

ಡಾ.ಬಿ.ಆರ್.ಅಂಬೇಡ್ಕರ್ ಅವರು ಎಲ್ಲ ವರ್ಗಗಳ ನಾಯಕರಾಗಿದ್ದಾರೆ ಎಂದು ಶಾಸಕ ಜಿ.ಟಿ.ದೇವೇಗೌಡ ಹೇಳಿದರು.
ನಗರದ ರಿಂಗ್ ರಸ್ತೆಯ ಜಯದೇವನಗರದಲ್ಲಿ ಭಾನುವಾರ ಆಯೋಜಿಸಿದ್ದ ಡಾ.ಬಿ.ಆರ್.ಅಂಬೇಡ್ಕರ್ ಅವರ 134ನೇ ಜಯಂತಿ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.
ಕೇಂದ್ರ ಸರ್ಕಾರವು ಅಂಬೇಡ್ಕರ್ ಜಯಂತಿ ದಿನದಂದು ಸರ್ಕಾರಿ ರಜೆಯನ್ನಾಗಿ ಘೋಷಣೆ ಮಾಡಿದ್ದರೆ. ರಾಜ್ಯ ಸರ್ಕಾರ ಸಂವಿಧಾನ ಪೀಠಿಕೆ ಓದುವುದನ್ನು ಕಡ್ಡಾಯ ಮಾಡಿದೆ. ಈ ಬೆಳವಣಿಗೆಗಳಿಂದ ಸಮಾಜದಲ್ಲಿ ಸಾಕಷ್ಟು ಪರಿವರ್ತನೆಯಾಗುತ್ತಿದೆ ಎಂದರು. ಅಮೆರಿಕ, ಇಂಗ್ಲೆಂಡ್, ದಕ್ಷಿಣ ಆಫ್ರಿಕಾ ಸೇರಿದಂತೆ ಹತ್ತಾರು ರಾಷ್ಟ್ರಗಳಿಗೆ ತೆರಳಿ ಅಧ್ಯಯನ ಮಾಡಿ ಜಗತ್ತು ಮೆಚ್ಚುವಂತಹ ಸಂವಿಧಾನವನ್ನು ಬರೆದುಕೊಟ್ಟಿದ್ದಾರೆ. ಎಷ್ಟೇ ಅಪಮಾನವಾದರೂ ಧಿಕ್ಕರಿಸಿ, ತಂದೆ-ತಾಯಿ ಕಳೆದುಕೊಂಡರೂ ಎದೆಗುಂದದೆ ಏಕಾಂಗಿಯಾಗಿಯೇ ಸಂವಿಧಾನವನ್ನು ಬರೆದು ಜಾರಿಗೆ ತರುವಂತೆ ನೋಡಿಕೊಂಡ ಮಹಾನ್ ಚೇತನ ಅಂಬೇಡ್ಕರ್ ಎಂದು ಬಣ್ಣಿಸಿದರು.
ಸ್ವಾತಂತ್ರೃಕ್ಕೂ ಮುನ್ನ ಪದವೀಧರರು, ಶ್ರೀಮಂತರಿಗೆ ಮತದಾನದ ಹಕ್ಕಿತ್ತು. ಆದರೆ, ಸಂವಿಧಾನದಲ್ಲಿ 18 ವರ್ಷ ತುಂಬಿದ ಪ್ರತಿಯೊಬ್ಬರಿಗೂ ಮತದಾನದ ಹಕ್ಕನ್ನು ಕಲ್ಪಿಸಿದರು. ಸಾಮಾನ್ಯ ವ್ಯಕ್ತಿಯಿಂದ ಪ್ರಧಾನಿಗೂ ಒಂದೇ ಮತ ಎನ್ನುವಂತೆ ಮಾಡಿದರು. ಇಂದು ಗ್ರಾಪಂ ಅಧ್ಯಕ್ಷರಿಂದ ಪ್ರಧಾನಿ ಸ್ಥಾನದವರೆಗೂ ಆಯ್ಕೆಯಾಗಲು ಸಂವಿಧಾನವೇ ಕಾರಣ. ಜನಪ್ರತಿನಿಧಿಗಳ ಆಯ್ಕೆಯನ್ನು ಜನಸಾಮಾನ್ಯರ ವಿವೇಚನೆಗೆ ಬಿಡುವುದಕ್ಕೆ ಮತದ ಹಕ್ಕನ್ನು ಕಲ್ಪಿಸಿದರು ಎಂದು ನುಡಿದರು.
ಅಂಬೇಡ್ಕರ್ ಅವರು ತನಗೆ ನೀಡಿದ ಕಿರುಕುಳಕ್ಕೆ ದ್ವೇಷ ಮಾಡಲಿಲ್ಲ. ಎಲ್ಲರ ಮನವೊಲಿಸಿ ಸಂವಿಧಾನ ಜಾರಿಗೆ ಬರುವಂತೆ ನೋಡಿಕೊಂಡರು. ಮಹಿಳೆಯರಿಗೆ ಸಮಾನತೆ ತರಲು ಕಾನೂನು ಮಂತ್ರಿಗೆ ರಾಜೀನಾಮೆ ಕೊಟ್ಟರು. ಕಾರ್ಮಿಕರ ಪರವಾಗಿ ಅವರು ತಂದ ಸುಧಾರಣಾ ಕ್ರಮಗಳಿಂದ ಇಂದು ಕೋಟ್ಯಂತರ ಜನರು ಬದುಕಲು ದಾರಿಯಾಗಿದೆ ಎಂದರು. ಅಂಬೇಡ್ಕರ್ ದಲಿತ ವರ್ಗಕ್ಕೆ ಸೀಮಿತವಾಗಿಲ್ಲ. ಅವರು ಎಲ್ಲ ವರ್ಗಗಳ ಹಿತಚಿಂತಕ. ಸಂವಿಧಾನದಲ್ಲಿ ಎಲ್ಲರಿಗೂ ಸಾಮಾಜಿಕ ನ್ಯಾಯ, ಸಮಾನತೆ ಸಿಗಬೇಕೆಂದು ಪ್ರತಿಪಾದಿಸಿದ್ದನ್ನು ನೆನಪಿಸಿಕೊಳ್ಳಬೇಕು ಎಂದು ತಿಳಿಸಿದರು.
ಪ್ರತಿಮೆ ನಿರ್ಮಾಣ: ಜಯದೇವನಗರಕ್ಕೆ ಎರಡೂವರೆ ಕೋಟಿ ರೂ.ವೆಚ್ಚದಲ್ಲಿ ರಸ್ತೆ, ಒಳಚರಂಡಿ, ಚರಂಡಿ ವ್ಯವಸ್ಥೆ ಮಾಡಲಾಗಿದೆ. ಕುಡಿಯುವ ನೀರಿನ ಸಮಸ್ಯೆ ಪರಿಹರಿಸಲಾಗಿದೆ. ಅಂಬೇಡ್ಕರ್ ಪ್ರತಿಮೆ, ಕಮಾನು ದ್ವಾರ ನಿರ್ಮಾಣ ಮಾಡಬೇಕೆಂದು ಮನವಿ ಮಾಡಿರುವುದನ್ನು ಶೀಘ್ರ ನೆರವೇರಿಸಲಾಗುವುದು ಎಂದು ಭರವಸೆ ನೀಡಿದರು.
ಮುಖಂಡರಾದ ಶಿವಕುಮಾರಸ್ವಾಮಿ, ಸೋಮಯ್ಯ, ರಮೇಶ್, ವಸಂತ, ಕುಮಾರ, ಬಾಬು, ಕೃಷ್ಣಯ್ಯ ಇತರರಿದ್ದರು.