ಅಂಬೇಡ್ಕರ್​ಗೆ ಕಾಂಗ್ರೆಸ್​ನಿಂದಲೇ ಅವಮಾನ

lxr vichargoshsti
Published on

ಲಕ್ಷೆ್ಮೕಶ್ವರ: ಕೇಂದ್ರ ಸರ್ಕಾರದಲ್ಲಿ ಸಚಿವರಾಗಿದ್ದ ಡಾ.ಬಿ.ಆರ್. ಅಂಬೇಡ್ಕರ್ ಅವರು, ಸಂವಿಧಾನ ರಚನಾ ಪ್ರಕ್ರಿಯೆ ಕರಡು ಸಿದ್ಧತಾ ಸಮಿತಿಯ ಅಧ್ಯಕ್ಷರೂ ಆಗಿದ್ದ ವೇಳೆ ‘ಕಾಂಗ್ರೆಸ್ ಒಂದು ಸುಡುವ ಮನೆ ಎಚ್ಚರ’ ಎಂಬ ಹೇಳಿಕೆ ಮೂಲಕ ಎಚ್ಚರಿಕೆ ನೀಡಿದ್ದರು. ಕಾಂಗ್ರೆಸ್ ಪಕ್ಷ ಅವರನ್ನು ಅಷ್ಟೊಂದು ಕೆಟ್ಟದಾಗಿ ನಡೆಸಿಕೊಂಡು ಸಾಕಷ್ಟು ನೋವು, ಅವಮಾನ ಮಾಡಿತ್ತು ಎಂದು ಮಾಜಿ ಸಚಿವ ಎನ್. ಮಹೇಶ ಹೇಳಿದರು.

ಪಟ್ಟಣದ ರಂಭಾಪುರಿ ಕಲ್ಯಾಣ ಮಂಟಪದಲ್ಲಿ ಶಿರಹಟ್ಟಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಘಟಕದಿಂದ ಡಾ.ಬಾಬಾ ಸಾಹೇಬ ಅಂಬೇಡ್ಕರ್ ಅವರ 134ನೇ ಜಯಂತಿ ಪ್ರಯುಕ್ತ ಶನಿವಾರ ಹಮ್ಮಿಕೊಂಡಿದ್ದ ‘ಕಾಂಗ್ರೆಸ್ ಒಂದು ಸುಡುವ ಮನೆ ಎಚ್ಚರ’ ವಿಚಾರಗೋಷ್ಠಿ ಉದ್ಘಾಟಿಸಿ ಅವರು ಮಾತನಾಡಿ, ಜನರ ಮೂಲಭೂತ ಹಕ್ಕುಗಳನ್ನು ಕಿತ್ತುಕೊಂಡಿದ್ದು ಕಾಂಗ್ರೆಸ್​ನವರು. ಸಂವಿಧಾನವನ್ನು ತಿದ್ದುವ ಮೂಲಕ ಕಾಂಗ್ರೆಸ್ ಪಕ್ಷವು ಅಂಬೇಡ್ಕರ್ ಅವರನ್ನು ಅವಮಾನಿಸಿದ್ದಾರೆ ಎಂದು ಆರೋಪಿಸಿದರು.

ಕಾಂಗ್ರೆಸ್ ಮೊದಲಿನಿಂದಲೂ ಜನರಿಗೆ ಸುಳ್ಳು ಹೇಳುತ್ತ ಬಂದಿದೆ. ಜೈ ಭೀಮ್ ಎಂದು ಹೇಳುವ ಹಕ್ಕು ಕಾಂಗ್ರೆಸ್​ನವರಿಗೆ ಇಲ್ಲ. ಡಾ.ಬಿ.ಆರ್. ಅಂಬೇಡ್ಕರ್ ಅವರ ವಿಚಾರ- ಹೋರಾಟಕ್ಕೆ ಮನ್ನಣೆ ನೀಡುವ ಉದ್ದೇಶದಿಂದ ಬಿಜೆಪಿಯು ಏ. 14ರಿಂದ ಏ. 25ರ ವರೆಗೆ ವಿಚಾರಗೋಷ್ಠಿ ಯಾತ್ರೆ ಕೈಗೊಂಡಿದೆ ಎಂದು ತಿಳಿಸಿದರು.

ಹಿರಿಯ ಮುಖಂಡ ಡಾ. ಕ್ರಾಂತಿಕಿರಣ, ಪರಿವಾರದ ಪ್ರಮುಖ ವಾದಿರಾಜ, ಶಾಸಕ ಡಾ. ಚಂದ್ರು ಲಮಾಣಿ ಮಾತನಾಡಿದರು. ಬಿಜೆಪಿ ಮಂಡಲ ಅಧ್ಯಕ್ಷ ಸುನೀಲ ಮಹಾಂತಶೆಟ್ಟರ, ರವಿ ದಂಡಿನ, ಬಿಜೆಪಿ ನಗರ ಘಟಕದ ಅಧ್ಯಕ್ಷ ನವೀನ ಬೆಳ್ಳಟ್ಟಿ, ಬಸವರಾಜ ಚಕ್ರಸಾಲಿ, ಗಂಗಾಧರ ಮೆಣಸಿನಕಾಯಿ, ಮೋಹನ ಗುತ್ತೆಮ್ಮನವರ, ಗಿರೀಶ ಚೌಡರಡ್ಡಿ, ಜಾನು ಲಮಾಣಿ, ಇತರರಿದ್ದರು. ಮಂಡಳ ಕಾರ್ಯದರ್ಶಿ ಅನಿಲ ಮುಳಗುಂದ ಹಾಗೂ ಪ್ರವೀಣ ಪಾಟೀಲ ನಿರ್ವಹಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net