ಅಂಬೇಡ್ಕರ್ ಶತಮಾನದ ಮಹಾಪುರುಷ

CTD (1)
Published on

ಚಿತ್ರದುರ್ಗ: ಸಮ ಸಮಾಜ ನಿರ್ಮಾಣಕ್ಕೆ ಶ್ರಮಿಸಿದ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಚಿಂತನೆಗಳು ಸದಾ ಪ್ರಸ್ತುತವಾಗಿದ್ದು, ಯುವ ಪೀಳಿಗೆ ಜೀವನದಲ್ಲಿ ಅಳವಡಿಸಿಕೊಳ್ಳುವುದು ಅಗತ್ಯ ಎಂದು ಸಂಜೀವಿನಿ ಟ್ರಸ್ಟ್ ಅಧ್ಯಕ್ಷೆ ಡಾ.ಕೆ.ಸೌಮ್ಯಾ ಹೇಳಿದರು.

ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ 132ನೇ ಜನ್ಮ ದಿನಾಚರಣೆ ಅಂಗವಾಗಿ ಸರ್ಕಾರಿ ಕಲಾ ಕಾಲೇಜಿನಲ್ಲಿ ದಲಿತ ವಿದ್ಯಾರ್ಥಿ ಪರಿಷತ್ ಭಾನುವಾರ ಹಮ್ಮಿಕೊಂಡಿದ್ದ ರಾಜ್ಯಮಟ್ಟದ ಸ್ಪರ್ಧಾತ್ಮಕ ಪರೀಕ್ಷೆಗೆ ಚಾಲನೆ ನೀಡಿ ಮಾತನಾಡಿ, ಅಂಬೇಡ್ಕರ್ ಶತಮಾನದ ಮಹಾಪುರುಷ ಎಂದರು.

ಶಿಕ್ಷಣ ಮತ್ತು ಹೋರಾಟದ ಮಹತ್ವ ತಿಳಿಸಿಕೊಟ್ಟ ಅಂಬೇಡ್ಕರ್ ಹಾದಿಯಲ್ಲಿ ಯುವಸಮೂಹ ಸಾಗಬೇಕು ಎಂದು ಸಲಹೆ ನೀಡಿದರು.

ಸಂವಿಧಾನ ಶಿಲ್ಪಿಯ ಚಿಂತನೆಗಳನ್ನು ಸಮಾಜಕ್ಕೆ ತಿಳಿಸುವ ಕೆಲಸ ಹೆಚ್ಚು ಆಗಬೇಕಿದೆ. ಸಾಮಾಜಿಕ ಹರಿಕಾರರು, ಕಾನೂನು ಹೋರಾಟಗಾರರಾಗಿ ಉತ್ತಮ ಸಮಾಜಕ್ಕಾಗಿ ಶ್ರಮಿಸಿದ ಭೀಮರಾವ್, ಮಹಿಳೆಯರು, ಕಾರ್ಮಿಕರಿಗೆ ಹಕ್ಕುಗಳನ್ನು ಕಲ್ಪಿಸಿಕೊಟ್ಟರು. ಸಂವಿಧಾನ ರಚನೆಯಲ್ಲಿ ಎಲ್ಲ ವರ್ಗದ ಜನರಿಗೆ ನ್ಯಾಯ ಕಲ್ಪಿಸಲು ಶ್ರಮಿಸಿದ ಮಹಾನಾಯಕ ಎಂದು ಬಣ್ಣಿಸಿದರು.

ಸಾಮಾಜಿಕ ಸಮಸ್ಯೆಗಳಾದ ಅಸ್ಪಶ್ಯ, ಬಾಲ್ಯ ವಿವಾಹ, ಅಸಮಾನತೆ ಸೇರಿ ಅನೇಕ ಪಿಡುಗಗಳ ನಿವಾರಣೆಗೆ ತಮ್ಮ ಬದುಕು ಮೀಸಲಿಟ್ಟ ಅಂಬೇಡ್ಕರ್ ಕುರಿತು ವಿದ್ಯಾರ್ಥಿಗಳು ಹೆಚ್ಚು ತಿಳಿದುಕೊಳ್ಳಬೇಕು. ಆದ್ದರಿಂದ ಈ ನಿಟ್ಟಿನಲ್ಲಿ ನಾಡಿಗೆ ಕೊಡುಗೆ ನೀಡಿದ ದಾರ್ಶನಿಕರ ಕುರಿತ ಪುಸ್ತಕಗಳನ್ನು ಓದಿದರೆ ಬದುಕಿಗೆ ದಾರಿದೀಪವಾಗಲಿದೆ ಎಂದು ಹೇಳಿದರು.

ಪ್ರೊ.ಎಲ್.ನಾಗರಾಜ್ ಮಾತನಾಡಿ, ಯುವಸಮೂಹ ಬದುಕು ಕಟ್ಟಿಕೊಳ್ಳಲು ಸಾಕಷ್ಟು ಅವಕಾಶ ಕಲ್ಪಿಸಿಕೊಟ್ಟವರಲ್ಲಿ ಅಂಬೇಡ್ಕರ್ ಮುಂಚೂಣಿಯಲ್ಲಿದ್ದಾರೆ. ಪ್ರಸ್ತುತ ವಿದ್ಯಾರ್ಥಿಗಳ ಮುಂದಿನ ಉಜ್ವಲ ಭವಿಷ್ಯಕ್ಕೆ ಶಿಕ್ಷಣವೇ ಪೂರಕ ಎಂದು ಅಭಿಪ್ರಾಯಪಟ್ಟರು.

ಪ್ರೊ.ಬಿ.ಟಿ.ತಿಪ್ಪೇರುದ್ರಸ್ವಾಮಿ ಮಾತನಾಡಿ, ಪ್ರತಿಯೊಬ್ಬರು ಪ್ರಜ್ಞಾವಂತರಾಗಬೇಕು. ವಿದ್ಯಾರ್ಥಿ ಜೀವನದಲ್ಲಿ ಸಮಯ ವ್ಯರ್ಥ ಮಾಡದೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಜ್ಜಾಗಬೇಕು. ದೇಶಕ್ಕೆ ಕೀರ್ತಿ ತರುವ, ಸಾಧಕರಾಗುವುದೇ ಅಂಬೇಡ್ಕರ್ ಅವರಿಗೆ ಸಲ್ಲಿಸುವ ನಿಜವಾದ ಗೌರವ ಎಂದರು.

ಪತ್ರಕರ್ತ ಡಾ.ಸುರೇಂದ್ರನಾಥ್ ಮಾತನಾಡಿ, ಅಂಬೇಡ್ಕರ್ ನೆನಪಲ್ಲಿ ಸ್ಪರ್ಧಾತ್ಮಕ ಪರೀಕ್ಷೆ ಆಯೋಜಿಸಿ ವಿದ್ಯಾರ್ಥಿಗಳಿಗೆ ಸ್ಫೂರ್ತಿ ತುಂಬಲು ಮುಂದಾಗಿರುವ ಪರಿಷತ್ ಕಾರ್ಯ ಮಾದರಿ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಸಮಾಜ ಕಲ್ಯಾಣ ಇಲಾಖೆಯ ಪ್ರಕಾಶ್, ಸಾವಿತ್ರಿ ಬಾಯಿ ಫುಲೆ ಪ್ರಶಸ್ತಿ ಪುರಸ್ಕೃತೆ ಯಶೋಧಮ್ಮ, ಬಸವರಾಜ್, ರವಿಕಿರಣ್, ನಂದೀಶ್, ಮಲ್ಲಿಕಾರ್ಜುನ ಇತರರಿದ್ದರು. ಪರಿಷತ್ ಜಿಲ್ಲಾ ಸಂಚಾಲಕ ಶಾಂತಕುಮಾರ್ ಸ್ವಾಗತಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net