.ಆರ್. ಅಂಬೇಡ್ಕರ್ ಕುರಿತಾಗಿ ಕೇಂದ್ರ ಗೃಹಮಂತ್ರಿ ಅಮಿತ್ ಷಾ ನೀಡಿರುವ ಹೇಳಿಕೆ ಖಂಡಿಸಿ ಬ್ಲಾಕ್ ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಮುಖಂಡರು ಶಾಸಕ ಎಸ್.ಎನ್.ನಾರಾಯಣಸ್ವಾಮಿ ನೇತೃತ್ವದಲ್ಲಿ ಪಟ್ಟಣದ ಅಂಬೇಡ್ಕರ್ ಪ್ರತಿಮೆ ಎದುರು ಪ್ರತಿಭಟನೆ ನಡೆಸಿ, ಪ್ರತಿಕೃತಿ ದಹನ ಮಾಡಿ ಆಕ್ರೋಶ ವ್ಯಕ್ತಪಡಿಸಿದರು.
ಶಾಸಕ ಎಸ್.ಎನ್ ನಾರಾಯಣಸ್ವಾಮಿ ಮಾತನಾಡಿ, ವಿಶ್ವದಲ್ಲಿಯೇ ಶ್ರೇಷ್ಠವಾದ ಸಂವಿಧಾನ ರಚಿಸಿದ ಅಂಬೇಡ್ಕರ್ ಬಗ್ಗೆ ನಮಗೆ ಅಪಾರ ಅಭಿಮಾನ ಮತ್ತು ಗೌರವ ಇದೆ. ಅಂಬೇಡ್ಕರ್ ಹೆಸರು ನಮಗೆ ವ್ಯಸನ ಅಲ್ಲ, ನಿತ್ಯ ಸ್ಮರಣೆ. ನಮ್ಮ ಉಸಿರು ಇರುವವರೆಗೂ ಹಾಗೂ ಈ ಭೂಮಿಯಲ್ಲಿ ಸೂರ್ಯ& ಚಂದ್ರ ಇರುವವರೆಗೂ ಅಂಬೇಡ್ಕರ್ ಸ್ಮರಣೆ ಮಾಡುತ್ತೇವೆ ಎಂದರು.
ಅಮಿತ್ ಷಾ ಅವರು ಮಾನಸಿಕ ಅಸ್ವಸ್ಥರಾದಂತೆ ಕಾಣುತ್ತಿದೆ. ಅವರ ಮಾತು ಮತ್ತು ವರ್ತನೆ ಸಂಪೂರ್ಣ ದುರಹಂಕಾರದಿಂದ ಕೂಡಿದ್ದು, ಅವರಿಗೆ ಅಧಿಕಾರದ ಮದವೇರಿದೆ. ಅಮಿತ್ ಷಾ ಅವರೇ, ದೇವರ ನಾಮ ಜಪಿಸುವುದರಿಂದ ಯಾರಿಗೂ ಏಳು ಜನ್ಮದಲ್ಲಿ ಸ್ವರ್ಗ ಪ್ರಾಪ್ತಿಯಾಗುವುದಿಲ್ಲ ಎಂದು ನಮಗೆ ತಿಳಿದಿದೆ. ಆದರೆ, ಅಂಬೇಡ್ಕರ್ರ ಹೆಸರು ತಳಸಮುದಾಯಗಳಿಗೆ ಚೈತನ್ಯ ನೀಡುತ್ತದೆ. ಅವರಿಗೆ ಸಾಮಾಜಿಕ, ಆರ್ಥಿಕ ಸಮಾನತೆಯ ಮೂಲಕ ಘನತೆಯ ಬದುಕನ್ನು ನೀಡುತ್ತದೆ. ಅದರಲ್ಲೂ ಬಹು ಮುಖ್ಯವಾಗಿ ಬಾಬಾಸಾಹೇಬರ ನಾಮವನ್ನು ಜಪಿಸುವುದರಿಂದ ನಮಗೆ ಮನುಸ್ಮ$ತಿಯಿಂದ ಮುಕ್ತಿ ದೊರಕುತ್ತದೆ ಎಂದರು.
ಬಾಬಾಸಾಹೇಬರ ಕಾರ್ಯಗಳು ಮತ್ತು ಆದರ್ಶಗಳು ಇಂದು ಹೆಚ್ಚು ಪ್ರಸ್ತುತವಾಗುತ್ತಿರುವುದು ಆರೆಸ್ಸೆಸ್ ಸಿದ್ಧಾಂತಕ್ಕೆ ಮುಳುವಾಗಿದೆ. ಇದು ಮೋದಿ ಮತ್ತವರ ಸಹೋದ್ಯೋಗಿಗಳಿಗೆ ನುಂಗಲಾರದ ತುತ್ತಾಗಿದೆ. ಸಂವಿಧಾನವು ಆರೆಸ್ಸೆಸ್ ಸಿದ್ಧಾಂತಕ್ಕೆ ವಿರುದ್ಧವಾಗಿ ಎಲ್ಲರಿಗೂ ಸಮಾನತೆಯನ್ನು ಪ್ರತಿಪಾದಿಸುತ್ತದೆ ಮತ್ತು ಶೋಷಿತ ವರ್ಗಗಳಿಗೆ ಬದುಕಿನ ಘನತೆ ನೀಡಿದೆ.ಅಂಬೇಡ್ಕರ್ ಅವರಿಂದಾಗಿ ಸಮಾನತೆ ಮತ್ತು ಘನತೆಯ ಬದುಕನ್ನು ಪಡೆದಿರುವ ದೇಶದ ಕೋಟ್ಯಂತರ ಜನ ನಿಮಗೆ ಛೀಮಾರಿ ಹಾಕುತ್ತಿದ್ದಾರೆ ಎಂದು ಕಿಡಿಕಾರಿದರು.
ಮಾಜಿ ಪ್ರಧಾನ ಮಂತ್ರಿ ದೇವೇಗೌಡ ಜಾತಿ ಆಧಾರಿತ ಮೀಸಲಾತಿ ಬದಲಾವಣೆ ಮಾಡಿ ಆರ್ಥಿಕ ಆಧಾರಿತ ಮೀಸಲಾತಿಯನ್ನು ಜಾರಿಗೊಳಿಸಲು ನೀಡಿರುವ ಸಲಹೆ ಶೋಭೆಯಲ್ಲ. ಸಾಮಾಜಿಕ ಮತ್ತು ಐತಿಹಾಸಿಕ ಅವಮಾನ ಹಾಗೂ ದೌರ್ಜನ್ಯಗಳೇ ಮೀಸಲಾತಿಗೆ ಪ್ರಮುಖ ಮಾನದಂಡ ಎಂಬ ಸಂಗತಿಯು ಸ್ಪಷ್ಟವಾಗಿದೆ. ದೇವೇಗೌಡರು ಇದೀಗ ಸಂವಿಧಾನದ ಆಶಯಕ್ಕೆ ವಿರುದ್ಧವಾಗಿ, ಸಾಮಾಜಿಕ ವಾಸ್ತವಕ್ಕೆ ಎದುರಾಗಿ ನಿಂತು ಆರ್ಥಿಕತೆಯ ಮಾನದಂಡದಲ್ಲಿ ಮೀಸಲಾತಿಗೆ ಸಲಹೆ ನೀಡಿರುವುದು ಖಂಡನೀಯ ಎಂದರು. ಪುರಸಭೆ ಸದಸ್ಯರಾದ ಶಂಷುದ್ದೀನ್ಬಾಬು, ಮುಖಂಡರಾದ ಎ.ಬಾಬು, ಎಚ್.ಕೆ.ನಾರಾಯಣಸ್ವಾಮಿ, ಮುನಿರಾಜು, ಎಸ್.ನಾರಾಯಣಗೌಡ, ರಂಗರಾಮಯ್ಯ, ಅರುಣಾಚಲಂ ಮಣಿ, ಕುಪೇಂದ್ರ, ವಿವೇಕಾನಂದ, ಅಣ್ಣದೊರೈ, ರಾಕೇಶ್ ಗೌಡ, ಸಾಧಿಕ್, ಅ.ನಾ. ಹರೀಶ, ನವೀನ್ಗೌಡ ಇದ್ದರು.