

ಮೈಸೂರು: ಜಗತ್ತಿನ ಅಭಿವೃದ್ಧಿಯೊಂದಿಗೆ ಅಂಬೇಡ್ಕರ್ ಹೆಸರು ತಳುಕು ಹಾಕಿಕೊಂಡಿದ್ದು, ಅವರೊಬ್ಬ ಜಾಗತಿಕ ನಾಯಕ ಎಂದು ಮೈಸೂರು ವಿಶ್ವವಿದ್ಯಾಲಯ ಕಾಲೇಜು ಅಭಿವೃದ್ಧಿ ಮಂಡಳಿ ನಿರ್ದೇಶಕರೂ ಆದ ಬಿ.ಎನ್.ಬಹದ್ದೂರ್ ನಿರ್ವಹಣಾ ವಿಜ್ಞಾನ ಸಂಸ್ಥೆಯ ಪ್ರಾಧ್ಯಾಪಕ ಪ್ರೊ.ಡಿ.ಆನಂದ್ ಹೇಳಿದರು.
ಮೈವಿವಿ ಕಾನೂನು ಶಾಲೆಯಲ್ಲಿ ಗುರುವಾರ ಆಯೋಜಿಸಿದ್ದ ಡಾ.ಬಿ.ಆರ್.ಅಂಬೇಡ್ಕರ್ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಅಂಬೇಡ್ಕರ್ ಅವರನ್ನು ಸಿಮೀತಗೊಳಿಸಿ ಐತಿಹಾಸಿಕ ತಪ್ಪು ಮಾಡಲಾಗಿದೆ. ಎಸ್ಸಿ-ಎಸ್ಟಿ ನಾಯಕ, ದಲಿತರ ನಾಯಕ ಎಂದು ಬಿಂಬಿಸಲಾಗುತ್ತಿದೆ. ಆದರೆ, ಸಂವಿಧಾನ ರಚನಾ ಕಾರ್ಯಕ್ಕಿಂತೂ ಮಿಗಿಲಾದ ವ್ಯಕ್ತಿತ್ವ ಅವರದು. ಆಧುನಿಕ ಜಾಗತಿಕ ಅಭಿವೃದ್ಧಿ ನಕ್ಷೆಯಲ್ಲಿ ಅಂಬೇಡ್ಕರ್ ಪಾತ್ರವಿದೆ. ಸಮಗ್ರ ಅಭಿವೃದ್ಧಿ ಕುರಿತು ಅವರನ್ನು ಬಿಟ್ಟು ಮಾತನಾಡಲು ಸಾಧ್ಯವಿಲ್ಲ ಎಂದರು.
ಅಂಬೇಡ್ಕರ್ ಒಂದು ಜನಾಂಗ, ರಾಷ್ಟ್ರಕ್ಕೆ ಸಿಮೀತವಾದ ವ್ಯಕ್ತಿಯಲ್ಲ. ಜಾಗತಿಕ ಮನ್ನಣೆ ಪಡೆದ ನಾಯಕ. ಅಂಬೇಡ್ಕರ್ ಜನ್ಮದಿನವನ್ನು ವಿಶ್ವ ಸಂಸ್ಥೆಯು ‘ಜ್ಞಾನ ದಿನ’ ಎಂದು ಘೋಷಿಸಿದೆ. ಜ್ಞಾನವಂಚಿತ ಸಮುದಾಯದಿಂದ ಬಂದ ವ್ಯಕ್ತಿ, ಜ್ಞಾನ ಗಳಿಕೆಗಾಗಿ ಜೀವನವನ್ನೇ ಅರ್ಪಣೆ ಮಾಡಿದ ವ್ಯಕ್ತಿಯು ಅವಮಾನ, ಅಸಹನೆ, ಹಿಂಸೆ ಅನುಭವಿಸಿ ಜ್ಞಾನದ ಮೂಲಕ ವಿವಿಧ ಸಮಸ್ಯೆ ಬಗೆಹರಿಸಲು ಸಾಧ್ಯ ಎಂದು ಸಾಧಿಸಿ ತೋರಿಸಿದರು. ಹೀಗಾಗಿ, ಜಾಗತಿಕ ದೃಷ್ಟಿಕೋನದಲ್ಲಿ ದೇಶ ಮೀರಿದ ನಾಯಕ ಅಂಬೇಡ್ಕರ್ ಎಂದರು.
2030ರ ಒಳಗೆ ಎಲ್ಲ ರಾಷ್ಟ್ರಗಳು ಸುಸ್ಥಿರ ಅಭಿವೃದ್ಧಿ ಸಾಧಿಸಲು ಯೋಜನೆಯನ್ನು ವಿಶ್ವಸಂಸ್ಥೆ ರೂಪಿಸಿದೆ. ಜ್ಞಾನದ ಮೂಲಕವೇ ಬಡತನ, ಹಸಿವು, ನಿರುದ್ಯೋಗ, ಅಸಮಾನತೆ ನಿವಾರಣೆ ಮಾಡುವ ಸಂಕಲ್ಪ ಮಾಡಲಾಗಿದೆ. ಈ ಜಾಗತಿಕ ಸುಸ್ಥಿರ ಅಭಿವೃದ್ಧಿ ಯೋಜನೆಗೆ 17 ಉದ್ದೇಶಗಳಿವೆ. ಇದಕ್ಕೆ ಅಂಬೇಡ್ಕರ್ ಅವರೇ ಪ್ರೇರಣೆ. ಈ ದೃಷ್ಟಿಕೋನದಲ್ಲಿ ಅಂಬೇಡ್ಕರ್ ಜಾಗತಿಕ ನಾಯಕ ಎಂದು ಬಣ್ಣಿಸಿದರು.
ಅಮೆರಿಕ, ಇಂಗ್ಲೆಂಡ್, ಕೆನಡಾ ಸೇರಿದಂತೆ ವಿವಿಧ ದೇಶಗಳು ಅಂಬೇಡ್ಕರ್ ಜಯಂತಿಯನ್ನು ಆಚರಣೆ ಮಾಡುತ್ತಿವೆ. ಅವರನ್ನು ಸ್ಮರಣೆ, ನೆನಪು ಮಾಡಿಕೊಳ್ಳಲು ಪ್ರತಿಯೊಬ್ಬರಿಗೂ ಒಂದೊಂದು ಕಾರಣಗಳಿವೆ. ಹೀಗಾಗಿ, ಅಂಬೇಡ್ಕರ್ ಈಗ ಹೆಚ್ಚು ಪ್ರಸ್ತುತ ಎಂದು ಹೇಳಿದರು. ವಕೀಲ ಎಸ್.ಉಮೇಶ್, ಕಾನೂನು ಶಾಲೆಯ ಅಧ್ಯಕ್ಷ ಪ್ರೊ.ಟಿ.ಆರ್.ಮಾರುತಿ ಇದ್ದರು.